ಅರ್ಜಿ ಸಲ್ಲಿಸದವರಿಗೆ ಪೌರತ್ವ ಕೊಟ್ಟರೆ ರಾಜೀನಾಮೆ ನೀಡುವೆ: ಅಸ್ಸಾಂ ಮುಖ್ಯಮಂತ್ರಿ ಘೋಷಣೆ

ಅರ್ಜಿ ಸಲ್ಲಿಸದವರಿಗೆ ಪೌರತ್ವ ಕೊಟ್ಟರೆ ರಾಜೀನಾಮೆ ನೀಡುವೆ: ಅಸ್ಸಾಂ ಮುಖ್ಯಮಂತ್ರಿ ಘೋಷಣೆ

ಗೌಹಾಟಿ, ಮಾ. 12: ನೆರೆದೇಶಗಳಲ್ಲಿ ಧರ್ಮದ ಕಾರಣಕ್ಕಾಗಿ ದೌರ್ಜನ್ಯ ಅನುಭವಿಸಿದ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರ ನಾಗರಿಕರಿಗೆ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿ ಆದ ಹಿನ್ನೆಲೆಯಲ್ಲಿ ಅಸ್ಸಾಂನಲ್ಲಿ ಪ್ರತಿಭಟನೆಗಳು ಆರಂಭವಾಗಿದ್ದು, ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಅಡಿಯಲ್ಲಿ ಅರ್ಜಿ ಸಲ್ಲಿಸದ ಒಬ್ಬ ವ್ಯಕ್ತಿಗೆ ಪೌರತ್ವ ನೀಡಿದರೂ ಆ ಕ್ಷಣವೇ ರಾಜೀನಾಮೆ ಕೊಡುತ್ತೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಘೋಷಿಸಿದ್ದಾರೆ.
ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನದ ದೇಶಗಳಿಂದ ವಲಸೆ ಬಂದ ಮುಸ್ಲಿಮೇತರರಿಗೆ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ನಿನ್ನೆ ಕೇಂದ್ರ ಸರ್ಕಾರ ಜಾರಿಗೆ ತಂದ ಹಿನ್ನೆಲೆಯಲ್ಲಿ ಅಸ್ಸಾಂನಲ್ಲಿ ಭಾರೀ ಪ್ರತಿರೋಧ ವ್ಯಕ್ತವಾಗಿದೆ. ನಾನು ಅಸ್ಸಾಂನ ಪುತ್ರ. NRC ಅಡಿಯಲ್ಲಿ ಪೌರತ್ವಕ್ಕೆ ಅರ್ಜಿ ಸಲ್ಲಿಸದ ಒಬ್ಬ ವ್ಯಕ್ತಿಗೆ ಪೌರತ್ವ ನೀಡಿದರೂ ರಾಜೀನಾಮೆ ನೀಡುವ ಮೊದಲ ವ್ಯಕ್ತಿ ನಾನೇ ಆಗಿರುತ್ತೇನೆ ಎಂದು ಹಿಮಂತ ಬಿಸ್ವಾಸ್‌ ಸಿವಸಾಗರ್‌ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಹೇಳಿದ್ದಾರೆ.
CAA ಜಾರಿಯಾದ ಹಿನ್ನೆಲೆಯಲ್ಲಿ ಲಕ್ಷಾಂತರ ವಲಸಿಗರು ಅಸ್ಸಾಂ ಪ್ರವೇಶಿಸುತ್ತಾರೆ. ಇದರಿಂದಾಗಿ ಅಸ್ಸಾಂ ಮೂಲ ನಾಗರಿಕರಿಗೆ ತೀವ್ರ ಸ್ವರೂಪದ ತೊಂದರೆಯಾಗಲಿದೆ ಎಂದು ಪ್ರತಿಭಟನಾನಿರತರು ಪ್ರತಿಪಾದಿಸುತ್ತಿದ್ದಾರೆ. CAA ಅಸ್ಸಾಂ ನಾಗರಿಕರ ಪಾಲಿಗೆ ಕರಾಳ ಶಾಸನ. ಅದು ನಮ್ಮನ್ನು ಮುಳುಗಿಸಲಿದೆ ಎಂದು ಪ್ರತಿಭಟನಾನಿರತ ಗುಂಪುಗಳು ಮತ್ತು ವಿರೋಧಪಕ್ಷದ ನಾಯಕರು ಆರೋಪಿಸುತ್ತಿದ್ದಾರೆ. CAA ನಲ್ಲಿ ಹೊಸದೇನೂ ಇಲ್ಲ, ಅದು ಈಗಾಗಲೇ ಜಾರಿಯಾಗಿದೆ. ಈಗ NRC ಪೋರ್ಟಲ್‌ ನಲ್ಲಿ ಸಲ್ಲಿಸಲಾಗುವ ಅರ್ಜಿಗಳ ವಿಷಯಕ್ಕೆ ನಾವು ಬರಬೇಕು. ಪೋರ್ಟಲ್‌ ನ ದಾಖಲಾತಿಗಳು ಸತ್ಯವನ್ನು ಹೇಳುತ್ತವೆ. ಈ ಮಾಹಿತಿಗಳೇ ವಿರೋಧ ಪಕ್ಷಗಳ ಆರೋಪದಲ್ಲಿ ಹುರುಳಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಹಿಮಂತ ಬಿಸ್ವಾಸ್‌ ಪ್ರತಿಪಾದಿಸಿದ್ದಾರೆ.
CAA ಜಾರಿಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಾಂಗ್ಲಾದೇಶ, ಪಾಕಿಸ್ತಾನ, ಅಫಘಾನಿಸ್ತಾನ ದೇಶಗಳಲ್ಲಿ ದೌರ್ಜನ್ಯಕ್ಕೆ ಒಳಗಾಗಿ 2014 ಡಿಸೆಂಬರ್‌ 31ಕ್ಕೂ ಮುನ್ನ ಭಾರತದಲ್ಲಿ ಆಶ್ರಯ ಪಡೆದಿರುವ ಮುಸ್ಲಿಮೇತರ ನಾಗರಿಕರಿಗೆ ಪೌರತ್ವ ನೀಡುವ ಕಾರ್ಯವನ್ನು ಆರಂಭಿಸಲಿದೆ. ವಲಸೆ ಬಂದ ಹಿಂದೂ, ಸಿಖ್‌, ಜೈನ್‌, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ನರಿಗೆ ಈ ಕಾಯ್ದೆ ಅನ್ವಯ ನಾಗರಿಕತ್ವ ಲಭಿಸಲಿದೆ.

Previous Post
ಮಾಲೆಗಾಂವ್ ಸ್ಫೋಟ: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ವಾರೆಂಟ್‌ ಜಾರಿ
Next Post
ಸಿಎಎ ಜಾರಿಗೆ ತಡೆ ಕೋರಿ ಸುಪ್ರೀಂಗೆ ಮುಸ್ಲಿಂ ಲೀಗ್ ಮೊರೆ

Recent News