ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ

ಲಕ್ನೋ, ಮೇ 6: ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು, ಗಲಾಟೆ ಸೃಷ್ಟಿಸಿ ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಶುಭಂ ಸಿಂಗ್ ಅವರ ಮೇಲೂ ಅಪರಿಚಿತರು ಹಲ್ಲೆ ನಡೆಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ “ಉತ್ತರ ಪ್ರದೇಶದ ಅಮೇಥಿಯಲ್ಲಿ ಸ್ಮೃತಿ ಇರಾನಿ ಮತ್ತು ಬಿಜೆಪಿ ಕಾರ್ಯಕರ್ತರು ತೀವ್ರ ಭಯಭೀತರಾಗಿದ್ದಾರೆ. ಕಣ್ಣ ಮುಂದೆ ಕಾಣುತ್ತಿರುವ ಸೋಲಿನಿಂದ ಹತಾಶರಾಗಿರುವ ಬಿಜೆಪಿ ಗೂಂಡಾಗಳು ಕಟ್ಟಿಗೆ ಹಿಡಿದುಕೊಂಡು ಅಮೇಥಿಯ ಕಾಂಗ್ರೆಸ್ ಕಚೇರಿಯ ಹೊರಗೆ ನಿಲ್ಲಿಸಿದ್ದ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಮೇಥಿಯ ಜನರ ಮೇಲೆ ಮಾರಣಾಂತಿಕ ಹಲ್ಲೆ ಕೂಡ ನಡೆದಿದೆ. ಈ ದಾಳಿಯಲ್ಲಿ ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಘಟನೆಯಲ್ಲಿ ಸ್ಥಳೀಯರ ವಾಹನಗಳಿಗೂ ಹಾನಿಯಾಗಿದೆ. ಈ ಇಡೀ ಘಟನೆಯಲ್ಲಿ ಪೊಲೀಸ್ ಆಡಳಿತ ಮೂಕ ಪ್ರೇಕ್ಷಕರಂತೆ ನಿಂತಿತ್ತು. ಅಮೇಥಿಯಲ್ಲಿ ಬಿಜೆಪಿ ಹೀನಾಯವಾಗಿ ಸೋಲಲಿದೆ ಎಂಬುವುದಕ್ಕೆ ಈ ಘಟನೆಯೇ ಸಾಕ್ಷಿ” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದೆ. ಘಟನೆಯ ಮಾಹಿತಿ ಪಡೆದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಸಿಂಘಾಲ್ ಪಕ್ಷದ ಕಚೇರಿಗೆ ಧಾವಿಸಿದ್ದಾರೆ. ಘಟನೆ ಖಂಡಿಸಿ ರಾತ್ರಿಯೇ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ನಗರ ಪೊಲೀಸ್ ಆಯುಕ್ತ ಮಯಾಂಕ್ ದ್ವಿವೇದಿ ಪ್ರತಿಭಟನಾ ನಿರತ ಕಾಂಗ್ರೆಸ್ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಸದ್ಯ ತನಿಖೆ ನಡೆಯುತ್ತಿದೆ ಎಂದು ಅಮೇಥಿ ಎಸ್ಪಿ ಎಳಮಾರನ್ ತಿಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಜಿಲ್ಲಾ ಯುವ ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಭಾರತೀಯ ಜನತಾ ಪಕ್ಷ (ಬಿಜೆಪಿ) ದ ಇಬ್ಬರು ಜಿಲ್ಲಾ ಮಟ್ಟದ ಮುಖಂಡರು ಮತ್ತು ಇತರ ಎಂಟು ಮಂದಿ ಅಪರಿಚಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿ ಕಿಸಾನ್ ಮೋರ್ಚಾದ ಜಿಲ್ಲಾಧ್ಯಕ್ಷ ಸತ್ಯೇಂದ್ರ ಪ್ರತಾಪ್ ಸಿಂಗ್, ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಮುಖ್ಯಸ್ಥ ವಿಶು ಮಿಶ್ರಾ ಮತ್ತು ಇತರ ಎಂಟು ಜನರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಿಂಗ್ ತಮ್ಮ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.

ಸತ್ಯೇಂದ್ರ ಪ್ರತಾಪ್ ಸಿಂಗ್, ವಿಶು ಮಿಶ್ರಾ ಮತ್ತು ಎಂಟು ಅಪರಿಚಿತರ ವಿರುದ್ಧ ಸೆಕ್ಷನ್ 147, 323, 504 ಮತ್ತು 506 ರ ಅಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಆರೋಪಗಳು ಆಧಾರ ರಹಿತ ಮತ್ತು ರಾಜಕೀಯ ಪ್ರೇರಿತ ಎಂದು ಬಿಜೆಪಿ ಜಿಲ್ಲಾ ಘಟಕದ ಮುಖ್ಯಸ್ಥ ದುರ್ಗೇಶ್ ತ್ರಿಪಾಠಿ ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ ಮತ್ತು ನಿರಾಶೆಗೊಂಡಿದ್ದಾರೆ. ಕ್ಷುಲ್ಲಕ ರಾಜಕೀಯ ಹೊರತುಪಡಿಸಿ ಅವರಿಗೆ ಏನೂ ಉಳಿದಿಲ್ಲ ಎಂದಿದ್ದಾರೆ.

Previous Post
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ, ನಿರುದ್ಯೋಗಿಗಳ ಖಾತೆಗೂ ಒಂದು ಲಕ್ಷ ಜಮೆ:ಸಿ.ಎಂ
Next Post
ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ವೇಣುಗೋಪಾಲ್

Recent News