ಇಮ್ರಾನ್ ಖಾನ್ ಪಕ್ಷ ನಿಷೇಧಿಸಲು ಪಾಕ್ ಸರ್ಕಾರ ನಿರ್ಧಾರ

ಇಮ್ರಾನ್ ಖಾನ್ ಪಕ್ಷ ನಿಷೇಧಿಸಲು ಪಾಕ್ ಸರ್ಕಾರ ನಿರ್ಧಾರ

ಇಸ್ಲಾಮಾಬಾದ್, ಜು. 17: ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷವನ್ನು ನಿಷೇಧಿಸುವುದಾಗಿ ಪಾಕಿಸ್ತಾನ ಸರ್ಕಾರ ಸೋಮವಾರ ಘೋಷಿಸಿದೆ.

ವಿದೇಶಿ ಧನಸಹಾಯ ಪ್ರಕರಣ, ಮೇ 9 ರ ಗಲಭೆ ಮತ್ತು ದೇಶದ ಗೌಪ್ಯತೆ ಸೋರಿಕೆ (ಸೈಫರ್) ಹಾಗೂ ಯುಎಸ್‌ನಲ್ಲಿ ಅಂಗೀಕರಿಸಿದ ನಿರ್ಣಯಗಳು ಖಾನ್ ಅವರ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ)ಯನ್ನು ನಿಷೇಧಿಸಲು ಪ್ರಮುಖ ಆಧಾರಗಳಾಗಿವೆ ಎಂದು ಪಾಕಿಸ್ತಾನದ ವಾರ್ತಾ ಸಚಿವ ಅತ್ತಾವುಲ್ಲಾ ತರಾರ್ ಪತ್ರಿಕಾಗೋಷ್ಠಿಯಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

71 ವರ್ಷ ವಯಸ್ಸಿನ ಇಮ್ರಾನ್ ಖಾನ್, 2022ರ ಏಪ್ರಿಲ್‌ನಲ್ಲಿ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡಾಗಿನಿಂದ ಅನೇಕ ಪ್ರಕರಣಗಳ ಹಿನ್ನೆಲೆಯಲ್ಲಿ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಇದ್ದಾರೆ. ಪಿಟಿಐ ಪಕ್ಷದ ಸಮರ ಸಾರಿರುವ ಫೆಡರಲ್ ಸರ್ಕಾರ, ಮಾಜಿ ಆಡಳಿತ ಪಕ್ಷವನ್ನು ನಿಷೇಧಿಸಲು ನಿರ್ಧರಿಸಿದೆ. ಪಿಟಿಐ ಸಂಸ್ಥಾಪಕ ಇಮ್ರಾನ್ ಖಾನ್ ಮತ್ತು ಪಾಕಿಸ್ತಾನದ ಮಾಜಿ ಅಧ್ಯಕ್ಷ ಆರಿಫ್ ಅಲ್ವಿ ವಿರುದ್ಧ ದೇಶದ್ರೋಹದ 6 ನೇ ವಿಧಿಯ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲು ನಿರ್ಧರಿಸಿದೆ ಎಂದು ಜಿಯೋ ನ್ಯೂಸ್ ಹೇಳಿದೆ.

ಪಿಟಿಐ ಪಕ್ಷ ಅಸ್ತಿತ್ವದಲ್ಲಿದ್ದರೆ ದೇಶ ಅಭಿವೃದ್ದಿಯ ದಿಕ್ಕಿನಲ್ಲಿ ಮುನ್ನಡೆಯಲು ಸಾಧ್ಯವಿಲ್ಲ ಎಂದು ಸಚಿವ ಅತ್ತಾವುಲ್ಲಾ ತರಾರ್ ಹೇಳಿದ್ದಾರೆ. ನಮ್ಮ ತಾಳ್ಮೆ ಮತ್ತು ಸಹನೆಯನ್ನು ದೌರ್ಬಲ್ಯಗಳೆಂದು ಪರಿಗಣಿಸಲಾಗುತ್ತಿದೆ. ನಮ್ಮ ಸರ್ಕಾರ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ದೇಶವನ್ನು ಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವುದರಿಂದ ಪಿಟಿಐ ಮತ್ತು ಪಾಕಿಸ್ತಾನ ಒಟ್ಟಿಗೆ ಮುನ್ನಡೆಯಲು ಸಾಧ್ಯವಿಲ್ಲ. ಪಿಟಿಐ ಪಕ್ಷವನ್ನು ನಿಷೇಧಿಸುವಂತೆ ಕೋರಿ ಫೆಡರಲ್ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದೆ ಎಂದಿದ್ದಾರೆ.

Previous Post
ಪೂಜಾ ಖೇಡ್ಕರ್ ಬಳಿಕ ಅಭಿಷೇಕ್ ಸಿಂಗ್ ಆಯ್ಕೆ ಕುರಿತು ವಿವಾದ
Next Post
ಅತೀಕ್ ಅಹ್ಮದ್​​ನ ₹ 50 ಕೋಟಿ ಮೌಲ್ಯದ ಆಸ್ತಿ ಸ್ವಾಧೀನ

Recent News