ಅಸ್ಸಾಂನಲ್ಲಿ ಲಾಕಪ್ ಡೇತ್: ಪ್ರತಿಭಟನೆ

ಅಸ್ಸಾಂನಲ್ಲಿ ಲಾಕಪ್ ಡೇತ್: ಪ್ರತಿಭಟನೆ

ಗೌಹಾಟಿ, ಮೇ 23: ಅಸ್ಸಾಂನ ಲಕಿಂಪುರ್ ಜಿಲ್ಲೆಯಲ್ಲಿ ಮೊಬೈಲ್‌ ಪೋನ್‌ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ 42 ವರ್ಷದ ವ್ಯಕ್ತಿಯೊಬ್ಬರು ಪೊಲೀಸ್‌ ಕಸ್ಟಡಿಯಲ್ಲಿ ಮೃತಪಟ್ಟಿದ್ದು, ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸ್ಥಳೀಯರು ಪ್ರತಿಭಟನೆಯನ್ನು ನಡೆಸಿದ್ದಾರೆ.

ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಗುಂಪಿನಲ್ಲಿದ್ದ ಅರ್ಸಬ್ ಅಲಿ ಬುಧವಾರ ತಡರಾತ್ರಿ ಹಠಾತ್ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಆ ಬಳಿಕ ಭುಗಿಲೆದ್ದ ಪ್ರತಿಭಟನೆಯಿಂದ ಖೇಲ್ಮತಿ ಔಟ್‌ಪೋಸ್ಟ್‌ನ ಉಸ್ತುವಾರಿ ವಹಿಸಿದ್ದ ಪೊಲೀಸ್ ಅಧಿಕಾರಿ ಮತ್ತು ಸಾವಿನ ಸಮಯದಲ್ಲಿ ಔಟ್‌ಪೋಸ್ಟ್‌ನಲ್ಲಿದ್ದ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಅಸ್ಸಾಂನ ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಲಖಿಂಪುರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಲ್‌ಕೆ ದೇಕಾ ಈ ಕುರಿತು ಮಾಹಿತಿಯನ್ನು ನೀಡಿದ್ದು, ಪೊಲೀಸ್ ಠಾಣೆಯ ಒಳಗೆ ಬೆಂಚ್ ಮೇಲೆ ಕುಳಿತಿದ್ದ ಆರೋಪಿಯು ಹಠಾತ್ತನೆ ಕೆಳಗೆ ಬಿದ್ದಿದ್ದಾರೆ, ತಕ್ಷಣವೇ ಅವರನ್ನು ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ವೈದ್ಯರು ಅವರನ್ನು ಪರಿಶೀಲಿಸಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಘಟನೆಯ ಬಗ್ಗೆ ಮ್ಯಾಜಿಸ್ಟ್ರಿಯಲ್ ವಿಚಾರಣೆಗೆ ಆದೇಶಿಸಲಾಗಿದೆ ಮತ್ತು ಸಾವಿನ ನಿಖರವಾದ ಕಾರಣವನ್ನು ಕಂಡುಹಿಡಿಯಲು ವೈದ್ಯರ ಸಮಿತಿಯು ಮರಣೋತ್ತರ ಪರೀಕ್ಷೆಯನ್ನು ವೀಡಿಯೊಗ್ರಾಫ್ ಮಾಡಲಿದೆ ಎಂದು ದೇಕಾ ಹೇಳಿದ್ದಾರೆ.

ಅರ್ಸಬ್ ಅಲಿ ಅವರ ಕುಟುಂಬವು, ಅವರು ನಿರಪರಾಧಿ, ಅವರು ಮಾಡದ ಅಪರಾಧವನ್ನು ಒಪ್ಪಿಕೊಳ್ಳುವಂತೆ ಚಿತ್ರಹಿಂಸೆ ನೀಡಿದ್ದರಿಂದ ಮೃತಪಟ್ಟಿದ್ದಾರೆ ಎಂದು ಆರೋಪಿಸಿದೆ. ಇಂದು ಬೆಳಿಗ್ಗೆ ಪೊಲೀಸ್ ಔಟ್‌ಪೋಸ್ಟ್‌ಗೆ ಬಂದು ಕಸ್ಟಡಿ ಸಾವನ್ನು ಖಂಡಿಸಿ ಅಲಿ ಕುಟುಂಬಸ್ಥರು ಮತ್ತು ಸ್ಥಳೀಯರು ಪ್ರತಿಭಟನೆಯನ್ನು ನಡೆಸಿದ್ದಾರೆ. ಈ ವೇಳೆ ಪೊಲೀಸ್‌ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಗುಂಪನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡುಗಳನ್ನು ಹಾರಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿದ ಅಸ್ಸಾಂ ಪೊಲೀಸ್ ಮಹಾನಿರ್ದೇಶಕ ಜ್ಞಾನೇಂದ್ರ ಪ್ರತಾಪ್ ಸಿಂಗ್ ಅವರ ಕಚೇರಿಯು, ಘಟನೆಗೆ ಸಂಬಂಧಿಸಿ ಹೊರಠಾಣೆ ಉಸ್ತುವಾರಿ ಸೇರಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿರುವುದಾಗಿ ಘೋಷಿಸಿದ್ದಾರೆ. ಹೆಚ್ಚುವರಿ ಎಸ್ಪಿ ಬಿಸ್ವನಾಥ್ ಅವರು ಈ ಕುರಿತು ಸ್ವತಂತ್ರ ತನಿಖೆಗೆ ಆದೇಶಿಸಿದ್ದಾರೆ. ಇದಲ್ಲದೆ ಗುರುವಾರ ಬೆಳಗ್ಗೆ ಔಟ್‌ಪೋಸ್ಟ್ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Previous Post
ಪ. ಬಂಗಾಳ ರಾಜ್ಯಪಾಲರ ವಿರುದ್ಧ ಟಿಎಂಸಿ ದೂರು
Next Post
ಮತದಾನದ ಅಂಕಿ-ಅಂಶ ಒದಗಿಸಬೇಕೆಂಬ ಕಾನೂನಿಲ್ಲ: ಆಯೋಗ

Recent News