ಇಮ್ರಾನ್ ಖಾನ್ ದಂಪತಿಗೆ ವಿಧಿಸಿದ್ದ ಶಿಕ್ಷೆ ರದ್ದು

ಇಮ್ರಾನ್ ಖಾನ್ ದಂಪತಿಗೆ ವಿಧಿಸಿದ್ದ ಶಿಕ್ಷೆ ರದ್ದು

ಇಸ್ಲಾಮಾಬಾದ್, ಏ. 1: ತೋಷಖಾನಾ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ ವಿಧಿಸಿದ್ದ 14 ವರ್ಷಗಳ ಜೈಲು ಶಿಕ್ಷೆಯನ್ನು ಇಸ್ಲಾಮಾಬಾದ್ ಹೈಕೋರ್ಟ್ (ಐಹೆಚ್‌ಸಿ) ಸೋಮವಾರ ರದ್ದುಗೊಳಿಸಿದೆ. ಶಿಕ್ಷೆ ರದ್ದತಿಯ ವಿರುದ್ಧದ ಮೇಲ್ಮನವಿಗಳನ್ನು ಈದ್ ರಜಾದಿನದ (ರಂಝಾನ್ ರಜೆ) ನಂತರ ವಿಚಾರಣೆಗೆ ನಡೆಸಲಾಗುವುದು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೇಳಿರುವುದಾಗಿ ವರದಿಗಳು ತಿಳಿಸಿವೆ.

ಇಮ್ರಾನ್ ಖಾನ್ ಮತ್ತು ಬುಶ್ರಾ ಬೀಬಿಗೆ ಜನವರಿ 31ರಂದು ಇಸ್ಲಾಮಾಬಾದ್‌ನ ನ್ಯಾಯಾಲಯ ತೋಷಖಾನಾ ಪ್ರಕರಣದಲ್ಲಿ ಶಿಕ್ಷೆ ವಿಧಿಸಿತ್ತು. ಇದಾಗಿ ಒಂದು ದಿನದ ನಂತರ ಇದ್ದತ್ ಅವಧಿಯಲ್ಲಿ ಮದುವೆಗೆ ಸಂಬಂಧಿಸಿದ ಪ್ರಕರಣದಲ್ಲಿ ಇಮ್ರಾನ್ ಖಾನ್ ಮತ್ತು ಪತ್ನಿಗೆ ನ್ಯಾಯಾಲಯ ತಲಾ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಖಾನ್ ಪ್ರಧಾನಿಯಾಗಿ ಆಯ್ಕೆಯಾಗುವ ತಿಂಗಳ ಮೊದಲು 2018 ರಲ್ಲಿ ಇಬ್ಬರೂ ವಿವಾಹವಾಗಿದ್ದರು.

ಇಮ್ರಾನ್ ಖಾನ್ ಅವರು 2018 ರಿಂದ 2022ರ ಅವಧಿಯಲ್ಲಿ ವಿದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸ್ವೀಕರಿಸಿದ್ದ 140 ಮಿಲಿಯನ್‌ಕ್ಕಿಂತ ಹೆಚ್ಚು ಮೌಲ್ಯದ ಉಡುಗೊರೆಗಳನ್ನು ಸರ್ಕಾರಿ ಸ್ವಾಧೀನದಲ್ಲಿ ಖರೀದಿಸಲು ಮತ್ತು ಮಾರಾಟ ಮಾಡಲು ಪ್ರೀಮಿಯರ್‌ಶಿಪ್ ಅನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಅಪರಾಧ ಹೊರಿಸಲಾಗಿತ್ತು. ಈ ಉಡುಗೊರೆಗಳು ಸರ್ಕಾರದ ತೋಷಖಾನ ವಿಭಾಗಕ್ಕೆ ಸೇರಿದ್ದಾಗಿವೆ. ಇದಕ್ಕೂ ಮುನ್ನ ದೇಶದ ಗೌಪ್ಯತೆ ಸೋರಿಕೆ ಪ್ರಕರಣ (ಸೈಫರ್)ದಲ್ಲಿ ಇಮ್ರಾನ್ ಖಾನ್ ಹಾಗೂ ಅವರ ನಿಕಟವರ್ತಿ ಮತ್ತು ಮಾಜಿ ವಿದೇಶಾಂಗ ಸಚಿವ ಮೆಹಮೂದ್ ಖುರೇಷಿ ಅವರಿಗೆ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

Previous Post
10 ವರ್ಷದ ದುರಾಡಳಿತದ ನಂತರ ಈಗ ಎಚ್ಚರಗೊಂಡಿದ್ದೀರಿ: ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಕಿಡಿ
Next Post
ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

Recent News