ಪ್ರಚಾರಕ್ಕೆ ಧರ್ಮವನ್ನು ಬಳಸದಂತೆ ಚುನಾವಣಾ ಆಯೋಗ ಸೂಚನೆ
ನವದೆಹಲಿ, ಮೇ 22: ಕೇಂದ್ರ ಚುನಾವಣಾ ಆಯೋಗ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದೆ. ತಮ್ಮ ಸ್ಟಾರ್ ಪ್ರಚಾರಕರು ಮಾಡುವ ಭಾಷಣದಲ್ಲಿ ಸಭ್ಯತೆ ಹಾಗೂ ಕಾಳಜಿಯನ್ನು ಕಾಪಾಡುವಂತೆ ನಿರ್ದೇಶನ ನೀಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೇಳಿದೆ. ಚುನಾವಣೆ ಪ್ರಚಾರ ಹೆಸರಿನಲ್ಲಿ ಭಾರತದ ಸಾಮಾಜಿಕ-ಸಾಂಸ್ಕೃತಿಕ ಪರಿಸರವನ್ನು ಕೆಟ್ಟಿಸುವುದು ಬೇಡ. ಜಾತಿ, ಸಮುದಾಯ, ಭಾಷೆ ಮತ್ತು ಧಾರ್ಮಿಕ ವಿಚಾರಗಳನ್ನು ಇಟ್ಟುಕೊಂಡು ಪ್ರಚಾರ ಮಾಡದಂತೆ ಆದೇಶವನ್ನು ನೀಡಿದೆ.
ರಾಜಸ್ಥಾನದ ಬನ್ಸ್ವಾರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಧರ್ಮದ ವಿಚಾರವನ್ನು ಇಟ್ಟುಕೊಂಡು ಭಾಷಣ ಮಾಡಿದ್ದಾರೆ ಎಂದು ವಿಪಕ್ಷಗಳು ಆರೋಪವನ್ನು ಮಾಡಿತ್ತು. ಈ ಆರೋಪದ ಮಾಡಿದ ಒಂದು ತಿಂಗಳ ನಂತರ ಚುನಾವಣಾ ಆಯೋಗ ನಡ್ಡಾ ಅವರಿಗೆ ನೋಟಿಸ್ ನೀಡಿತ್ತು. ಜತೆಗೆ ನಡ್ಡಾ ಅವರ ಸಮರ್ಥನೆಯನ್ನು ತಿರಸ್ಕರಿಸಿತು. ಹಾಗೂ ಪಕ್ಷದ ಸ್ಟಾರ್ ಪ್ರಚಾರಕರು ಧಾರ್ಮಿಕ ಮತ್ತು ಕೋಮುವಾದದ ಪ್ರಚಾರದಿಂದ ದೂರವಿರುವಂತೆ ಹೇಳಿಕೊಂಡಿದೆ.
ಸಮಾಜವನ್ನು ವಿಭಜಿಸುವ ಪ್ರಚಾರ ಭಾಷಣಗಳನ್ನು ನಿಲ್ಲಿಸುವಂತೆ ಚುನಾವಣಾ ಸಮಿತಿಯು ಬಿಜೆಪಿಯನ್ನು ಕೇಳಿದೆ. ಇನ್ನು ಕಾಂಗ್ರೆಸ್ ಬಗ್ಗೆಯೂ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರನ್ನು ನೀಡಿತ್ತು. ಈ ದೂರಿನ ಆಧಾರ ಮೇಲೆ ರಾಹುಲ್ ಗಾಂಧಿ ಅವರು ಧರ್ಮದ ಮೇಲೆ ಮಾಡಿದ ಭಾಷಣಕ್ಕೆ ನೋಟಿಸ್ ನೀಡಿ. ಇದಕ್ಕೆ ಉತ್ತರ ನೀಡುವಂತೆ ಚುನಾವಣಾ ಆಯೋಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಳಿದೆ.
ಇನ್ನು ಎರಡು ಪಕ್ಷಗಳಿಗೂ ಈ ಬಗ್ಗೆ ಪತ್ರವನ್ನು ಬರೆದಿರುವ ಚುನಾವಣಾ ಆಯೋಗ, ಬಿಜೆಪಿಯ ಸ್ಟಾರ್ ಪ್ರಚಾರಕರು ಮಾದರಿ ನೀತಿ ಸಂಹಿತೆಗೆ ವಿರುದ್ಧವಾದ ಹೇಳಿಕೆಗಳನ್ನು ನೀಡದಂತೆ ನೋಡಿಕೊಳ್ಳುವಂತೆ ಆಯೋಗ ಪತ್ರ ಬರೆದಿದೆ. ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ದ್ವೇಷ, ಧರ್ಮ, ಜಾತಿ, ಸಮುದಾಯ ಅಥವಾ ತಮ್ಮ ಪ್ರತಿಸ್ಪರ್ಧಿಯ ವಿರೋಧ ಯಾವುದೇ ದ್ವೇಷದ ಭಾಷಣ ಮಾಡಬಾರದು ಎಂದು ಪತ್ರದಲ್ಲಿ ತಿಳಿಸಿದೆ. ಇನ್ನು ಕಾಂಗ್ರೆಸ್ ಪಕ್ಷ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಕೂಡ ಪತ್ರ ಬರೆದಿದೆ. ಭಾರತೀಯ ಸಮಾಜದ ಸಂಕೀರ್ಣತೆಗಳಿಗೆ ಧಕ್ಕೆ ತರುವ ಪ್ರಚಾರಗಳನ್ನು ಮಾಡದಂತೆ ಪತ್ರದಲ್ಲಿ ತಿಳಿಸಿದೆ. ಸೇನೆ ಹಾಗೂ ದೇಶದ ಭದ್ರತೆಗಳ ಬಗ್ಗೆ ಹಾಗೂ ಅದರ ಕೆಲಸದಲ್ಲಿ ರಾಜಕೀಯಕ್ಕಾಗಿ ಬಳಸಿಕೊಳ್ಳಬಾರದು ಹಾಗೂ ಅವುಗಳ ಬಗ್ಗೆ ಪ್ರಚಾರದಲ್ಲಿ ಮಾತನಾಡಬಾರದು ಎಂದು ಚುನಾವಣಾ ಆಯೋಗ ಕಾಂಗ್ರೆಸ್ಗೆ ಹೇಳಿದೆ.