ಐಪಿಎಲ್ ಇತಿಹಾಸದಲ್ಲಿ ಎರಡು ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಪ್ರತಿ ಪಂದ್ಯ ಆಡಿದಾಗಲೂ ಏನಾದರೂ ಒಂದು ದಾಖಲೆ ಆಗುತ್ತಲೇ ಇರುತ್ತದೆ. ಭಾನುವಾರ ಕೂಡ ಅವರ ಒಂದು ಇನ್ನಿಂಗ್ಸ್ ಮೂಲಕ ಐಪಿಎಲ್‌ನಲ್ಲಿ ಎರಡು ಹೊಸ ದಾಖಲೆ ಬರೆದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬ್ಯಾಟರ್ ವಿರಾಟ್ ಕೊಹ್ಲಿ ಪ್ರಸ್ತುತ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಾಯಕ ಶಿಖರ್ ಧವನ್ ಅವರನ್ನು ಹಿಂದಿಕ್ಕಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ರನ್ ಚೇಸ್‌ನಲ್ಲಿ ಹೆಚ್ಚು ಅರ್ಧ ಶತಕ ಬಾರಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾನುವಾರ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಕೊಹ್ಲಿ 44 ಎಸೆತಗಳಲ್ಲಿ 159.09 ರ ಸ್ಟ್ರೈಕ್ ರೇಟ್‌ನಲ್ಲಿ 70 ರನ್ ಗಳಿಸಿದರು. ಐಪಿಎಲ್ ಪಂದ್ಯಾವಳಿಗಳಲ್ಲಿ ಅತಿ ಹೆಚ್ಚು ಬಾರಿ 500 ರನ್ ಗಳಿಸಿದ ಡೇವಿಡ್ ವಾರ್ನರ್ ಅವರ ದಾಖಲೆಯನ್ನು ಸರಿಗಟ್ಟಿದರು. ಕೊಹ್ಲಿ ಮತ್ತು ವಾರ್ನರ್ ಇಬ್ಬರೂ ಐಪಿಎಲ್ ಋತುವಿನಲ್ಲಿ ಏಳು ಬಾರಿ 500 ರನ್ ಗಡಿ ದಾಟಿದ್ದಾರೆ. ಚೇಸಿಂಗ್ ಮಾಡುವಾಗ ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ ಸದ್ಯ ಎರಡನೇ ಸ್ಥಾನದಲ್ಲಿದ್ದಾರೆ. ಡೇವಿಡ್ ವಾರ್ನರ್ 35 ಅರ್ಧ ಶತಕಗಳೊಂದಿಗೆ ಅಗ್ರಸ್ಥಾನದಲ್ಲಿ ನಿಂತಿದ್ದಾರೆ. ಶಿಖರ್ ಧವನ್ 23 ಅರ್ಧಶತಕ ಸಿಡಿಸಿದ್ದಾರೆ. ಭಾರತೀಯ ಆಟಗಾರರ ಪೈಕಿ ವಿರಾಟ್ ಕೊಹ್ಲಿ ಸದ್ಯ ಅಗ್ರಸ್ಥಾನದಲ್ಲಿದ್ದಾರೆ.
ಟೀಕಾಕಾರರಿಗೆ ಉತ್ತರ ಜೂನ್ 1 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಗೆ ಯಾವುದೇ ಕ್ಷಣದಲ್ಲಾದರೂ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಅನುಮಾನ ಇಲ್ಲವಾದರೂ, ಕೆಲವರು ಮಾತ್ರ ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಸ್ಪಿನ್ ವಿರುದ್ಧ ಕೊಹ್ಲಿ ಉತ್ತಮವಾಗಿ ಆಡಲ್ಲ ಎಂದು ಕೂಡ ಟೀಕೆ ವ್ಯಕ್ತವಾಗಿತ್ತು.
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಈ ಎರಡೂ ಟೀಕೆಗಳಿಗೆ ಉತ್ತರ ಕೊಟ್ಟರು. 44 ಎಸೆತಗಳಲ್ಲಿ 6 ಬೌಂಡರಿ 3 ಸಿಕ್ಸರ್ ಸಹಿತ 70 ರನ್ ಗಳಿಸಿದರು. ಅವರ ಸ್ಟ್ರೈಕ್‌ರೇಟ್ 159 ಆಗಿತ್ತು. ರಶೀದ್ ಖಾನ್, ನೂರ್ ಅಹಮದ್ ಮತ್ತು ಸಾಯಿ ಕಿಶೋರ್ ಅವರಂತಹ ಬೆಸ್ಟ್ ಸ್ಪಿನ್ ದಾಳಿಗೆ ಕೊಹ್ಲಿ ಬೌಂಡರಿ ಗಳಿಸಿದ್ದು, ತಮ್ಮ ವಿರುದ್ಧದ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರ ಕೊಟ್ಟರು.