ಇಂಟರ್ನೆಟ್ ಸ್ಥಗಿತ: ಸತತ 6ನೇ ಬಾರಿಗೆ ಭಾರತಕ್ಕೆ ಅಗ್ರಸ್ಥಾನ

ಇಂಟರ್ನೆಟ್ ಸ್ಥಗಿತ: ಸತತ 6ನೇ ಬಾರಿಗೆ ಭಾರತಕ್ಕೆ ಅಗ್ರಸ್ಥಾನ

ನವದೆಹಲಿ, ಮೇ 15: ಸರ್ಕಾರದ ಆದೇಶದಿಂದ ಇಂಟರ್‌ನೆಟ್‌ ಸ್ಥಗಿತಗೊಳಿಸಿರುವ ಪ್ರಕರಣಗಳಲ್ಲಿ 2023ರಲ್ಲಿ ಜಾಗತಿಕವಾಗಿ ಭಾರತ 6ನೇ ಬಾರಿಗೆ ಪ್ರಥಮ ಸ್ಥಾನ ಪಡೆದಿದೆ ಎಂದು ವರದಿಯೊಂದು ಹೇಳಿದೆ. ‘Accessnow’ ಎಂಬ ಸಂಸ್ಥೆ ಬುಧವಾರ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, 2023ರಲ್ಲಿ ಜಾಗತಿಕವಾಗಿ 283 ಬಾರಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು. ಈ ಅವಧಿಯಲ್ಲಿ ಭಾರತದಲ್ಲಿ 116 ಬಾರಿ ಇಂಟರ್ನೆಟ್ ಸ್ಥಗಿತಕ್ಕೆ ಸರ್ಕಾರ ಆದೇಶಿಸಿದೆ.

ಒಟ್ಟು 116 ಬಾರಿ ಇಂಟರ್ನೆಟ್ ಸ್ಥಗಿತಗೊಳಿಸಿರುವುದರ ಪೈಕಿ 65 ಬಾರಿ ಕೋಮು ಹಿಂಸಾಚಾರದ ಹಿನ್ನೆಲೆ ಆದೇಶಿಸಲಾಗಿತ್ತು. ಒಟ್ಟು 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಯಾದ ಇಂಟರ್ನೆಟ್‌ ಸ್ಥಗಿತದಲ್ಲಿ ಏಳು ರಾಜ್ಯಗಳಲ್ಲಿ ಐದಕ್ಕಿಂತ ಹೆಚ್ಚು ಬಾರಿ ಸ್ಥಗಿತ ಆದೇಶ ನೀಡಲಾಗಿತ್ತು ಎಂದು ವರದಿ ಹೇಳಿದೆ.

ಕಳೆದ ಐದು ವರ್ಷಗಳಲ್ಲಿ ಭಾರತೀಯ ಪ್ರಾಧಿಕಾರಗಳು 500ಕ್ಕೂ ಹೆಚ್ಚು ಬಾರಿ ಅಂತರ್ಜಾಲ ಸ್ಥಗಿತಗೊಳಿಸಿದ್ದವು ಹಾಗೂ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದಲ್ಲಿ ಸತತವಾಗಿ ಲಕ್ಷಾಂತರ ಮಂದಿಯನ್ನು ಕತ್ತಲೆಗೆ ನೂಕಿದ್ದವು” ಎಂದು ವರದಿ ತಿಳಿಸಿದೆ.

ಮೇ ಮತ್ತು ಡಿಸೆಂಬರ್‌ 2023ರ ನಡುವೆ ಮಣಿಪುರದ 32 ಲಕ್ಷ ಜನರು 212 ದಿನಗಳ ಕಾಲ ಅಂತರ್ಜಾಲ ಸ್ಥಗಿತ ಎದುರಿಸಿದ್ದರು ಎಂದು ವರದಿ ಹೇಳಿದೆ. ಇದು 2023ರಲ್ಲಿ ಜಗತ್ತಿನ ಅತ್ಯಂತ ದೀರ್ಘಾವಧಿಯ ಅಂತರ್ಜಾಲ ಸ್ಥಗಿತವಾಗಿದೆ.
ಮಣಿಪುರದಲ್ಲಿ ದೀರ್ಘಾವಧಿ ಇಂಟರ್ನೆಟ್ ಸ್ಥಗಿತಗೊಳಿಸಿದ್ದ ವೇಳೆ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಇಂಟರ್ನೆಟ್ ಬಳಕೆಯಿಂದ ಜನರನ್ನು ತಡೆಯುವುದು, ಅವರ ಹಕ್ಕುಗಳಿಂದ ತಡೆದಂತೆ ಎಂದು ಕೋರ್ಟ್ ಹೇಳಿತ್ತು. ತಕ್ಷಣ ಇಂಟರ್ನೆಟ್ ಸೇವೆ ಮರುಸ್ಥಾಪನೆಗೆ ಆದೇಶಿಸಿತ್ತು.

Previous Post
ಸಿಎಎ ಅಡಿ 14 ಮಂದಿಗೆ ಭಾರತೀಯ ಪೌರತ್ವ ಪ್ರಮಾಣ ಪತ್ರ ವಿತರಣೆ
Next Post
ಮಾಧವಿ ಲತಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೂರು

Recent News