ಎಫ್‌ಸಿಐ ಗೋದಾಮಿನಲ್ಲಿ ಕೊಳೆಯುತ್ತಿರುವ 18 ಮಿಲಿಯನ್ ಟನ್ ಅಕ್ಕಿ

ಎಫ್‌ಸಿಐ ಗೋದಾಮಿನಲ್ಲಿ ಕೊಳೆಯುತ್ತಿರುವ 18 ಮಿಲಿಯನ್ ಟನ್ ಅಕ್ಕಿ

ನವದೆಹಲಿ, ಮೇ 15: ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಗೋದಾಮುಗಳಲ್ಲಿ 18 ಮಿಲಿಯನ್ ಟನ್‌ಗಿಂತಲೂ ಹೆಚ್ಚು ಅಕ್ಕಿ ಕೊಳೆಯುತ್ತಿದ್ದು, ಅದನ್ನು ವಿಲೇವಾರಿ ಮಾಡಲು ಕೇಂದ್ರ ಸರ್ಕಾರ ಪರದಾಡುತ್ತಿದೆ ಎಂದು ವರದಿಗಳು ಹೇಳಿವೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆವೈ) ಅಡಿಯಲ್ಲಿ ಬಡವರಿಗೆ ಉಚಿತವಾಗಿ ವಿತರಿಸುವ ಅಕ್ಕಿಯ ವಿಶೇಷಣಗಳನ್ನು ಪರಿಷ್ಕರಿಸುವ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ, ಎಫ್‌ಸಿಐ ಗೋದಾಮುಗಳಲ್ಲಿರುವ ಅಕ್ಕಿ ವಿಲೇವಾರಿಗೆ ಸರ್ಕಾರ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ. ಸಿಫ್ಟರ್‌ಗಳು, ಗ್ರೇಡರ್‌ಗಳು ಮತ್ತು ಇತರ ಯಂತ್ರೋಪಕರಣಗಳ ಕೊರತೆಯಿಂದ ಗರೀಬ್ ಕಲ್ಯಾಣ್ ಯೋಜನೆಯ ಅಕ್ಕಿ ಪರಿಷ್ಕರಿಸುವ ಪ್ರಸ್ತಾವನೆಯು ತುಂಬಾ ದುಬಾರಿ ಮತ್ತು ಶ್ರಮದಾಯಕವೆಂದು ಕಂಡು ಬಂದಿದೆ ಎಂದು ಇಬ್ಬರು ಅಧಿಕಾರಿಗಳು ಉಲ್ಲೇಖಿಸಿ livemint.com ವರದಿ ಮಾಡಿದೆ.

ಪಿಎಂಜಿಕೆವೈ ಅಡಿಯಲ್ಲಿ ಅಕ್ಕಿ ಹಂಚಿಕೆಯನ್ನು ಹೆಚ್ಚಿಸುವುದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ನೌಕರರಿಗೆ ಉಚಿತ ಆಹಾರವನ್ನು ನೀಡುವುದು ಮತ್ತು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಇಎಂಎಸ್‌ಎಸ್‌) ಅಡಿಯಲ್ಲಿ ಅಕ್ಕಿ ಬೆಲೆಯನ್ನು ಕಡಿಮೆ ಮಾಡುವುದು ಪ್ರಸ್ತುತ ಎಫ್‌ಸಿಐ ಮೇಜಿನ ಮೇಲೆ ಇರುವ ಪ್ರಸ್ತಾವಣೆಗಳಾಗಿವೆ. ಇವುಗಳನ್ನು ಕಾರ್ಯಗತಗೊಳಿಸುವುದು ಅಸಾಧ್ಯ ಎಂಬುವುದು ಸರ್ಕಾರಕ್ಕೆ ಮನದಟ್ಟಾಗಿದೆ. ಎಫ್‌ಸಿಐ ಗೋದಾಮುಗಳಲ್ಲಿ 18 ಮಿಲಿಯನ್ ಟನ್‌ಗಿಂತಲೂ ಹೆಚ್ಚು ಅಕ್ಕಿ ಸುಮ್ಮನೆ ಕೊಳೆಯುತ್ತಿದೆ ಎಂಬ ವರದಿ ನೋಡಿದ ರಾಜ್ಯ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಹಲವು ಪ್ರಶ್ನೆಗಳನ್ನು ಎತ್ತಿದೆ.

