ಇಸ್ಮಾಯಿಲ್ ಹನಿಯೆಹ್ ಹತ್ಯೆ; ಇಸ್ರೇಲ್ ದೂಷಿಸಿದ ಐಆರ್‌ಜಿಸಿ

ಇಸ್ಮಾಯಿಲ್ ಹನಿಯೆಹ್ ಹತ್ಯೆ; ಇಸ್ರೇಲ್ ದೂಷಿಸಿದ ಐಆರ್‌ಜಿಸಿ

ನವದೆಹಲಿ, ಜು. 31: ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಬುಧವಾರ ಇರಾನ್‌ನಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಹಮಾಸ್ ಮತ್ತು ಇರಾನ್‌ನ ಎಲೈಟ್ ರೆವೆಲ್ಯೂಷನರಿ ಗಾರ್ಡ್ಸ್ (ಐಆರ್‌ಜಿಸಿ) ಪ್ರತ್ಯೇಕ ಹೇಳಿಕೆಗಳಲ್ಲಿ ತಿಳಿಸಿವೆ. ಹನಿಯೆಹ್ ಸಾವಿಗೆ ತೀವ್ರ ದುಖಃ ವ್ಯಕ್ತಪಡಿಸಿರುವ ಹಮಾಸ್, ಮಂಗಳವಾರ ಬೆಳಿಗ್ಗೆ ಟೆಹ್ರಾನ್‌ನಲ್ಲಿರುವ ನಿವಾಸದ ಮೇಲೆ ನಡೆದ ವಿಶ್ವಾಸಘಾತುಕ ಝಿಯೋನಿಸ್ಟ್ ದಾಳಿಯಲ್ಲಿ ಹನಿಯೆಹ್ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಮಂಗಳವಾರ ನಡೆದ ಇರಾನ್‌ನ ನೂತನ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಹನಿಯೆಹ್ ಭಾಗವಹಿಸಿದ್ದರು.

ಟೆಹ್ರಾನ್‌ನಲ್ಲಿರುವ ಇಸ್ಮಾಯಿಲ್ ಹನಿಯೆ ಅವರ ನಿವಾಸದ ಮೇಲೆ ದಾಳಿ ನಡೆದಿದ್ದು, ಪರಿಣಾಮ ಹನಿಯೆಹ್ ಮತ್ತು ಅವರ ಅಂಗರಕ್ಷಕರಲ್ಲಿ ಒಬ್ಬರು ಹುತಾತ್ಮರಾಗಿದ್ದಾರೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ನೀಡಲಾಗುವುದು ಎಂದು ಎಲೈಟ್ ರೆವೆಲ್ಯೂಷನರಿ ಗಾರ್ಡ್ಸ್ ತಿಳಿಸಿದೆ.

ಕಳೆದ ಏಪ್ರಿಲ್‌ನಲ್ಲಿ, ಗಾಝಾದಲ್ಲಿ ವಾಹನದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯೊಂದರಲ್ಲಿ ಹನಿಯೆಹ್‌ ಅವರ ಮೂವರು ಪುತ್ರರು ಮತ್ತು ನಾಲ್ವರು ಮೊಮ್ಮಕ್ಕಳು ಕೊಲ್ಲಲ್ಪಟ್ಟಿದ್ದರು. ಗಾಝಾದ ಅಲ್-ಶಾತಿ ಶಿಬಿರದ ಬಳಿ ಅವರು ಚಲಾಯಿಸುತ್ತಿದ್ದ ಕಾರಿಗೆ ಬಾಂಬ್ ದಾಳಿ ನಡೆಸಿ, ಹನಿಯೆಹ್ ಅವರ ಮೂವರು ಪುತ್ರರಾದ ಹಝೆಮ್, ಅಮೀರ್ ಮತ್ತು ಮೊಹಮ್ಮದ್ ಅನ್ನು ಹತ್ಯೆ ಮಾಡಲಾಗಿತ್ತು. ಹಮಾಸ್ ನಡೆಸುತ್ತಿರುವ ಮಾಧ್ಯಮಗಳ ಪ್ರಕಾರ, ದಾಳಿಯಲ್ಲಿ ಅವರ ನಾಲ್ವರು ಮೊಮ್ಮಕ್ಕಳೂ ಸಾವನ್ನಪ್ಪಿದ್ದಾರೆ.

ಕಳೆದ ತಿಂಗಳು, ಹಮಾಸ್ ಮುಖ್ಯಸ್ಥ ಸಹೋದರಿ ಸೇರಿದಂತೆ ತನ್ನ ಕುಟುಂಬದ ಹತ್ತು ಸದಸ್ಯರನ್ನು ಕಳೆದುಕೊಂಡಿದ್ದರು. ಗಾಝಾ ನಗರದಲ್ಲಿ ನಡೆದ ಮತ್ತೊಂದು ಆಪಾದಿತ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಅವರು ಕೊಲ್ಲಟ್ಟಿದ್ದರು. ಇಸ್ರೇಲ್‌ನಲ್ಲಿ ವಾಸಿಸುವ ಹನಿಯೆಹ್ ಅವರ ಇನ್ನೊಬ್ಬ ಸಹೋದರಿಯನ್ನೂ ಏಪ್ರಿಲ್‌ನಲ್ಲಿ ಭಯೋತ್ಪಾದಕ ಗುಂಪಿನ ಸಂಪರ್ಕ ಮತ್ತು ಭಯೋತ್ಪಾದಕ ಕೃತ್ಯಗಳ ಆರೋಪ ಹೊರಿಸಿ ಬಂಧಿಸಲಾಗಿತ್ತು

Previous Post
ವಯನಾಡು ದುರಂತ ಮಾನವ ನಿರ್ಮಿತ: ಮಾಧವ್ ಗಾಡ್ಗೀಳ್
Next Post
ಭೂ ಕುಸಿತ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ – ಪರಿಶೀಲನೆ

Recent News