ಆರನೇ ಹಂತ ಮುಕ್ತಾಯ, 59.12% ರಷ್ಟು ಮತದಾನ

ಆರನೇ ಹಂತ ಮುಕ್ತಾಯ, 59.12% ರಷ್ಟು ಮತದಾನ

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಎಂಟು ರಾಜ್ಯಗಳಲ್ಲಿನ 58 ಲೋಕಸಭಾ ಸ್ಥಾನಗಳಿಗೆ ಆರನೇ ಹಂತದಲ್ಲಿ ಯಶಸ್ವಿಯಾಗಿ ಮತದಾನವಾಗಿದೆ. ಸಂಜೆ ಆರು ಗಂಟೆ ವೇಳೆಗೆ 59.12%. ಮತದಾನವಾಗಿದ್ದು ಬಹುತೇಕ ಪ್ರದೇಶಗಳಲ್ಲಿ ಶಾಂತಿಯುತ ಮತದಾನ ನಡೆದಿದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಬಿಹಾರದ 8 ಸ್ಥಾನಗಳಲ್ಲಿ 53.48%, ಹರಿಯಾಣ ಎಲ್ಲಾ 10 ಸ್ಥಾನಗಳಲ್ಲಿ 58.44%, ಜಮ್ಮು ಮತ್ತು ಕಾಶ್ಮೀರ 1 ಕ್ಷೇತ್ರದಲ್ಲಿ 52.28%, ಜಾರ್ಖಂಡ್ 4 ಸ್ಥಾನಗಳಲ್ಲಿ 62.87%,
ದೆಹಲಿ ಎಲ್ಲಾ 7 ಸ್ಥಾನಗಳಲ್ಲಿ 54.63%, ಒಡಿಶಾ 6 ಕ್ಷೇತ್ರಗಳಲ್ಲಿ 60.07%, ಉತ್ತರ ಪ್ರದೇಶ 14 ಕ್ಷೇತ್ರದಲ್ಲಿ ನಡೆದ ಮತದಾನದಲ್ಲಿ 54.03%, ಮತ್ತು ಪಶ್ಚಿಮ ಬಂಗಾಳ 8 ಸ್ಥಾನಗಳಲ್ಲಿ 78.18% ರಷ್ಟು ಮತದಾನವಾಗಿದೆ.

ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ದನ್ಕರ್, ಸಿಎಂ ಅರವಿಂದ್ ಕೇಜ್ರಿವಾಲ್, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ, ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಕೇಂದ್ರ ಸಚಿವ ಜೈಶಂಕರ್ ಸೇರಿದಂತೆ ಪ್ರಮುಖ ನಾಯಕರು ಮತದಾನ ಮಾಡಿದರು.

ಮತದಾನ ಬಹುತೇಕ ಶಾಂತಿಯುತವಾಗಿ ನಡೆದರೂ ಪಶ್ಚಿಮ ಬಂಗಾಳದಲ್ಲಿ ಘಟಾಲ್ ಮತ್ತು ಕಂಠಿ ಕ್ಷೇತ್ರಗಳಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಘರ್ಷಣೆಯಿಂದ ಚುನಾವಣೆಗಳಲ್ಲಿ ಸಮಸ್ಯೆಯಾದವು. ಬಿಜೆಪಿಯ ಹಿರಿಯ ನಾಯಕ ಮತ್ತು ಅಭ್ಯರ್ಥಿ ಪ್ರಣತ್ ತುಡು ಅವರು ತಮ್ಮ ಬೆಂಗಾವಲು ವಾಹನದ ಮೇಲೆ ಜಾರ್‌ಗ್ರಾಮ್‌ನಲ್ಲಿ ಕಸ ಎಸೆಯಲಾಗಿದೆ ಎಂದು ಆರೋಪಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ತಮ್ಮ ಮೊಬೈಲ್ ಸಂಖ್ಯೆಗೆ ಹೊರಹೋಗುವ ಕರೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಪಿಡಿಪಿ ತನ್ನ ಕಾರ್ಯಕರ್ತರು ಮತ್ತು ಪೋಲಿಂಗ್ ಏಜೆಂಟರನ್ನು ಮತದಾನಕ್ಕೂ ಮುನ್ನ ಪೊಲೀಸರು ಬಂಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Previous Post
ಶಾಸಕ ಹರೀಶ್ ಪೂಂಜಾ ಪೊಲೀಸ್ ಬೆದರಿಕೆ ಆರೋಪ ಪ್ರಕರಣ ಕಾನೂನು ಎಲ್ಲರಿಗೂ ಒಂದೇ: ಮುಖ್ಯಮಂತ್ರಿ ಸಿದ್ದರಾಮಯ್ಯ
Next Post
ಉತ್ಸಾಹದ ಚಿಲುಮೆ ಬಿ.ವಿ ಶ್ರೀನಿವಾಸ್

Recent News