ಎನ್‌ಕೌಂಟರ್‌: 8 ನಕ್ಸಲೀಯರ ಹತ್ಯೆ, ಓರ್ವ ಯೋಧ ಹುತಾತ್ಮ

ಎನ್‌ಕೌಂಟರ್‌: 8 ನಕ್ಸಲೀಯರ ಹತ್ಯೆ, ಓರ್ವ ಯೋಧ ಹುತಾತ್ಮ

ರಾಯಪುರ, ಜೂ. 15: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಅಬುಜ್‌ಮಾರ್‌ನಲ್ಲಿ ಶನಿವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಕನಿಷ್ಠ ಎಂಟು ನಕ್ಸಲೀಯರು ಬಲಿಯಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ.

ಮಾದ್ ಮತ್ತು ನಾರಾಯಣಪುರ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆಯುತ್ತಿದೆ. ನಾರಾಯಣಪುರ-ಕೊಂಡಗಾಂವ್-ಕಂಕೇರ್-ದಂತೇವಾಡ ಡಿಆರ್‌ಜಿ, ಎಸ್‌ಟಿಎಫ್ ಮತ್ತು ಐಟಿಬಿಪಿ 53ನೇ ಬೆಟಾಲಿಯನ್ ಪಡೆಗಳು ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿವೆ. ಎನ್‌ಕೌಂಟರ್ ಕುರಿತು ಹೇಳಿಕೆ ನೀಡಿದ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, ನಕ್ಸಲೀಯರನ್ನು ನಿರ್ಮೂಲನೆ ಮಾಡಲು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ನೀಡಿದ ಛತ್ತೀಸ್‌ಗಢ ಸಿಎಂ ವಿಷ್ಣು ದೇವ್ ಸಾಯಿ,  ನಾರಾಯಣಪುರ ಜಿಲ್ಲೆಯ ಪಿಎಸ್ ಓರ್ಚಾ ಫರಸ್ಬೇಡ-ಧೂರ್ಬೆಡಾ ನಡುವೆ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ 8 ನಕ್ಸಲೀಯರು ಸಾವನ್ನಪ್ಪಿದ ಬಗ್ಗೆ ಮಾಹಿತಿ ಇದೆ. ಎನ್‌ಕೌಂಟರ್‌ನಲ್ಲಿ ಓರ್ವ ಎಸ್‌ಟಿಎಫ್ ಜವಾನ್ ಹುತಾತ್ಮರಾಗಿದ್ದಾರೆ ಮತ್ತು ಇಬ್ಬರು ಜವಾನರು ಗಾಯಗೊಂಡಿರುವ ದುಃಖದ ಸುದ್ದಿಯೂ ಇದೆ. ಗಾಯಗೊಂಡ ಯೋಧರನ್ನು ಚಿಕಿತ್ಸೆಗಾಗಿ ತಕ್ಷಣವೇ ರಾಯ್‌ಪುರಕ್ಕೆ ರವಾನಿಸಲಾಗುತ್ತಿದೆ. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಮತ್ತು ಗಾಯಗೊಂಡ ಯೋಧರು ಶೀಘ್ರ ಚೇತರಿಸಿಕೊಳ್ಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದರಿಂದ ನಕ್ಸಲೀಯರು ವಿಚಲಿತರಾಗಿದ್ದಾರೆ. ನಮ್ಮ ಸರ್ಕಾರ ಅವುಗಳನ್ನು ತೊಡೆದುಹಾಕಲು ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಗುರಿಯನ್ನು ಸಾಧಿಸುವವರೆಗೆ ನಾವು ಸುಮ್ಮನಿರುವುದಿಲ್ಲ ಎಂದು ಹೇಳಿದ್ದಾರೆ.

ಭದ್ರತಾ ಪಡೆಗಳು “ಕೆಂಪು ಕಾರಿಡಾರ್”ಗಳಲ್ಲಿ ನಕ್ಸಲೀಯರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿವೆ ಮತ್ತು ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ಬಲಪಡಿಸಿವೆ. ಛತ್ತೀಸ್‌ಗಢದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ನಕ್ಸಲೀಯರ ವಿರುದ್ಧ ಕ್ರಮಗಳು ಹೆಚ್ಚಿವೆ ಮತ್ತು ನಾವು ಅವರ ವಿರುದ್ಧ ಪ್ರಬಲ ಹೋರಾಟ ನಡೆಸುತ್ತಿದ್ದೇವೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ನಕ್ಸಲಿಸಂ ಕೊನೆಗೊಳ್ಳಬೇಕು ಎಂದು ಬಯಸುತ್ತಾರೆ ಎಂದು ವಿಷ್ಣು ದೇವ್ ಸಾಯಿ ಹೇಳಿದ್ದಾರೆ.

ಏಪ್ರಿಲ್ 16 ರಂದು, ಕಂಕೇರ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು 29 ನಕ್ಸಲೀಯರನ್ನು ಹೊಡೆದುರುಳಿಸಿದರೆ, ನಾರಾಯಣಪುರ ಜಿಲ್ಲೆಯ ಅಬುಜ್ಮಾರ್ ಪ್ರದೇಶದಲ್ಲಿ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ 10 ನಕ್ಸಲೀಯರ ಹತ್ಯೆ ನಡೆದಿತ್ತು.

Previous Post
ಭಾರತ-ಮಧ್ಯಪ್ರಾಚ್ಯ-ಯುರೋಪ್‌ ಆರ್ಥಿಕ ಕಾರಿಡಾರ್‌ ಸಹಕಾರಕ್ಕೆ ಒಪ್ಪಿಗೆ
Next Post
ಎಚ್.ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಗಳಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ

Recent News