ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ವೇಣುಗೋಪಾಲ್

ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ವೇಣುಗೋಪಾಲ್

ನವದೆಹಲಿ, ಮೇ 6: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು ‘ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಂದ ಬರುವ ಯಾವುದೇ ವಿದ್ಯಾರ್ಥಿಯು ಶಿಕ್ಷಣ ಸಂಸ್ಥೆಗಳಲ್ಲಿ ರೋಹಿತ್‌ನಂತಹ ಪರಿಸ್ಥಿತಿಯನ್ನು ಎದುರಿಸಬಾರದು ಎಂದು ವೇಣುಗೋಪಾಲ್ ಹೇಳಿದ್ದಾರೆ.

‘ರೋಹಿತ್ ವೇಮುಲಾ ದಲಿತನಲ್ಲ’ ಎಂದು ಕಾರಣ ನೀಡಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಿರುವ ತೆಲಂಗಾಣ ಪೊಲೀಸರು ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ. ಈ ಬೆನ್ನಲೇ ಸಿಎಂ ರೇವಂತ್ ರೆಡ್ಡಿಯನ್ನು ಭೇಟಿಯಾದ ರೋಹಿತ್ ತಾಯಿ ಮರು ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದಲ್ಲಿ ಭಿನ್ನಾಭಿಪ್ರಾಯಗಳಿದ್ದು, ತೆಲಂಗಾಣದ ಕಾಂಗ್ರೆಸ್ ಸರ್ಕಾರ ಕುಟುಂಬಕ್ಕೆ ನ್ಯಾಯ ಒದಗಿಸಲಿದೆ ಎಂದು ವೇಣುಗೋಪಾಲ್ ಹೇಳಿದ್ದಾರೆ.

ರೋಹಿತ್ ಸಾವು ಬಿಜೆಪಿಯ ದಲಿತ ವಿರೋಧಿ ಮನಸ್ಥಿತಿಯನ್ನು ಬಹಿರಂಗಪಡಿಸಿದೆ. ಇದೊಂದು ಘೋರ ದೌರ್ಜನ್ಯವಾಗಿದೆ. ಈ ಸಂಕಷ್ಟದ ಸಮಯದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ರೋಹಿತ್ ವೇಮುಲಾ ಅವರ ಕುಟುಂಬದ ಜೊತೆ ನಿಂತಿದೆ. ತೆಲಂಗಾಣ ಪೊಲೀಸರು ತಿಳಿಸಿರುವಂತೆ ರೋಹಿತ್ ಪ್ರಕರಣವನ್ನು ಮುಕ್ತಾಯಗೊಳಿಸಿದ ವರದಿಯು ಜೂನ್ 2023ರಲ್ಲಿ ಸಿದ್ಧಪಡಿಸಿದ್ದಾಗಿದೆ ಎಂದು ವೇಣುಗೋಪಾಲ್ ತಿಳಿಸಿದ್ದಾರೆ. ಈ ಹಿಂದೆ ನಡೆಸಲಾದ ತನಿಖೆಯಲ್ಲಿ ಹಲವು ವ್ಯತ್ಯಾಸಗಳಿವೆ. ತೆಲಂಗಾಣದ ಕಾಂಗ್ರೆಸ್ ಸರ್ಕಾರ ರೋಹಿತ್ ಕುಟುಂಬಕ್ಕೆ ಖಚಿತವಾಗಿ ನ್ಯಾಯ ದೊರಕಿಸಿ ಕೊಡಲಿದೆ ಎಂದಿದ್ದಾರೆ.

Previous Post
ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ
Next Post
ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿ ಗುಂಡಿಗೆ ಬಲಿಯಾಗಿದ್ದು: ವಡೆಟ್ಟಿವಾರ್

Recent News