ಇವಿಎಂಗೆ ಹಾನಿ ಪ್ರಕರಣ: ಜೆಡಿಎಸ್ ಮುಖಂಡನ ವಿರುದ್ದದ ಪ್ರಕರಣ ರದ್ದತಿ ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ

ಇವಿಎಂಗೆ ಹಾನಿ ಪ್ರಕರಣ: ಜೆಡಿಎಸ್ ಮುಖಂಡನ ವಿರುದ್ದದ ಪ್ರಕರಣ ರದ್ದತಿ ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ

ನವದೆಹಲಿ, ಮೇ 20: ವಿದ್ಯುನ್ಮಾನ ಮತಯಂತ್ರ (ಇವಿಎಂ) ಗಳಿಗೆ ಹಾನಿ ಮಾಡಿ ಆರೋಪದ ಮೇಲೆ ಜೆಡಿಎಸ್‌ ಮುಖಂಡ ಬಿ ಬಿ ಪಾಟೀಲ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ದೂರು ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪಾಟೀಲ್‌ ಅವರ ಪ್ರತಿಕ್ರಿಯೆ ಕೇಳಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಪಾಟೀಲ್ ಅವರಿಗೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ನೋಟಿಸ್ ಜಾರಿ ಮಾಡಿದೆ ಎಂದು ವರದಿ ಹೇಳಿದೆ. ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠ ಜುಲೈ 2023ರಲ್ಲಿ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಬಿ ಬಿ ಪಾಟೀಲ್‌ ವಿರುದ್ಧದ ದೂರನ್ನು ತಪ್ಪಾಗಿ ಹೈಕೋರ್ಟ್‌ ರದ್ದುಗೊಳಿಸಿದೆ ಎಂದು ವಿಚಾರಣೆ ವೇಳೆ ವಾದಿಸಲಾಗಿದೆ.

ಚುನಾವಣಾ ಕರ್ತವ್ಯದಲ್ಲಿದ್ದ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ, ನಿಂದನೆ ಮತ್ತು ಇವಿಎಂ ಯಂತ್ರಗಳನ್ನು ಹಾನಿ ಮಾಡಿದ ಗುಂಪಿನ ಭಾಗವಾಗಿದ್ದ ಪಾಟೀಲ್ ಅವರ ವಿರುದ್ಧ ವಿಡಿಯೋ ಮತ್ತು ಫೋಟೋ ರೂಪದಲ್ಲಿ ಬಹಳಷ್ಟು ಸಾಕ್ಷ್ಯಗಳನ್ನು ಒದಗಿಸಲಾಗಿತ್ತು. ಅದನ್ನು ಹೈಕೋರ್ಟ್ ಗಣನೆಗೆ ತೆಗೆದುಕೊಂಡಿಲ್ಲ ಎಂದು ಸರ್ಕಾರ ದೂರಿದೆ. ಚುನಾವಣಾಧಿಕಾರಿಗಳ ಮೇಲೆ ದಾಳಿ ಮಾಡಿ, ವಾಹನಗಳನ್ನು ಜಖಂಗೊಳಿಸಿ ಇವಿಎಂ ಸೇರಿದಂತೆ ಚುನಾವಣಾ ಸಾಮಗ್ರಿಗಳನ್ನು ಧ್ವಂಸಗೊಳಿಸಿದ ಗುಂಪಿನಲ್ಲಿ ಆರೋಪಿ ಪಾಟೀಲ್‌ ಸಕ್ರಿಯ ಪಾತ್ರ ವಹಿಸಿದ್ದರು ಎಂದು ಮನವಿಯಲ್ಲಿ ತಿಳಿಸಿದೆ.

ಬಿ ಬಿ ಪಾಟೀಲ್ ಕಾನೂನುಬಾಹಿರ ಸಭೆಯ ನೇತೃತ್ವ ವಹಿಸಿದ್ದರು. ಅವರು ಅಪರಾಧ ಎಸಗಿದ್ದರು ಎಂಬುವುದನ್ನು ಚಾರ್ಜ್ ಶೀಟ್‌ನ ಭಾಗವಾಗಿರುವ ವಿಡಿಯೋ ರೆಕಾರ್ಡಿಂಗ್ ಸೂಚಿಸುತ್ತದೆ ಎಂದು ಸರ್ಕಾರ ಹೇಳಿದೆ. ಆರೋಪ ಪಟ್ಟಿಯು ಹೈಕೋರ್ಟ್‌ನ ವಿಚಾರಣೆಯ ಭಾಗವಾಗಿ ಇರಲಿಲ್ಲ ಎಂದೂ ವಿವರಿಸಿದೆ. ಕರ್ನಾಟಕ ಸರ್ಕಾರದ ಪರವಾಗಿ ವಕೀಲ ಡಿ ಎಲ್ ಚಿದಾನಂದ ವಾದ ಮಂಡಿಸಿದ್ದಾರೆ.

ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾಧಿಕಾರಿಗಳ ಮೇಲೆ ದಾಳಿ ನಡೆಸಿ ವಾಹನಗಳಿಗೆ ಹಾನಿ ಮತ್ತು ಇವಿಎಂ ಸೇರಿದಂತೆ ಚುನಾವಣಾ ಸಾಮಗ್ರಿಗಳನ್ನು ನಾಶಪಡಿಸಲು ಆರೋಪಿ ಸಕ್ರಿಯವಾಗಿ ಪಾಲ್ಗೊಂಡು ಜನಸಮೂಹವನ್ನು ಮುನ್ನಡೆಸಿದ್ದಾರೆ ಎಂದು ರಾಜ್ಯ ತನ್ನ ಮನವಿಯಲ್ಲಿ ಒತ್ತಿಹೇಳಿದೆ.

Previous Post
ಕೇಜ್ರಿವಾಲ್‌ಗೆ ಜೀವ ಬೆದರಿಕೆ ಬರಹ; PMO ಸಂಚು ಎಂದ ಆಪ್
Next Post
ಇರಾನ್ ಅಧ್ಯಕ್ಷ ರೈಸಿ ಕಾಪ್ಟರ್ ಪತನದ ಹಿಂದಿದೆಯಾ ಇಸ್ರೇಲ್?

Recent News