ಅರವಿಂದ್ ಕೇಜ್ರಿವಾಲ್ ಗೆ ಮಧ್ಯಂತರ ಜಾಮೀನು

ಅರವಿಂದ್ ಕೇಜ್ರಿವಾಲ್ ಗೆ ಮಧ್ಯಂತರ ಜಾಮೀನು

ನವದೆಹಲಿ : ಹೊಸ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಇಡಿ ದಾಖಲಿಸಿದ ಪ್ರಕರಣದಲ್ಲಿ ಮಧ್ಯಂತರ ಜಾಮೀನು ದೊರಕಿದ್ದು ಸಿಬಿಐ ಪ್ರಕರಣ ಬಾಕಿ ಇರುವ ಹಿನ್ನಲೆ ಕೇಜ್ರಿವಾಲ್‌ಗೆ ಸದ್ಯ ಬಿಡುಗಡೆ ಭಾಗ್ಯವಿಲ್ಲ.

ಇಡಿ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ.ಸಂಜೀವ್ ಖನ್ನಾ ನೇತೃತ್ವದ ದ್ವಿ ಸದಸ್ಯ ಪೀಠ ಶುಕ್ರವಾರ ಆದೇಶ ನೀಡಿತು. ಮಧ್ಯಮಂತರ ಜಾಮೀನು ನೀಡಿದ ಪೀಠ, ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯಲ್ಲಿ ಪಿಎಂಎಲ್‌ಎ ಸೆಕ್ಷನ್ 19 ರ ಅಡಿಯಲ್ಲಿ “ಬಂಧನದ ಅಗತ್ಯತೆ” ಕುರಿತ ಕಾನೂನು ಪ್ರಶ್ನೆಯನ್ನು ಎತ್ತಿರುವ ಹಿನ್ನಲೆ ಇದನ್ನು ವಿಸ್ತೃತ ಪೀಠವು ಪರಿಗಣಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು.

ಬಂಧನದ ಪ್ರಶ್ನಿಸಿರುವುದು ಜೀವನದ ಹಕ್ಕಿಗೆ ಸಂಬಂಧಿಸಿದೆ ಇದನ್ನು ನಾವು ದೊಡ್ಡ ಪೀಠಕ್ಕೆ ವರ್ಗಾಯಿಸುತ್ತೇವೆ ಮಧ್ಯಂತರ ಜಾಮೀನಿನ ಮೇಲೆ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡಲು ನಾವು ನಿರ್ದೇಶಿಸುತ್ತೇವೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿತು.

2021-22ರ ದೆಹಲಿ ಅಬಕಾರಿ ನೀತಿಯಲ್ಲಿ ಲೋಪದೋಷಗಳನ್ನು ಸೃಷ್ಟಿಸಲು ಮನೀಶ್ ಸಿಸೋಡಿಯಾ ಮತ್ತು ಇತರರು ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿತ್ತು. ಇದಕ್ಕಾಗಿ ನೂರು ಕೋಟಿ ಕಿಕ್ ಬ್ಯಾಕ್ ಪಡೆದಿದ್ದು ಇದರಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇರವಾಗಿ ಭಾಗಿಯಾಗಿದ್ದಾರೆ ಎಂದು ಇಡಿ ಆರೋಪಿಸಿತ್ತು.

ಕೇಜ್ರಿವಾಲ್ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಕೇಜ್ರಿವಾಲ್ ಅವರ ಬಂಧನವನ್ನು ಸಮರ್ಥಿಸಲು ಇಡಿ ಈಗ ಉಲ್ಲೇಖಿಸಿರುವ ಮಾಹಿತಿ ಅವರ ಬಂಧನದ ಸಮಯದಲ್ಲಿ ಇರಲಿಲ್ಲ ಮತ್ತು ನಂತರ ಹಾಜರುಪಡಿಸಲಾಗಿದೆ ಎಂದು ವಾದಿಸಿದರು. ಇಡಿ ಪರ ವಾದಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಅವರು ಬಂಧನದ ಸಮಯದಲ್ಲಿ ಆರೋಪಿಯ ವಿರುದ್ಧ ಇಡಿ ಹೊಂದಿರುವ ದೋಷಾರೋಪಣೆ ವಸ್ತುಗಳನ್ನು ಪೂರೈಸುವ ಅಗತ್ಯವಿಲ್ಲ ಎಂದಿದ್ದರು‌.

Previous Post
HMT ಪುನಶ್ಚೇತನಕ್ಕೆ ಚಿಂತನೆ – ಹೆಚ್‌ಡಿ ಕುಮಾರಸ್ವಾಮಿ
Next Post
ಬರ ಪರಿಹಾರ ಬಿಡುಗಡೆ ವಿಚಾರ ಅಫಿಡೆವಿಟ್ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಕಾಲಾವಕಾಶ

Recent News