ಇನ್ಫೋಸಿಸ್‌ಗೆ ಭಾರೀ ದಂಡ ವಿಧಿಸಿದ ಕೆನಡಾ ಸರಕಾರ

ಇನ್ಫೋಸಿಸ್‌ಗೆ ಭಾರೀ ದಂಡ ವಿಧಿಸಿದ ಕೆನಡಾ ಸರಕಾರ

ನವದೆಹಲಿ, ಮೇ 15: ಭಾರತೀಯ ಐಟಿ ಕಂಪನಿ ಇನ್ಫೋಸಿಸ್‌ಗೆ ಕೆನಡಾದ ಜಸ್ಟಿನ್ ಟ್ರುಡೊ ಸರಕಾರ 1.34 ಲಕ್ಷ ಕೆನಡಾ ಡಾಲರ್‌ ಗಿಂತ ಹೆಚ್ಚಿನ ದಂಡವನ್ನು ವಿಧಿಸಿದ್ದು, ಕಂಪೆನಿ ವಿರುದ್ಧ ಆರೋಗ್ಯ ತೆರಿಗೆ ಕಡಿಮೆ ಪಾವತಿಸಿರುವ ಆರೋಪ ಮಾಡಲಾಗಿದೆ. 2020ರಲ್ಲಿ ಉದ್ಯೋಗಿಗಳ ಆರೋಗ್ಯ ತೆರಿಗೆಯನ್ನು ಕಡಿಮೆ ಪಾವತಿಸಿದ ಕಾರಣ ಇನ್ಫೋಸಿಸ್ ಮೇಲೆ ದಂಡವನ್ನು ವಿಧಿಸಲಾಗಿದೆ ಎಂದು ಕೆನಡಾ ಸರ್ಕಾರ ಹೇಳಿಕೊಂಡಿದೆ. ವರದಿಯ ಪ್ರಕಾರ, ಬೆಂಗಳೂರು ಮೂಲದ ಇನ್ಫೋಸಿಸ್ ಕಳೆದ ವಾರ ಕೆನಡಾದ ಹಣಕಾಸು ಸಚಿವಾಲಯದಿಂದ ಆದೇಶವನ್ನು ಸ್ವೀಕರಿಸಿದೆ. ಕಂಪನಿಯ ಮೇಲೆ 1,34,822.38 ಕೆನಡಿಯನ್ ಡಾಲರ್‌ಗಳ ದಂಡವನ್ನು ವಿಧಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಕೆನಡಾ ದಂಡ ವಿಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಇನ್ಫೋಸಿಸ್, ದಂಡವು ಕಂಪನಿಯ ಹಣಕಾಸು ಮತ್ತು ಇತರ ಕಾರ್ಯ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ. ಇನ್ಫೋಸಿಸ್ ಕೆನಡಾದಲ್ಲಿ ತನ್ನದೇ ಆದ ಅಸ್ತಿತ್ವವನ್ನು ಹೊಂದಿದೆ, ಆಲ್ಬರ್ಟಾ, ಒಂಟಾರಿಯೊದ ಮಿಸ್ಸಿಸೌಗಾ, ಬ್ರಿಟಿಷ್ ಕೊಲಂಬಿಯಾದ ಬರ್ನಾಬಿ ಮತ್ತು ಒಟ್ಟಾವಾ ಸೇರಿ ಹಲವೆಡೆ ಇನ್ಫೋಸಿಸ್ ಪ್ರಮುಖ ಕಚೇರಿಯನ್ನು ಹೊಂದಿದೆ ಎಂದು ಹೇಳಿಕೊಂಡಿದೆ. ‘ಉದ್ಯೋಗಿ ಆರೋಗ್ಯ ತೆರಿಗೆ’ (EHT) ಒಂಟಾರಿಯೊ ಮತ್ತು ಬ್ರಿಟಿಷ್ ಕೊಲಂಬಿಯಾದಂತಹ ಆಯ್ದ ಕೆನಡಾದ ಪ್ರಾಂತ್ಯಗಳಲ್ಲಿ ಉದ್ಯೋಗದಾತರ ಮೇಲೆ ವಿಧಿಸಲಾಗುವ ಕಡ್ಡಾಯ ವೇತನದಾರರ ತೆರಿಗೆಯಾಗಿದೆ. ವೇತನಗಳು, ಬೋನಸ್‌ಗಳು ಸೇರಿದಂತೆ ವಿವಿಧ ರೀತಿಯಲ್ಲಿ ತೆರಿಗೆಯನ್ನು ಲೆಕ್ಕಹಾಕಲಾಗುತ್ತದೆ. ಪ್ರಾಂತ್ಯದೊಳಗಿನ ಆರೋಗ್ಯ ಸೇವೆಗಳ ನಿಧಿಗೆ ಕೊಡುಗೆ ನೀಡುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ.

ಇನ್ಫೋಸಿಸ್ ಬೆಂಗಳೂರು ಕೇಂದ್ರೀಕೃತವಾದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ. ಇನ್ಫೋಸಿಸ್ ಕಂಪೆನಿ 1981ರಲ್ಲಿ ಸ್ಥಾಪನೆಯಾಗಿತ್ತು, 2014ರವರೆಗೆ ಆರ್.ಏನ್.ನಾರಾಯಣಮೂರ್ತಿ ಸ್ಥಾಪಕ ಸಿಇಒ ಅಗಿ ಕಾರ್ಯ ನಿರ್ವಹಿಸಿದ್ದರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಅತಿ ದೊಡ್ಡ ಸಂಸ್ಥೆಗಳಲ್ಲಿ ಒಂದಾಗಿದ್ದು, 1,45,000ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಹೊಂದಿದೆ. ಭಾರತ, ಯುಸ್‌ಎ, ಚೀನಾ, ಆಸ್ಟ್ರೇಲಿಯಾ, ಯುಕೆ, ಕೆನಡ, ಜಪಾನ್ ಸೇರಿ ವಿವಿಧ ರಾಷ್ಟ್ರಗಳಲ್ಲಿ ಇನ್ಫೋಸಿಸ್ ಕಚೇರಿಗಳನ್ನು ಹೊಂದಿದೆ.

Previous Post
ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ
Next Post
ಎಫ್‌ಸಿಐ ಗೋದಾಮಿನಲ್ಲಿ ಕೊಳೆಯುತ್ತಿರುವ 18 ಮಿಲಿಯನ್ ಟನ್ ಅಕ್ಕಿ

Recent News