ಅಯೋಧ್ಯೆ ಬಳಿಕ ಬದ್ರಿನಾಥದಲ್ಲೂ ಬಿಜೆಪಿಗೆ ಸೋಲು
ನವದೆಹಲಿ, ಜು. 13: ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಶನಿವಾರ ನಡೆದು ಇಂಡಿಯಾ ಮೈತ್ರಿಕೂಟದ ಪಕ್ಷಗಳ ಅಭ್ಯರ್ಥಿಗಳು 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆ ಉಂಟುಮಾಡಿದೆ. ಬಹಳ ಮುಖ್ಯವಾಗಿ ಉತ್ತರಾಖಂಡದ ಬದ್ರಿನಾಥ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿರುವುದು ಗಮನ ಸೆಳೆದಿದೆ. ಬದ್ರಿನಾಥದಲ್ಲಿ ಕಾಂಗ್ರೆಸ್‌ನ ಲಖಪತ್ ಸಿಂಗ್ ಬುಟೋಲಾ ಅವರು ಬಿಜೆಪಿ ಅಭ್ಯರ್ಥಿ ರಾಜೇಂದ್ರ ಸಿಂಗ್ ಭಂಡಾರಿ ವಿರುದ್ದ 5,224 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಅಯೋಧ್ಯೆ ಬಳಿಕ ಬದ್ರಿನಾಥದಲ್ಲೂ ಸೋಲುಂಟಾಗಿರುವುದು ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.
ಜುಲೈ 10ರಂದು ಬದ್ರಿನಾಥ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಒಟ್ಟು 54, 228 ಮತದಾರರ ಪೈಕಿ 28,161 ಮತಗಳು ಕಾಂಗ್ರೆಸ್ ಅಭ್ಯರ್ಥಿ ಪಡೆದಿದ್ದು, 22,937 ಮತಗಳು ಬಿಜೆಪಿ ಅಭ್ಯರ್ಥಿ ಪರ ಬಿದ್ದಿವೆ. ಬಿಜೆಪಿ ಅಭ್ಯರ್ಥಿ ಭಂಡಾರಿ ಅವರು 2022ರಲ್ಲಿ ಪಡೆದಿರುವುದಕ್ಕಿಂತ 10,000 ಕಡಿಮೆ ಮತಗಳನ್ನು ಈ ಬಾರಿ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ನವಲ್ ಕಿಶೋಲ್ ಖಾಲಿ 1, 813 ಮತ್ತು ಸೈನಿಕ್ ಸಮಾಜ್ ಪಕ್ಷದ ಹಿಮ್ಮತ್ ಸಿಂಗ್ 494 ಮತಗಳನ್ನು ಪಡೆದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆ ರಾಮಮಂದಿರ ಇರುವ ಪೈಝಾಬಾದ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಮುಂದೆ ಬಿಜೆಪಿ ಅಭ್ಯರ್ಥಿ ಸೋಲನುಭವಿಸಿದ್ದರು. ಇದೀಗ ವಿಧಾನಸಭಾ ಚುನಾವಣೆಯಲ್ಲಿ ಹಿಂದೂಗಳ ಮತ್ತೊಂದು ಪ್ರಮುಖ ಶ್ರದ್ದಾ ಕೇಂದ್ರ ಬದ್ರಿನಾಥದಲ್ಲೂ ಬಿಜೆಪಿಗೆ ಸೋಲಾಗಿದೆ. ಬದ್ರಿನಾಥದಲ್ಲಿ ಬಿಜೆಪಿ ಸೋಲನ್ನು ಹಿಂದುತ್ವ ರಾಜಕೀಯದ ಸೋಲು ಎಂದು ಅನೇಕರು ಬಣ್ಣಿಸಿದ್ದಾರೆ. ಬಿಜೆಪಿಯ ಕೋಮುವಾದ ರಾಜಕೀಯವನ್ನು ಜನರು ತಿರಸ್ಕರಿಸುತ್ತಿದ್ದಾರೆ ಎಂದಿದ್ದಾರೆ.