ಅಭಿಮನ್ಯುವಿಗೆ ಮಾಡಿದಂತೆ ಇಡೀ ಭಾರತಕ್ಕೆ ಚಕ್ರವ್ಯೂಹ ರಚಿಸಿದ್ದಾರೆ ಲೋಕಸಭೆಯಲ್ಲಿ ʻಕುರುಕ್ಷೇತ್ರʼ ನೆನಪಿಸಿದ ರಾಹುಲ್‌ ಗಾಂಧಿ

ಅಭಿಮನ್ಯುವಿಗೆ ಮಾಡಿದಂತೆ ಇಡೀ ಭಾರತಕ್ಕೆ ಚಕ್ರವ್ಯೂಹ ರಚಿಸಿದ್ದಾರೆ ಲೋಕಸಭೆಯಲ್ಲಿ ʻಕುರುಕ್ಷೇತ್ರʼ ನೆನಪಿಸಿದ ರಾಹುಲ್‌ ಗಾಂಧಿ

ನವದೆಹಲಿ: 21ನೇ ಶತಮಾನದಲ್ಲಿ ಹೊಸ ಚಕ್ರವ್ಯೂಹ ರೂಪುಗೊಂಡಿದೆ. ಅದು ಕಮಲದ ರೂಪದಲ್ಲಿಯೇ ಇದೆ. ಅಂದು ಅಭಿಮನ್ಯುವಿಗೆ ಏನು ಮಾಡಲಾಗಿತ್ತೋ, ಅದು ಈಗ ಭಾರತಕ್ಕೂ ಮಾಡಲಾಗುತ್ತಿದೆ. ಇಡೀ ಭಾರತಕ್ಕೆ ಚಕ್ರವ್ಯೂಹ ರಚಿಸಿ ದೇಶವನ್ನು ಧ್ವಂಸಗೊಳಿಸಲಿದ್ದಾರೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಆತಂಕ ಹೊರ ಹಾಕಿದ್ದಾರೆ.

ಲೋಕಸಭೆಯಲ್ಲಿಂದು 2024-25ನೇ ಸಾಲಿನ ಬಜೆಟ್‌ ಮೇಲಿನ ಚರ್ಚೆ ಮೇಲೆ ರಾಹುಲ್‌ ಗಾಂಧಿ ಮಾತನಾಡಿದರು. ಭಾರತದಲ್ಲಿ ಭಯದ ವಾತಾವರಣವಿದೆ. ಆ ಭಯವು ನಮ್ಮ ದೇಶದ ಪ್ರತಿಯೊಂದು ಅಂಶವನ್ನು ವ್ಯಾಪಿಸಿದೆ. ಅಗ್ನೀವೀರರಿಗೆ ಪಿಂಚಣಿಗಾಗಿ ಒಂದು ರೂಪಾಯಿ ಬಜೆಟ್‌ನಲ್ಲಿ ಇಟ್ಟಿಲ್ಲ. ರೈತರಿಗೆ ಬೆಂಬಲ ಬೆಲೆ ಖಾತ್ರಿಪಡಿಸಿಲ್ಲ ಎಂದು ಹೇಳಿದ್ದಾರೆ.

ಕುರುಕ್ಷೇತ್ರದಲ್ಲಿ ಅಭಿಮನ್ಯುವನ್ನು ಆರು ಜನ ಚಕ್ರವ್ಯೂಹದಲ್ಲಿ ಸಿಲುಕಿಸಿ ಕೊಂದಿದ್ದರು. ನಾನು ಈ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಚಕ್ರವ್ಯೂಹಕ್ಕೆ ʻಪದ್ಮವ್ಯೂಹʼ ಎಂಬ ಹೆಸರೂ ಇದೆ. ಪದ್ಮವ್ಯೂಹ ಅಂದರೆ ಕಮಲ ರಚನೆ ಎಂಬುದು ನನಗೆ ತಿಳಿಯಿತು. ಚಕ್ರವ್ಯೂಹ ಕಮಲದ ಆಕಾರದಲ್ಲಿದೆ. ಅಂದ್ರೆ 21ನೇ ಶತಮಾನದಲ್ಲಿ, ಹೊಸ ಚಕ್ರವ್ಯೂಹ ರೂಪುಗೊಂಡಿದೆ. ಈ ಹೊಸ ಚಕ್ರವ್ಯೂಹ ಸಹ ಕಮಲದ ರೂಪದಲ್ಲಿಯೇ ಇದೆ. ಪ್ರಧಾನ ಮಂತ್ರಿ ತಮ್ಮ ಎದೆಯ ಮೇಲೆ ಅದರ ಚಿಹ್ನೆಯನ್ನು ಸಹ ಧರಿಸುತ್ತಾರೆ. ಅಭಿಮನ್ಯುವಿಗೆ ಏನು ಮಾಡಲಾಗಿತ್ತೋ, ಅದು ಈಗ ಭಾರತಕ್ಕೂ ಮಾಡಲಾಗ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಯುವಕರು, ರೈತರು, ಮಹಿಳೆಯರು, ಸಣ್ಣ ಮತ್ತು ಮಧ್ಯಮ ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂದೂ ಸಹ ಚಕ್ರವ್ಯೂಹ ಇದೆ, ಕೇಂದ್ರದ ಚಕ್ರವ್ಯೂದಲ್ಲಿ ಆರು ಜನರಿದ್ದಾರೆ. ಇಂದಿಗೂ ಸಹ ಈ ಆರು ಜನರು ದೇಶವನ್ನ ನಿಯಂತ್ರಣ ಮಾಡ್ತಾ ಇದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ ಮತ್ತು ಅದಾನಿ ಈ 6 ಜನ ಇಂದಿನ ಚಕ್ರವ್ಯೂದಲ್ಲಿರುವವರು ಎಂದು ಲೇವಡಿ ಮಾಡಿದರು.

