ಅತೀಕ್ ಅಹ್ಮದ್​​ನ ₹ 50 ಕೋಟಿ ಮೌಲ್ಯದ ಆಸ್ತಿ ಸ್ವಾಧೀನ

ಅತೀಕ್ ಅಹ್ಮದ್​​ನ ₹ 50 ಕೋಟಿ ಮೌಲ್ಯದ ಆಸ್ತಿ ಸ್ವಾಧೀನ

ಲಕ್ನೋ, ಜು. 17: ಹತ್ಯೆಯಾದ ಗ್ಯಾಂಗ್‌ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್‌ಗೆ ಸೇರಿದ ಪ್ರಯಾಗ್‌ರಾಜ್‌ನಲ್ಲಿ ಸುಮಾರು ₹ 50 ಕೋಟಿ ಮೌಲ್ಯದ ಆಸ್ತಿಯನ್ನು ಉತ್ತರ ಪ್ರದೇಶ ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ಅತೀಕ್ ಅಹ್ಮದ್ ಈ ಆಸ್ತಿಯನ್ನು ಅಪರಾಧ ಚಟುವಟಿಕೆಗಳ ಹಣದಿಂದ ಖರೀದಿ ಮಾಡಿದ್ದ ಎಂದು ಹೇಳಲಾಗಿದೆ. ಜಿಲ್ಲಾ ಸರ್ಕಾರಿ ವಕೀಲ (ಅಪರಾಧ) ಗುಲಾಬ್ ಚಂದ್ರ ಅಗ್ರಹರಿ ಅವರು, ಅತೀಕ್ 2.377 ಹೆಕ್ಟೇರ್ ಭೂಮಿಯನ್ನು ಅಪರಾಧ ಸಂಬಂಧಿತ ಚಟುವಟಿಕೆಗಳ ಹಣವನ್ನು ಬಳಸಿಕೊಂಡು ಹೂಬಲಾಲ್ ಎಂಬ ಮೇಸ್ತ್ರಿಯ ಹೆಸರಲ್ಲಿ ನೋಂದಾಯಿಸಿದ್ದಾರೆ ಎಂದು ಹೇಳಿದರು. ಅಗತ್ಯಬಿದ್ದರೆ ಭೂಮಿಯನ್ನು ತನ್ನ ಹೆಸರಿಗೆ ವರ್ಗಾಯಿಸುವುದಾಗಿಯೂ ಅತೀಕ್ ಹೇಳಿಕೊಂಡಿದ್ದಾನೆ ಎಂದು ಪಿಟಿಐ ವರದಿ ಮಾಡಿದೆ. ನವೆಂಬರ್ 2023 ರಲ್ಲಿ ಪೊಲೀಸರು ಈ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ.

ದರೋಡೆಕೋರರ ಕಾಯಿದೆಯ ಸೆಕ್ಷನ್ 14 (1) ಅಡಿಯಲ್ಲಿ ಪೊಲೀಸ್ ಕಮಿಷನರ್ ನ್ಯಾಯಾಲಯವು ಆಸ್ತಿಯನ್ನು ವಶಪಡಿಸಿಕೊಂಡಿದೆ. ಇದಕ್ಕೆ ಪ್ರತಿಕ್ರಿಯಿಸಲು ಮೂರು ತಿಂಗಳ ಕಾಲಾವಕಾಶ ನೀಡಿದೆ ಎಂದು ಅಗ್ರಹರಿ ಹೇಳಿದ್ದಾರೆ. ಆದಾಗ್ಯೂ, ಮಾಲೀಕತ್ವದ ಯಾವುದೇ ಪುರಾವೆಯನ್ನು ಒದಗಿಸಲಾಗಿಲ್ಲ. ನಂತರ ಪೊಲೀಸ್ ಕಮಿಷನರ್ ನ್ಯಾಯಾಲಯವು ಪ್ರಕರಣವನ್ನು ಪ್ರಯಾಗ್‌ರಾಜ್‌ನಲ್ಲಿರುವ ದರೋಡೆಕೋರ ನ್ಯಾಯಾಲಯಕ್ಕೆ ರವಾನಿಸಿತು. ಮಂಗಳವಾರ, ನ್ಯಾಯಾಧೀಶ ವಿನೋದ್ ಕುಮಾರ್ ಚೌರಾಸಿಯಾ ಅವರು ಪೊಲೀಸ್ ಆಯುಕ್ತರ ಕ್ರಮವನ್ನು “ನ್ಯಾಯಯುತ” ಎಂದು ಪರಿಗಣಿಸಿದ್ದು ಆಸ್ತಿಯನ್ನು ಅಧಿಕೃತವಾಗಿ ರಾಜ್ಯ ಸರ್ಕಾರಕ್ಕೆ ವರ್ಗಾಯಿಸಲಾಯಿತು.

ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ಡಿಸಿಪಿ (ನಗರ) ದೀಪಕ್ ಭುಕರ್, ನ್ಯಾಯಾಲಯದ ತೀರ್ಪಿನ ನಂತರ, “ಮೊದಲ ಬಾರಿಗೆ, ಗ್ಯಾಂಗ್ ಸ್ಟರ್ ನ್ಯಾಯಾಲಯವು (ಪ್ರಯಾಗ್ರಾಜ್) ಕಥುಲಾ ಗೌಸ್ಪುರ್ ಗ್ರಾಮದಲ್ಲಿ ಹತ್ಯೆಗೀಡಾದ ದರೋಡೆಕೋರ ಅತೀಕ್ ಅಹ್ಮದ್​​​ನ ಬೇನಾಮಿ ಆಸ್ತಿಯನ್ನು ಜುಲೈ 15ರಂದು ರಾಜ್ಯ ಸರ್ಕಾರಕ್ಕೆ ವಹಿಸಲು ಆದೇಶಿಸಿದೆ. ಪ್ರಯಾಗ್‌ರಾಜ್ ಪೊಲೀಸರು ನವೆಂಬರ್ 6, 2023 ರಂದು ದರೋಡೆಕೋರರ ಕಾಯಿದೆಯಡಿಯಲ್ಲಿ ಸದರ್ ತಹಸಿಲ್‌ನ ಕಥುಲಾ ಗೌಸ್‌ಪುರ ಗ್ರಾಮದಲ್ಲಿ ಅತೀಕ್‌ನ ಕೋಟ್ಯಂತರ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿಯನ್ನು ಜಪ್ತಿ ಮಾಡಿದ್ದರು.

ದರೋಡೆಕೋರರ ಕಾಯಿದೆಯಡಿ ಅತೀಕ್ ವಿರುದ್ಧ ಪ್ರಕರಣದ ತನಿಖೆ ನಡೆಸಿದಾಗ, ಅವರು ಏರ್‌ಪೋರ್ಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೂಬ್ಲಾಲ್ ಹೆಸರಿನಲ್ಲಿದ್ದ ಆಸ್ತಿಯನ್ನು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ಹೂಬ್ಲಾಲ್ ಆಸ್ತಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಬಹಿರಂಗಪಡಿಸಿದ್ದು, ಅತೀಕ್ 2015ರಲ್ಲಿ ಜಮೀನನ್ನು ತನ್ನ ಹೆಸರಿಗೆ ನೋಂದಣಿ ಮಾಡುವಂತೆ ಒತ್ತಾಯಿಸಿದ್ದ. ಉಮೇಶ್ ಪಾಲ್ ಹತ್ಯೆ ಪ್ರಕರಣ ಸೇರಿದಂತೆ 100ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅತೀಕ್ ಮತ್ತು ಆತನ ಸಹೋದರ ಅಶ್ರಫ್ ಅವರನ್ನು ಕಳೆದ ವರ್ಷ ಏಪ್ರಿಲ್ 15 ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು

Previous Post
ಇಮ್ರಾನ್ ಖಾನ್ ಪಕ್ಷ ನಿಷೇಧಿಸಲು ಪಾಕ್ ಸರ್ಕಾರ ನಿರ್ಧಾರ
Next Post
ಅಲ್ಪಸಂಖ್ಯಾತ ಮೋರ್ಚಾ ರದ್ದತಿಗೆ ಸುವೇಂದು ಅಧಿಕಾರಿ ಆಗ್ರಹ

Recent News