ಅಧಿಕಾರಿಗಳು ಮಾತ್ರವಲ್ಲ ಲೆ.ಗರ್ವನರ್ ಆರೋಪಿಯಾಗಬೇಕಾದಿತು ಸಿಬಿಐ ವಾದಕ್ಕೆ ಕೇಜ್ರಿವಾಲ್ ವಕೀಲರ ಪ್ರತಿವಾದ

ಅಧಿಕಾರಿಗಳು ಮಾತ್ರವಲ್ಲ ಲೆ.ಗರ್ವನರ್ ಆರೋಪಿಯಾಗಬೇಕಾದಿತು ಸಿಬಿಐ ವಾದಕ್ಕೆ ಕೇಜ್ರಿವಾಲ್ ವಕೀಲರ ಪ್ರತಿವಾದ

ನವದೆಹಲಿ : ವಿವಾದಿತ ದೆಹಲಿ ಅಬಕಾರಿ ನೀತಿಗೆ ಅಂದಿನ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹದಿನೈದು ಮಂದಿ ಸಹಿ ಹಾಕಿದ್ದರು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೈಕೋರ್ಟ್‌ಗೆ ತಿಳಿಸಿದ್ದಾರೆ‌.

ಕೇಜ್ರಿವಾಲ್‌ ಅವರಿಗೆ ಹಗರಣದ ಬಗ್ಗೆ ಅರಿವಿತ್ತು, ಅವರೇ ಹಗರಣದ ಸೂತ್ರಧಾರ ಎಂಬ ಸಿಬಿಐ ಪರ ವಕೀಲ ಡಿ ಪಿ ಸಿಂಗ್‌ ವಾದಕ್ಕೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್‌ ಪರ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಕೇಜ್ರಿವಾಲ್ ಅವರನ್ನು ಬಂಧಿಸುವ ಸಿಬಿಐ ತರ್ಕವನ್ನು ಮನ್ನಿಸಿದರೆ, ಅಬಕಾರಿ ನೀತಿ ಪ್ರಕರಣದಲ್ಲಿ ಸುಮಾರು 50 ಅಧಿಕಾರಿಗಳನ್ನಷ್ಟೇ ಅಲ್ಲದೆ ದೆಹಲಿ ಲೆ. ಗವರ್ನರ್ ಅವರನ್ನು ಕೂಡ ಆರೋಪಿಗಳನ್ನಾಗಿ ಮಾಡಬೇಕಾದೀತು ಎಂದು ವಾದ ಮಂಡಿಸಿದ್ದಾರೆ.

ವಾದ-ಪ್ರತಿವಾದಗಳನ್ನು ಆಲಿಸಿರುವ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ತೀರ್ಪು ಕಾಯ್ದಿರಿಸಿದ್ದಾರೆ. ಇಡಿ ತನಿಖೆ ನಡೆಸುತ್ತಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಕೇಜ್ರಿವಾಲ್ ಅವರನ್ನು ಜೂನ್ 26 ರಂದು ಸಿಬಿಐ ಬಂಧಿಸಿತ್ತು.
ಅದರ ಬೆನ್ನಲ್ಲೇ ಇಡಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನು ನೀಡಿತಾದರೂ, ಸಿಬಿಐ ಪ್ರಕರಣದಲ್ಲಿ ಇನ್ನೂ ಜಾಮೀನು ದೊರೆಯದೇ ಇರುವುದರಿಂದ ಕೇಜ್ರಿವಾಲ್ ಸೆರೆವಾಸ ಅನುಭವಿಸುತ್ತಿದ್ದಾರೆ.

ಜಾಮೀನು ಕೋರಿ ಹಾಗೂ ಸಿಬಿಐ ಬಂಧನ ಪ್ರಶ್ನಿಸಿ, ಎರಡು ಪ್ರತ್ಯೇಕ ಅರ್ಜಿಗಳನ್ನು ಕೇಜ್ರಿವಾಲ್‌ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸೋಮವಾರ (ಜು.29) ನಡೆದಿದ್ದು ಬಂಧನ ಪ್ರಶ್ನಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಈಗಾಗಲೇ ತೀರ್ಪು ಕಾಯ್ದಿರಿಸಲಾಗಿದೆ

Previous Post
ಆಗಸ್ಟ್ 2 ಮತ್ತು 3 ರಂದು ರಾಜ್ಯಪಾಲರ ಸಮ್ಮೇಳನ
Next Post
ವಯನಾಡು ಭೂಕುಸಿತ: ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಇಬ್ಬರು IAS ಅಧಿಕಾರಿಗಳನ್ನು ನಿಯೋಜಿಸಿದ ಸಿಎಂ ಸಿದ್ದರಾಮಯ್ಯ

Recent News