
ನವದೆಹಲಿ, ಆ. 26: ಗಾಝಾದಲ್ಲಿ ಆಕ್ರಮಣ ನಡೆಸುತ್ತಿರುವ ಇಸ್ರೇಲ್ಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಪೂರೈಕೆಯನ್ನು ನಿಲ್ಲಿಸುವಂತೆ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟದ ಪಕ್ಷ ಜನತಾ ದಳ (ಯುನೈಟೆಡ್) ಪ್ರಧಾನ ಕಾರ್ಯದರ್ಶಿ ಕೆಸಿ ತ್ಯಾಗಿ ಒತ್ತಾಯಿಸಿದ್ದಾರೆ ಎಂದು ದಿ ವರದಿಯಾಗಿದೆ. ವಿರೋಧ ಪಕ್ಷದ ನಾಯಕರ ಜೊತೆ ದೆಹಲಿಯಲ್ಲಿ ಲೀಗ್ ಆಫ್ ಪಾರ್ಲಿಮೆಂಟೇರಿಯನ್ಸ್ ಫಾರ್ ಅಲ್ ಕುದ್ಸ್ನ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮಕ್ರಂ ಬಲಾವಿ ಅವರನ್ನು ಭಾನುವಾರ ಕೆಸಿ ತ್ಯಾಗಿ ಭೇಟಿಯಾಗಿದ್ದಾರೆ. ಲೀಗ್ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ವಿಶ್ವಸಂಸ್ಥೆಯ ನಿರ್ಣಯಗಳಿಗೆ ಅನುಸಾರವಾಗಿ ಮತ್ತು ಪಶ್ಚಿಮ ಏಷ್ಯಾದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ಯಾಲೆಸ್ತೀನ್ನ ಉದ್ದೇಶವನ್ನು ಬೆಂಬಲಿಸುವ ಜಾಗತಿಕ ಸಂಸದೀಯ ಪ್ರಯತ್ನಗಳನ್ನು ಸಂಘಟಿಸುತ್ತದೆ. ತ್ಯಾಗಿ ಮತ್ತು ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದ ಜಾವೇದ್ ಅಲಿ ಖಾನ್ ಜಂಟಿಯಾಗಿ ಸಭೆಯನ್ನು ಆಯೋಜಿಸಿದ್ದರು ಎಂದು ವರದಿಗಳು ಹೇಳಿವೆ. ಪಕ್ಷದ ಆರಂಭಿಕ ದಿನಗಳಿಂದಲೂ ಜನತಾ ದಳ (ಯುನೈಟೆಡ್) ಪ್ಯಾಲೆಸ್ತೀನಿನ ಉದ್ದೇಶಗಳನ್ನು ಬೆಂಬಲಿಸಿದೆ ಎಂದು ತ್ಯಾಗಿ ಹೇಳಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ತಿಳಿಸಿದೆ. “ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಭಾರತ ಸರ್ಕಾರವು ಪ್ಯಾಲೆಸ್ತೀನ್ ಹೋರಾಟಕ್ಕೆ ಬೆಂಬಲ ನೀಡಿದೆ. ಗಾಝಾದಲ್ಲಿ ವೃದ್ಧರು, ಮಹಿಳೆಯರು ಮತ್ತು ಮಕ್ಕಳ ಹತ್ಯೆಯನ್ನು ನಿಲ್ಲಿಸಬೇಕೆಂದು ನಾವು ಬಯಸುತ್ತೇವೆ. ಪ್ಯಾಲೆಸ್ತೀನ್ ಕುರಿತ ಯುಎನ್ ನಿರ್ಣಯಗಳನ್ನು ಇಸ್ರೇಲ್ ಗೌರವಿಸಬೇಕೆಂದು ನಾವು ಆಗ್ರಹಿಸುತ್ತೇವೆ” ಎಂದು ತ್ಯಾಗಿ ಹೇಳಿದ್ದಾರೆ. ತ್ಯಾಗಿ ಮತ್ತು ವಿರೋಧ ಪಕ್ಷದ ನಾಯಕರು ಭಾನುವಾರ ಸಭೆ ನಡೆಸಿದ ಬಳಿಕ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಇಸ್ರೇಲ್ಗೆ ಶಸ್ತ್ರಾಸ್ತ್ರಗಳನ್ನು ಪೂರೈಸದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.