ಅದಿರು ಕೊರತೆ ಆಗದಿರಲಿ; NMDC ಅಧಿಕಾರಿಗಳಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನಿರ್ದೇಶನ

ಅದಿರು ಕೊರತೆ ಆಗದಿರಲಿ; NMDC ಅಧಿಕಾರಿಗಳಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನಿರ್ದೇಶನ

ಹೈದರಾಬಾದ್: ಅದಿರು ಪೂರೈಕೆಯಲ್ಲಿ ಸ್ಥಿರತೆಯನ್ನು ಸಮರ್ಥವಾಗಿ ಕಾಪಾಡಿಕೊಳ್ಳಬೇಕು ಹಾಗೂ ಉಕ್ಕು ತಯಾರಿಕಾ ಘಟಕಗಳಿಗೆ ಕಬ್ಬಿಣದ ಅದಿರು ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮದ (NMDC) ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹೈದರಾಬಾದ್ ನಲ್ಲಿ ನಿಗಮದ ಪ್ರಗತಿ ಪರಿಶೀಲನೆ ನಡೆಸಿದ ಕೇಂದ್ರ ಸಚಿವರು, ಬೃಹತ್ ಉಕ್ಕು ತಯಾರಿಕಾ ಘಟಕಗಳಿಗೆ ಅದಿರು ಪೂರೈಕೆ ಮಾಡುವಂತೆಯೇ ಮಧ್ಯಮ, ಸಣ್ಣ, ಅತಿ ಸಣ್ಣ ಉಕ್ಕು ತಯಾರಿಕಾ ಘಟಕಗಳಿಗೂ ಅದಿರು ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅದಿರು ಪೂರೈಕೆಯಲ್ಲಿ ಸಮತೋಲನ

ಎಲ್ಲಾ ಘಟಕಗಳಿಗೆ ಅದಿರು ಪೂರೈಕೆಯಲ್ಲಿ ಸಮತೋಲನ, ಸ್ಥಿರತೆ ಕಾಪಾಡಿಕೊಂಡರೆ ಹೆಚ್ಚೆಚ್ಚು ಉದ್ಯೋಗ ಸೃಷ್ಟಿ ಮಾಡಬಹುದು. ಆ ಮೂಲಕ ಉಕ್ಕು ವಲಯದಿಂದ ಒಟ್ಟು ದೇಶೀಯ ಉತ್ಪನ್ನಕ್ಕೆ (GDP) ದೊಡ್ಡ ಕೊಡುಗೆ ನೀಡಬಹುದು. ಇದುವೇ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಕನಸು ಎಂದು ಅಧಿಕಾರಿಗಳಿಗೆ ಹೇಳಿದರು ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು.

2024ಕ್ಕೆ ವಾರ್ಷಿಕ 100 ದಶಲಕ್ಷ ಟನ್ ಕಬ್ಬಿಣದ ಅದಿರು ಹೊರ ತೆಗೆಯುವ ನಿಗಮದ ಗುರಿಯ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು; ಗಣಿಗಾರಿಕೆಯನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡುವ ಮೂಲಕ ಅದಿರು ಉತ್ಪಾದನೆಯಲ್ಲಿ ಹೆಚ್ಚಳ ಸಾಧಿಸಿ. ವಾರ್ಷಿಕ 300 ದಶಲಕ್ಷ ಟನ್ ಉಕ್ಕು ತಯಾರಿಸುವ ಗುರಿಯನ್ನು ಪ್ರಧಾನಿಗಳು ನೀಡಿದ್ದಾರೆ. ಅದನ್ನು ದುಪ್ಪಟ್ಟು ಮಾಡುವ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ ಕೆಲಸ ಮಾಡಬೇಕು ಎಂದು ಸಚಿವ ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹೆಚ್ಚು ಪ್ರಮಾಣದಲ್ಲಿ ಗಣಿಗಾರಿಕೆಯನ್ನು ಮಾಡಬೇಕು, ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಅರಣ್ಯ ಬೆಳೆಸಬೇಕು ಎಂದು ಅಧಿಕಾರಿಗಳಿಗೆ ನೇರವಾಗಿ ಹೇಳಿದ ಸಚಿವರು; ಗಣಿಗಾರಿಕೆ, ಪೂರೈಕೆ ಹಾಗೂ ಉಕ್ಕು ತಯಾರಿಕೆಯ ಸರಪಳಿಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಬೇಕು ಎಂದರು. ಕಬ್ಬಿಣ, ಚಿನ್ನ, ವಜ್ರದ ಗಣಿಗಾರಿಕೆ ನಡೆಸುತ್ತಿರುವ ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ ಸಾಧನೆಯ ಪಕ್ಷಿನೋಟ ವೀಕ್ಷಿಸಿದ ಸಚಿವರು, ಕೇಂದ್ರ ಸರ್ಕಾರದಿಂದ ಎಲ್ಲಾ ಸಹಕಾರವೂ ಇರುತ್ತದೆ ಎಂದು ಸಚಿವರು ಭರವಸೆ ನೀಡಿದರು.

ಪ್ರಧಾನಿಗಳ ಮಾರ್ಗದರ್ಶನದೊಂದಿಗೆ ಅವರೇ ನಿಗದಿ ಮಾಡಿರುವ ಗುರಿಯನ್ನು ಮುಟ್ಟಲು ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಅವರು ಹೇಳಿದರು. ನಿಗಮದ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಅಮಿತ್ವ ಮುಖರ್ಜಿ ಅವರು ನಿಗಮದ ಕಾರ್ಯ ಚಟುವಟಿಕೆ ಹಾಗೂ ಇನ್ನಿತರೆ ವಿವರಗಳ ಬಗ್ಗೆ ಸಚಿವರಿಗೆ ಪ್ರಾತ್ಯಕ್ಷಿಕೆ ನೀಡಿದರು. ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯದ ರಾಜ್ಯ ಸಚಿವರಾದ ಭೂಪತಿರಾಜು ಶ್ರೀನಿವಾಸ ವರ್ಮ ಅವರು ಸೇರಿ ನಿಗಮದ ವಿವಿಧ ನಿರ್ದೇಶಕರು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

Previous Post
ಜೂನ್ 25 ‘ಸಂವಿಧಾನ್ ಹತ್ಯಾ ದಿವಸ್’ ಹೆಸರಿನಲ್ಲಿ ಆಚರಣೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ
Next Post
HMT ಪುನಶ್ಚೇತನಕ್ಕೆ ಚಿಂತನೆ – ಹೆಚ್‌ಡಿ ಕುಮಾರಸ್ವಾಮಿ

Recent News