ಆಪ್ ಕಚೇರಿ ಖಾಲಿ ಮಾಡಲು ಜೂನ್‌ವರೆಗೆ ಸುಪ್ರೀಂಕೋರ್ಟ್ ಗಡವು

ಆಪ್ ಕಚೇರಿ ಖಾಲಿ ಮಾಡಲು ಜೂನ್‌ವರೆಗೆ ಸುಪ್ರೀಂಕೋರ್ಟ್ ಗಡವು

ನವದೆಹಲಿ : ರೂಸ್ ಅವೆನ್ಯೂದಲ್ಲಿರುವ ಆಮ್ ಆದ್ಮಿ ಪಕ್ಷದ ಕಚೇರಿಯನ್ನು ಖಾಲಿ ಮಾಡಲು ಜೂನ್ 15ರವರೆಗೆ ಎಎಪಿಗೆ ಸುಪ್ರೀಂಕೋರ್ಟ್ ಕಾಲಾವಕಾಶವನ್ನು ನೀಡಿದೆ. ನ್ಯಾಯಾಂಗ ಮೂಲಸೌಕರ್ಯವನ್ನು ವಿಸ್ತರಿಸಲು ದೆಹಲಿ ಹೈಕೋರ್ಟ್‌ಗೆ ಭೂಮಿಯನ್ನು ಹಂಚಲಾಗಿದೆ ಎಂದು ಗಮನಿಸಿದ ನಂತರ ಸುಪ್ರೀಂಕೋರ್ಟ್ ಈ ಮಹತ್ವದ ಆದೇಶವನ್ನು ನೀಡಿದೆ. ಸನ್ನಿಹಿತವಾದ ಸಾರ್ವತ್ರಿಕ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ನಾವು ಜಾಗವನ್ನು ಖಾಲಿ ಮಾಡಲು ಜೂನ್ 15, 2024ರವರೆಗೆ ಸಮಯವನ್ನು ನೀಡುತ್ತೇವೆ ಎಂದು ನ್ಯಾಯಾಲಯ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ತನ್ನ ಕಚೇರಿಗಳಿಗೆ ಭೂಮಿ ಮಂಜೂರು ಮಾಡಲು ಭೂ ಮತ್ತು ಅಭಿವೃದ್ಧಿ ಕಚೇರಿಯನ್ನು ಸಂಪರ್ಕಿಸಲು ಎಎಪಿಗೆ ಹೇಳಿದೆ. ಸಧ್ಯ ಇರುವ ರೂಸ್ ಅವೆನ್ಯೂದಲ್ಲಿರುವ ಕಚೇರಿಯಲ್ಲಿ ಮುಂದುವರಿಯಲು ಪಕ್ಷಕ್ಕೆ ಯಾವುದೇ “ಕಾನೂನುಬದ್ಧ ಹಕ್ಕು” ಇಲ್ಲ ಎಂದು ನ್ಯಾಯಾಲಯವು ಗಮನಿಸಿದೆ. ನ್ಯಾಯಮೂರ್ತಿಗಳಾದ ಪಿ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಕೂಡ ಪೀಠದ ಭಾಗವಾಗಿದ್ದರು.

ಪಕ್ಷದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ದೇಶದ ಆರು ರಾಷ್ಟ್ರೀಯ ಪಕ್ಷಗಳಲ್ಲಿ ಎಎಪಿ ಕೂಡ ಒಂದು, ಆದರೆ ತೆರವು ಮಾಡಿದರೆ ರಾಷ್ಟ್ರೀಯ ಪಕ್ಷವಾಗಿ ನಮಗೆ ಏನೂ ಪ್ರಾಶಸ್ತ್ಯ ಸಿಗುವುದಿಲ್ಲ. ಎಲ್ಲರೂ ಉತ್ತಮ ಸ್ಥಳಗಳಲ್ಲಿದ್ದಾಗ ನಮಗೆ ಬೇರೆ ಕಡೆ ನೀಡಲಾಗಿದೆ ಎಂದು ಸಿಂಘ್ವಿ ಕೋರ್ಟ್‌ ಗಮನಕ್ಕೆ ತಂದಿದ್ದಾರೆ. ಈ ಹಿಂದೆ ರೋಸ್ ಅವೆನ್ಯೂದಲ್ಲಿ ಹೈಕೋರ್ಟ್‌ಗೆ ಮಂಜೂರು ಮಾಡಿರುವ ಜಮೀನಿನಲ್ಲಿ ಆಪ್‌ನಿಂದ ಒತ್ತುವರಿ ತೆರವಿಗೆ ಸಭೆ ನಡೆಸುವಂತೆ ದೆಹಲಿ ಸರ್ಕಾರ ಮತ್ತು ದೆಹಲಿ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.

ರೂಸ್ ಅವೆನ್ಯೂದಲ್ಲಿರುವ ದೆಹಲಿ ಹೈಕೋರ್ಟ್‌ನ ಭೂಮಿಯನ್ನು ತಾನು ಅತಿಕ್ರಮಿಸಿಕೊಂಡಿಲ್ಲ ಮತ್ತು 2015ರಲ್ಲಿ ಜಾಗವನ್ನು ನೀಡಲಾಯಿತು ಎಂದು ಎಎಪಿ ಸುಪ್ರೀಂಕೋರ್ಟ್‌ಗೆ ಈ ಮೊದಲು ತಿಳಿಸಿತ್ತು. 2015 ರಲ್ಲಿ ಇದು ತನಗೆ ಸರಿಯಾಗಿ ಮಂಜೂರು ಮಾಡಲಾದ ಜಾಗವಾಗಿದೆ. ಈ ಜಾಗವನ್ನು “ಅತಿಕ್ರಮಿಸುವ” ಪ್ರಶ್ನೆಯೇ ಇಲ್ಲ ಎಂದು ಎಎಪಿ ಹೇಳಿಕೊಂಡಿದೆ.

Previous Post
ವಿಡಿಯೋ ಕಾನ್ಫರೇನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಸಿದ್ಧ ಇಡಿ ಸಮನ್ಸ್‌ಗೆ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ
Next Post
ನೋಂದಣಿ ಮಾಡಿಸಿಕೊಳ್ಳದಿದ್ದರೆ ಟ್ಯಾಂಕರ್ ‌ಗಳು ಸೀಜ್; ಸಮಸ್ಯೆ ನಿವಾರಣೆಗೆ ರೂ. 556 ಕೋಟಿ ಮೀಸಲು: ಡಿಸಿಎಂ ಡಿ.ಕೆ.ಶಿವಕುಮಾರ್

Recent News