ಆಂಧ್ರ ಬಿಜೆಪಿ ಅಧ್ಯಕ್ಷೆ ಪುರಂದೇಶ್ವರಿ ಲೋಕಸಭೆಯ ಸ್ಪೀಕರ್?
ನವದೆಹಲಿ: ಸಚಿವರಿಗೆ ಖಾತೆ ಹಂಚಿಕೆ ಅಂತಿಮವಾಗುತ್ತಿದ್ದಂತೆ 18ನೇ ಲೋಕಸಭೆಯ ಸ್ಪೀಕರ್ ಹುದ್ದೆಗೆ ಆಂಧ್ರಪ್ರದೇಶ ಬಿಜೆಪಿ ಅಧ್ಯಕ್ಷೆ ದಗ್ಗುಬಾಟಿ ಪುರಂದೇಶ್ವರಿ ಹೆಸರು ಬಂದಿದೆ. ಬಿಜೆಪಿ ಬಹುಮತ ಹೊಂದಿದ್ದ ಎರಡು ಅವಧಿಯಲ್ಲಿ ಕ್ರಮವಾಗಿ ಸುಮಿತ್ರಾ ಮಹಾಜನ್ ಮತ್ತು ಓಂ ಬಿರ್ಲಾ ಅವರು ಸ್ಪೀಕರ್ ಆಗಿದ್ದರು. ಆದರೆ ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲದೇ ಇದ್ದಾಗ ಸ್ಪೀಕರ್ ಯಾರಾಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.
ಎನ್‌ಡಿಎ ಸರ್ಕಾರ ರಚನೆಯಾದ ಬಳಿಕ ಸ್ಪೀಕರ್ ಹುದ್ದೆ ನೀಡುವಂತೆ ಟಿಡಿಪಿ ಬೇಡಿಕೆ ಇಟ್ಟಿತ್ತು. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಸ್ಪೀಕರ್ ಹುದ್ದೆಗೆ ಭಾರೀ ಮಹತ್ವ ಇರುವ ಕಾರಣ ಬಿಜೆಪಿ ಬಿಟ್ಟು ಕೊಟ್ಟಿಲ್ಲ. ಈ ಕಾರಣಕ್ಕೆ ಟಿಡಿಪಿ ಮತ್ತು ಬಿಜೆಪಿಗೆ ಆಪ್ತವಾಗಿರುವ ಪುರಂದೇಶ್ವರಿ ಹೆಸರು ಈಗ ಕೇಳಿ ಬಂದಿದೆ.
ದಿವಂಗತ ಎನ್.ಟಿ.ರಾಮರಾವ್ ಅವರ ಪುತ್ರಿ ಆಗಿರುವ ಪುರಂದರೇಶ್ವರಿ ರಾಜಮಂಡ್ರಿ ಲೋಕಸಭಾ ಕ್ಷೇತ್ರದ ಸದಸ್ಯೆಯಾಗಿದ್ದಾರೆ. ಟಿಡಿಪಿ ನಾಯಕ ಚಂದ್ರಬಾಬು ಅವರ ಪತ್ನಿಯ ಸಹೋದರಿಯಾಗಿದ್ದಾರೆ. ಪುರಂದರೇಶ್ವರಿ ಅವರ ಸಹೋದರ ಬಾಲಕೃಷ್ಣ ಹಿಂದೂಪುರ ವಿಧಾನಸಭಾ ಕ್ಷೇತ್ರದ ಟಿಡಿಪಿ ಶಾಸಕರಾಗಿದ್ದಾರೆ. ಆಂಧ್ರದಲ್ಲಿ ಬಿಜೆಪಿ ಮತ್ತು ಟಿಡಿಪಿ, ಜನಸೇನಾ ಮೈತ್ರಿಯಾಗಲು ಪುರಂದೇಶ್ವರಿ ಪಾತ್ರ ದೊಡ್ಡದು. ಈ ಕಾರಣಕ್ಕೆ ಪುರಂದೇಶ್ವರಿ ಹೆಸರು ಈಗ ಮುನ್ನೆಲೆಗೆ ಬಂದಿದೆ.
ಪುರಂದರೇಶ್ವರಿ ಅವರನ್ನು ಸ್ಪೀಕರ್ ಸ್ಥಾನಕ್ಕೆ ಕೂರಿಸಿದರೆ ಸರ್ಕಾರ ಮಹಿಳೆಯರ ಪರವಾಗಿ ಇದೆ ಎಂಬ ಸಂದೇಶವನ್ನು ರವಾನಿಸದಂತಾಗುತ್ತದೆ. ಅಷ್ಟೇ ಅಲ್ಲದೇ ಮಿತ್ರ ಪಕ್ಷವಾದ ಟಿಡಿಪಿ, ಜನಸೇನಾ ಸೇರಿದಂತೆ ಯಾವುದೇ ಪಕ್ಷಗಳು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇಲ್ಲ ಎಂಬ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ.