ಉತ್ಪಾದನಾ ಕ್ಷೇತ್ರವನ್ನು ನಡು ನೀರಲ್ಲಿ ಕೈಬಿಟ್ಟಿರುವ ಕೇಂದ್ರ ಸರಕಾರ

ಉತ್ಪಾದನಾ ಕ್ಷೇತ್ರವನ್ನು ನಡು ನೀರಲ್ಲಿ ಕೈಬಿಟ್ಟಿರುವ ಕೇಂದ್ರ ಸರಕಾರ

ನವದೆಹಲಿ, ಮೇ 14: ಈಗಿನ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ಕಟು ವಿಮರ್ಶಕರಲ್ಲಿ ಒಬ್ಬರೆನಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗೌರನರ್ ರಘುರಾಮ್ ರಾಜನ್ ತಮ್ಮ ವಾದ ಸರಣಿ ಮುಂದುವರಿಸಿ, ಸರ್ಕಾರದ ಮ್ಯಾನುಫ್ಯಾಕ್ಚರಿಂಗ್ ನೀತಿ ಎಷ್ಟು ಲೋಪಪೂರಿತವಾಗಿದೆ ಎಂಬುದನ್ನು ತೋರಿಸಲು ಯತ್ನಿಸಿದ್ದಾರೆ. ಭಾರತ ಚೀನಾಗೆ ಪರ್ಯಾಯವಾಗಿ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ನಲ್ಲಿ ಬೆಳೆಯುವುದು ಕಷ್ಟ. ಸರ್ವಿಸ್ ಸೆಕ್ಟರ್ನತ್ತ ಹೆಚ್ಚು ಗಮನ ಕೊಡುವುದು ಒಳ್ಳೆಯದು ಎಂದು ಈ ಹಿಂದೆಯೂ ಅವರು ಹೇಳಿದ್ದರು. ಅದಕ್ಕೆ ಕೇಂದ್ರದ ಕೆಲ ಸಚಿವರಿಂದ ಖಾರದ ಪ್ರತಿಕ್ರಿಯೆಗಳು ಬಂದಿವೆ. ಈ ಬಗ್ಗೆ ರಘುರಾಮ್ ರಾಜನ್ ತಮ್ಮ ಲಿಂಕ್ಡ್ ಇನ್ ಪೋಸ್ಟ್ನಲ್ಲಿ ಬರೆದಿದ್ದು, ತಾನು ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರ ಬೆಳೆಸಬೇಕೆನ್ನುವುದನ್ನು ವಿರೋಧಿಸುತ್ತಿಲ್ಲ. ಆದರೆ, ಉದ್ಯೋಗ ಸೃಷ್ಟಿ ಮಾಡದ ಉತ್ಪಾದನಾ ವಲಯಕ್ಕೆ ಸರ್ಕಾರ ಸಬ್ಸಿಡಿ ಮೂಲಕ ಉತ್ತೇಜಿಸುತ್ತಿರುವುದನ್ನು ವಿರೋಧಿಸುತ್ತಿರುವುದಾಗಿ ಹೇಳಿದ್ದಾರೆ.
ಕಾರ್ಮಿಕ ದುಡಿಮೆ ಅಗತ್ಯ ಇರುವ ಮತ್ತು ಉದ್ಯೋಗ ಹೆಚ್ಚು ಇರುವ ಉತ್ಪಾದನಾ ಕ್ಷೇತ್ರದ ಭಾಗವನ್ನು ಸರ್ಕಾರ ನಡು ನೀರಲ್ಲಿ ಕೈಬಿಟ್ಟಿದೆ. ಆದರೆ, ಚಿಪ್ ಮ್ಯಾನುಫ್ಯಾಕ್ಚರಿಂಗ್ ಇತ್ಯಾದಿ ಕ್ಷೇತ್ರಗಳಿಗೆ ಸಖತ್ ಸಬ್ಸಿಡಿ ಆಫ್ ಮಾಡುತ್ತಿದೆ ಎಂದು ಹೇಳಿದ ರಾಜನ್, ತಮ್ಮ ವಾದಕ್ಕೆ ಔದ್ಯಮಿಕ ಉತ್ಪಾದನಾ ಸೂಚಿ (ಐಐಪಿ) ದತತಾಂಶವನ್ನು ಉದಾಹರಣೆಯಾಗಿ ನೀಡಿದ್ದಾರೆ.
ಔದ್ಯಿಕ ಉತ್ಪಾದನಾ ಸೂಚಿಯ 23 ಭಾಗಗಳು ಹಾಗೂ ಕಾರ್ಮಿಕ ಶಕ್ತಿ ಬೇಡುವ 11 ವಲಯಗಳು 2016-17ಕ್ಕೆ ಹೋಲಿಸಿದರೆ 2023ರಲ್ಲಿ ಕಳೆಗುಂದಿವೆ. ಕಾರ್ಮಿಕ ಶಕ್ತಿ ಹೆಚ್ಚು ಅಗತ್ಯ ಇರುವ ಗಾರ್ಮೆಂಟ್ಸ್ ಕ್ಷೇತ್ರದಲ್ಲಿ ಭಾರತದ ಜಾಗತಿಕ ವ್ಯವಹಾರ ಪಾಲು 2015ರಿಂದೀಚೆ ಶೇ. 20ರಷ್ಟು ಬಿದ್ದು ಹೋಗಿದೆ. ಅದೇ ವೇಳೆ ಬಾಂಗ್ಲಾದೇಶ ಮತ್ತು ವಿಯೆಟ್ನಾಂ ದೇಶಗಳ ಪಾಲು ವೃದ್ಧಿಸಿದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ. ಸರ್ಕಾರದ ಪಿಎಲ್ಐ ಸ್ಕೀಮ್ ಅನ್ನು ಪ್ರಮುಖವಾಗಿ ವಿರೋಧಿಸುತ್ತಿದ್ದಾರೆ. ಆದರೆ, ತಾನು ರಕ್ಷಣಾ ಕ್ಷೇತ್ರದಲ್ಲಿ ತರಲಾಗಿರುವ ಪಿಎಲ್ಐ ಯೋಜನೆಯನ್ನು ವಿರೋಧಿಸುತ್ತಿರುವುದಾಗಿ ಸರ್ಕಾರ ಬಿಂಬಿಸುತ್ತಿರುವುದನ್ನು ರಾಜನ್ ಅಲ್ಲಗಳೆದಿದ್ದಾರೆ.
ಕಾರ್ಮಿಕ ಶಕ್ತಿ ಬೇಡುವ ಕ್ಷೇತ್ರವನ್ನು ನರಳಲು ಬಿಟ್ಟು ಸರ್ಕಾರ ಚಿಪ್ ತಯಾರಿಕೆಗೆ ಸಬ್ಸಿಡಿ ಕೊಡುತ್ತಿದೆ. ನಮಗೆ ಪರಿಣಿತಿ ಕಡಿಮೆ ಇರುವ ಮತ್ತು ಅಮೂಲಾಗ್ರ ತಯಾರಿಕೆಗೆ ಆಸ್ಪದ ಕೊಡದ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಸಬ್ಸಿಡಿ ಸುರಿಯುತ್ತಿದೆ ಸರ್ಕಾರ. ಹಳೆಯ ತಲೆಮಾರಿ 28 ಎನ್ಎಂ ಚಿಪ್ಗಳನ್ನು ತಯಾರಿಸುವುದರಿಂದ ರಾಷ್ಟ್ರೀಯ ಭ್ರದ್ರತೆಗೆ ಹೇಗೆ ಸಹಾಯವಾದೀತು? ಚಿಪ್ ಉತ್ಪಾದನೆಗೆ ಬೇಕಾದ ಸರಬರಾಜು ಸರಪಳಿಗೆ ಬೇರೆ ದೇಸಗಳ ಮೇಲೆ ಅವಲಂಬಿತವಾಗುವುದು ತಪ್ಪುವುದಿಲ್ಲ. ಹೊಸ ತಲೆಮಾರಿನ ಸೆಲ್ ಫೋನ್ಗಳಲ್ಲಿ ಬಳಸಲಾಗುವ 3 ಎನ್ಎಂ ಮತ್ತು 2 ಎನ್ಎಂ ಚಿಪ್ಗಳನ್ನು ನಾವು ತಯಾರಿಸುವುದು ಯಾವಾಗ? ಅದಕ್ಕೆ ಎಷ್ಟು ಎಂದು ಸಬ್ಸಿಡಿ ಕೊಡುತ್ತೀರಿ?’ ಎಂದು ಮಾಜಿ ಆರ್ಬಿಐ ಗವರ್ನರ್ ಆದ ರಾಜನ್ ಪ್ರಶ್ನೆ ಮಾಡಿದ್ದಾರೆ.
ಸರ್ಕಾರ ಚಿಪ್ ತಯಾರಿಕೆಗೆ ಸಬ್ಸಿಡಿ ಕೊಡುವ ಬದಲು ಶಿಕ್ಷಣ ಗುಣಮಟ್ಟ ಹೆಚ್ಚಿಸಿದರೆ ಚಿಪ್ ಡಿಸೈನ್ ಮಾಡಬಲ್ಲಂತಹವರ ಸಂಖ್ಯೆ ಹೆಚ್ಚುತ್ತದೆ. ಸಾಕಷ್ಟು ಪರಿಣಿತಿ ಲಭ್ಯವಾದಲ್ಲಿ ಯಾವಾಗ ಬೇಕಾದರೂ ಅತ್ಯಾಧುನಿಕ ಚಿಪ್ಗಳ ತಯಾರಿಕೆ ಮಾಡಬಹುದು ಅಲ್ಲವೇ? ಎಂಬುದು ರಘುರಾಮ್ ರಾಜನ್ ಅವರ ಪ್ರಶ್ನೆ.

Previous Post
ಕೋವಿಡ್ ಲಸಿಕೆ ಅಡ್ಡಪರಿಣಾಮ: ಮೋದಿ ಸೇರಿ 28 ಮಂದಿ ವಿರುದ್ಧ ದೂರು
Next Post
20 ಸಾವಿರ ಕೋಟಿ ಖರ್ಚು ಮಾಡಿದರೂ ಗಂಗಾ ನದಿ ಇನ್ನೂ ಏಕೆ ಕೊಳೆಯಾಗಿದೆ: ಮೋದಿಗೆ ಕಾಂಗ್ರೆಸ್ ಪ್ರಶ್ನೆ

Recent News