“ಬಡವರ ಹೊಟ್ಟೆಗೆ ವಂಚಿಸುವುದಕ್ಕಿಂತ ದೊಡ್ಡ ಕ್ರೌರ್ಯ ಇನ್ನೊಂದಿಲ್ಲ. 18 ಮಿಲಿಯನ್ ಟನ್ ಅಕ್ಕಿ ಹುಳು ಹಿಡಿದರೂ ಪರವಾಗಿಲ್ಲ, ಬಡವರ ಹೊಟ್ಟೆಗೆ ಅನ್ನವಾಗಬಾರದು ಎನ್ನುವ ಕೇಂದ್ರ ಸರ್ಕಾರದ ಧೂರ್ತತನಕ್ಕೆ ಜನತೆ ಪಾಠ ಕಲಿಸಲಿದ್ದಾರೆ. ಅನ್ನಭಾಗ್ಯ ಯೋಜನೆಗಾಗಿ ರಾಜ್ಯ ಸರ್ಕಾರ ಕೆಜಿಗೆ 34 ರೂಪಾಯಿಯಂತೆ ಖರೀದಿಗೆ ಕೇಳಿದರೂ ಕೊಡಲೊಪ್ಪದ ಕೇಂದ್ರ ಸರ್ಕಾರ, ಈಗ ಗೋದಾಮುಗಳಲ್ಲಿ ದಾಸ್ತಾನಿರುವ ಅಕ್ಕಿಯನ್ನು ಖಾಲಿ ಮಾಡಲು ಪರದಾಡುತ್ತಿದೆ” ಎಂದು ಕಾಂಗ್ರೆಸ್‌ ಎಕ್ಸ್‌ ಪೋಸ್ಟ್‌ನಲ್ಲಿ ಹೇಳಿದೆ.
“ಅಕ್ಕಿ ರಾಜಕೀಯ ಮಾಡಿದ ಕೇಂದ್ರ ಸರ್ಕಾರಕ್ಕೆ ಕೆಲವು ಪ್ರಶ್ನೆಗಳು” ಎಂದು ಕೆಳಗಿನ ಪ್ರಶ್ನೆಗಳನ್ನು ಕೇಳಿದೆ.
1. 24 ರೂಪಾಯಿಯ ಭಾರತ್ ಅಕ್ಕಿ ಕೇವಲ ಚುನಾವಣಾ ಗಿಮಿಕ್ ಆಗಿ ಉಳಿಯಿತೇ?
2. ಖಾಸಗಿ ಕಂಪೆನಿಗಳೂ ಸಹ ಕೇಂದ್ರ ಆಹಾರ ನಿಗಮದ ಅಕ್ಕಿಯನ್ನು ಖರೀದಿಸಲು ಮುಂದಾಗಲಿಲ್ಲವೇ?
3. ಖಾಲಿ ಮಾಡಲಾಗದಷ್ಟು ಅಕ್ಕಿ ಇದ್ದರೂ ಕನ್ನಡಿಗರಿಗೆ ವಂಚಿಸಿದ್ದೇಕೆ?
4. ನಮ್ಮ ಸರ್ಕಾರ ಕೆಜಿಗೆ ₹34 ಕೊಟ್ಟು ಖರೀದಿಸಿದ್ದಿದ್ದರೆ ಆಹಾರ ನಿಗಮಕ್ಕೆ ಲಾಭವಾಗುತ್ತಿತ್ತು, ಆ ಲಾಭವನ್ನು ತಪ್ಪಿಸಿ ನಷ್ಟಕ್ಕೆ ತಳ್ಳಿದ್ದೇಕೆ?

“ಕನ್ನಡಿಗರಿಗೆ ಅಕ್ಕಿ ನೀಡದೆ ದ್ರೋಹ ಮಾಡಿದಿರಲ್ಲ, ಕನ್ನಡಿಗರು ನಿಮಗೆ ಯಾವ ಜನ್ಮದ ಶತ್ರುಗಳು?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ 10 ಕೆ.ಜಿ ಅಕ್ಕಿ ವಿತರಿಸಲು ಮುಂದಾಗಿತ್ತು. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಎಫ್‌ಸಿಐ ಗೋದಾಮಿನಿಂದ ಅಕ್ಕಿ ಪೂರೈಸುವಂತೆ ಕೋರಿತ್ತು. ಆದರೆ, ಕೇಂದ್ರ ಸರ್ಕಾರ ರಾಜಕೀಯ ಕಾರಣಕ್ಕೆ ಅಕ್ಕಿ ನೀಡಿಲ್ಲ ಎಂಬ ಆರೋಪವಿದೆ. ಕೊನೆಗೆ ಎಲ್ಲೂ ಸಾಕಷ್ಟು ಅಕ್ಕಿ ಸಿಗದಿದ್ದಾಗ ರಾಜ್ಯ ಸರ್ಕಾರ 5 ಕೆ.ಜಿ ಅಕ್ಕಿ ಮತ್ತು ಇನ್ನುಳಿದ 5 ಕೆ.ಜಿ ಅಕ್ಕಿಯ ಹಣವನ್ನು ಪಡಿತರ ಚೀಟಿದಾರರ ಖಾತೆಗೆ ಹಾಕಲು ನಿರ್ಧರಿಸಿತ್ತು. ಅದರಂತೆ, ಈಗ ಯೋಜನೆ ಮುಂದುವರೆಯುತ್ತಿದೆ.

Previous Post
ಇನ್ಫೋಸಿಸ್‌ಗೆ ಭಾರೀ ದಂಡ ವಿಧಿಸಿದ ಕೆನಡಾ ಸರಕಾರ
Next Post
ಪ್ರಬೀರ್ ಪುರಕಾಯಸ್ಥ ಬಂಧನ ಅಸಿಂಧು: ತಕ್ಷಣ ಬಿಡುಗಡೆಗೆ ಸುಪ್ರೀಂ ಆದೇಶ

Recent News