ಐಟಿ ದಾಳಿ ಸುರಾನಾ ಜ್ಯುವೆಲರ್ಸ್ ಮಾಲೀಕರ ಕಚೇರಿಯಲ್ಲಿ 26 ಕೋಟಿ ನಗದು ಪತ್ತೆ

ಐಟಿ ದಾಳಿ ಸುರಾನಾ ಜ್ಯುವೆಲರ್ಸ್ ಮಾಲೀಕರ ಕಚೇರಿಯಲ್ಲಿ 26 ಕೋಟಿ ನಗದು ಪತ್ತೆ

ನಾಸಿಕ್‌ : ಸುರಾನಾ ಜ್ಯುವೆಲರ್ಸ್ ಮತ್ತು ಮಾಲೀಕರ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ದಾಳಿಯಲ್ಲಿ ಐಟಿ ಇಲಾಖೆಯ ಅಧಿಕಾರಿಗಳು ಲೆಕ್ಕಕ್ಕೆ ಸಿಗದ 26 ಕೋಟಿ ರೂಪಾಯಿ ನಗದು ಮತ್ತು 90 ಕೋಟಿ ರೂಪಾಯಿ ಮೌಲ್ಯದ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಸುರಾನಾ ಜ್ಯುವೆಲರ್ಸ್ ಆಡಳಿತ ಮಂಡಳಿಯಿಂದ ತೆರಿಗೆ ವಂಚನೆ ಆರೋಪದ ಹಿನ್ನೆಲೆ ಮೇ 23ರ ಸಂಜೆಯಿಂದ ಸುಮಾರು 30 ಗಂಟೆಗಳ ಕಾಲ ಐಟಿ ಇಲಾಖೆ ದಾಳಿ ನಡೆಸಿ ಅಪಾರ ಪ್ರಮಾಣದ ನಗದನ್ನು ವಶಪಡಿಸಿಕೊಂಡಿದೆ.

ಮೇ 23ರಂದು ಸಂಜೆ ಐಟಿ ತನಿಖಾ ಇಲಾಖೆಯ ಮಹಾನಿರ್ದೇಶಕ ಸತೀಶ್ ಶರ್ಮಾ ನೇತೃತ್ವದಲ್ಲಿ ಅಧಿಕಾರಿಗಳು ಸುರಾನಾ ಜ್ಯುವೆಲರ್ಸ್ ಕಚೇರಿ ಮೇಲೆ ದಾಳಿ ನಡೆಸಿದ್ದರು. ಕಾರ್ಯಾಚರಣೆಯಲ್ಲಿ ನಾಸಿಕ್, ನಾಗ್ಪುರ ಮತ್ತು ಜಲಗಾಂವ್ ತಂಡದಿಂದ 50-55 ಜನರು ಭಾಗವಹಿಸಿದ್ದರು. ಇದೇ ವೇಳೆ ರಾಕಾ ಕಾಲೋನಿಯಲ್ಲಿರುವ ಸುರಾನಾ ಜ್ಯುವೆಲರ್ಸ್ ಮಾಲೀಕರ ಬಂಗಲೆಯಲ್ಲೂ ತಪಾಸಣೆ ನಡೆಸಲಾಯಿತು. ಅಲ್ಲದೆ ವಿವಿಧ ಸ್ಥಳಗಳಲ್ಲಿರುವ ಖಾಸಗಿ ಲಾಕರ್‌ಗಳು ಮತ್ತು ಬ್ಯಾಂಕ್ ಲಾಕರ್‌ಗಳನ್ನು ಪರಿಶೀಲಿಸಲಾಯಿತು. ಮನ್ಮಾಡ್‌ನ ನಂದಗಾಂವ್‌ನಲ್ಲಿರುವ ಸುರಾನಾ ಜ್ಯುವೆಲರ್ಸ್ ಮಾಲೀಕರ ಕುಟುಂಬ ಸದಸ್ಯರ ಮನೆಗಳಲ್ಲಿಯೂ ಶೋಧ ನಡೆಸಲಾಯಿತು.

ಆದಾಯ ತೆರಿಗೆ ಅಧಿಕಾರಿಗಳು ಆರಂಭದಲ್ಲಿ ಕಚೇರಿಗಳು ಮತ್ತು ಖಾಸಗಿ ಲಾಕರ್‌ಗಳಲ್ಲಿ ಅಲ್ಪ ಪ್ರಮಾಣದ ನಗದು ಮಾತ್ರ ಪತ್ತೆ ಹಚ್ಚಿದ್ದರು. ಬಳಿಕ ಸುರಾನಾ ಜ್ಯುವೆಲರ್ಸ್ ಮಾಲೀಕರ ಸಂಬಂಧಿಯೊಬ್ಬರ ಐಷಾರಾಮಿ ಬಂಗಲೆಯನ್ನು ಪರಿಶೀಲಿಸಿದಾಗ ಲಾಕರ್‌ಗಳಲ್ಲಿಯೂ ಹಣ ಇರಲಿಲ್ಲ. ಈ ವೇಳೆ ಅಧಿಕಾರಿಗಳು ಅನುಮಾನಗೊಂಡು ಬಂಗಲೆಯಲ್ಲಿದ್ದ ಪೀಠೋಪಕರಣಗಳನ್ನು ಒಡೆದು ನೋಡಿದಾಗ ರಾಶಿಗಟ್ಟಲೆ ಹಣ ಹೊರಬಿದ್ದಿದೆ. 14 ಗಂಟೆಗಳ ಕಾಲ ಶ್ರಮವಹಿಸಿ ಜ್ಯುವೆಲರ್ಸ್ ಮಾಲೀಕರ ಸಂಬಂಧಿಕರ ಬಂಗಲೆಯಲ್ಲಿ ಜಪ್ತಿ ಮಾಡಿದ್ದ ನಗದನ್ನು ಎಣಿಸಿದ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

Previous Post
ಸ್ವಾತಿ ಮಲಿವಾಲಗೆ ಅತ್ಯಚಾರ, ಕೊಲೆ ಬೆದರಿಕೆ
Next Post
ಕಾಂಗ್ರೆಸ್​, ಎಸ್​ಪಿ ಪಕ್ಷಗಳಿಗೆ ಗಡಿಯಾಚೆಗಿನ ಜಿಹಾದಿಗಳು ಬೆಂಬಲಿಸುತ್ತಿದ್ದಾರೆ: ಪ್ರಧಾನಿ ಮೋದಿ

Recent News