ಭಾರತವನ್ನು ವಶಪಡಿಸಿಕೊಂಡ ಚಕ್ರವ್ಯೂಹದ ಹಿಂದೆ 3 ಶಕ್ತಿಗಳಿವೆ. ಏಕಸ್ವಾಮ್ಯ ಬಂಡವಾಳದ ಕಲ್ಪನೆ. ಅಂದ್ರೆ ದೇಶದಲ್ಲಿರುವ ಕೇವಲ ಇಬ್ಬರಿಗೆ ಮಾತ್ರ ಸಂಪೂರ್ಣ ಭಾರತೀಯ ಸಂಪತ್ತನ್ನು ಹೊಂದಲು ಅವಕಾಶ ನೀಡಬೇಕು. ಎರಡನೇ ಶಕ್ತಿ ಈ ರಾಷ್ಟ್ರದ ಸಂಸ್ಥೆಗಳಾಗಿರುವ ಸಿಬಿಐ, ಇಡಿ ಹಾಗೂ ಐಟಿ ತನಿಖಾ ಏಜೆನ್ಸಿಗಳು ಹಾಗೂ 3ನೇ ಶಕ್ತಿಯಾದ ರಾಜಕೀಯ ಕಾರ್ಯನಿರ್ವಾಹಕ ಸಾರಾಂಶ. ಈ ಅಂಶಗಳನ್ನು ಚಕ್ರವ್ಯೂಹ ಒಳಗೊಂಡಿದೆ. ಈ ಚಕ್ರವ್ಯೂಹವು ಕೆಲವರ ಹೃದಯಭಾಗದಲ್ಲಿದೆ. ಈ ವ್ಯೂಹದ ಮೂಲಕ ದೇಶವನ್ನು ಧ್ವಂಸಗೊಳಿಸಲಿದ್ದಾರೆ ಎಂದು ಆತಂಕ ಹೊರಹಾಕಿದರು. ರಾಹುಲ್‌ ಗಾಂಧಿ ಅವರ ಭಾಷಣಕ್ಕೆ ಆಡಳಿತ ಪಕ್ಷದಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಮುಂದುವರಿದು ಮಾತನಾಡಿದ ರಾಗಾ, ಈ ಬಾರಿಯ ಬಜೆಟ್ ಚಕ್ರವ್ಯೂಹದ ಶಕ್ತಿಯನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸಿದ್ದೆ. ಈ ದೇಶದ ರೈತರಿಗೆ ಸಹಾಯ ಮಾಡುತ್ತದೆ. ಈ ದೇಶದ ಯುವಕರಿಗೆ ಸಹಾಯ ಮಾಡುತ್ತದೆ, ಈ ದೇಶದ ಕಾರ್ಮಿಕರು, ಸಣ್ಣ ಉದ್ಯಮಗಳಿಗೆ ಸಹಾಯ ಮಾಡುತ್ತದೆ ಎಂಬುದು ನನ್ನ ನಿರೀಕ್ಷೆಯಾಗಿತ್ತು. ಆದರೆ ಚಕ್ರವ್ಯೂಹದ ಚೌಕಟ್ಟನ್ನು ಬಲಪಡಿಸುವುದು ಈ ಬಜೆಟ್‌ನ ಏಕೈಕ ಗುರಿಯಾಗಿದೆ. ಪ್ರಜಾಪ್ರಭುತ್ವದ ರಚನೆ ಮತ್ತು ಕೆಲ ರಾಜ್ಯ ಹಾಗೂ ಏಜೆನ್ಸಿಗಳನ್ನು ನಾಶಪಡಿಸುವ ರಾಜಕೀಯ ದುರುದ್ದೇಶ ಇದರಲ್ಲಿದೆ ಎಂದು ಕೆಂಡಕಾರಿದರು.

Previous Post
ಬಿಹಾರದಲ್ಲಿ ಮೀಸಲಾತಿ ಹೆಚ್ಚಿಸಿದ್ದ ನಿತೀಶ್‌ಗೆ ಹಿನ್ನಡೆ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡದ ಸುಪ್ರೀಂ
Next Post
ಇಡಿಗೆ ಹಿನ್ನಡೆ ; ಸೂರೇನ್ ಜಾಮೀನು ರದ್ದುಗೊಳಿಸಲು ನಿರಾಕರಿಸಿದ ಸುಪ್ರೀಂ

Recent News