ಕರ್ನಾಟಕದ ಕೊಬ್ಬರಿ ಬೆಳೆಗಾರರಿಗೆ ಸಿಹಿ ಸುದ್ದಿ ಹೆಚ್ಚುವರಿ ಖರೀದಿಗೆ ಕೇಂದ್ರ ಸರ್ಕಾರದ ಒಪ್ಪಿಗೆ

ಕರ್ನಾಟಕದ ಕೊಬ್ಬರಿ ಬೆಳೆಗಾರರಿಗೆ ಸಿಹಿ ಸುದ್ದಿ ಹೆಚ್ಚುವರಿ ಖರೀದಿಗೆ ಕೇಂದ್ರ ಸರ್ಕಾರದ ಒಪ್ಪಿಗೆ

ನವದೆಹಲಿ : 2024 ನೇ ಸಾಲಿನಲ್ಲಿ ರಾಜ್ಯ ಸರ್ಕಾರಕ್ಕೆ 2999 ಮೆ.ಟನ್ ಕೊಬ್ಬರಿ ಖರೀದಿಗೆ ಅನುಮತಿಸಿದ್ದ ಕೇಂದ್ರ ಸರ್ಕಾರವು ಈಗ 7500 ಮೆಟ್ರಿಕ್ ಟನ್ ಹೆಚ್ಚುವರಿ ಖರೀದಿಗೆ ಅನುಮತಿ ನೀಡಿದೆ. ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಮಧ್ಯಸ್ಥಿಕೆ ಬಳಿಕ ಕೇಂದ್ರ ಸರ್ಕಾರ ಪರಿಷ್ಕೃತ ಆದೇಶ ಮಾಡಿದೆ.

ಈ ಸೌಲಭ್ಯವನ್ನು ದಕ್ಷಿಣ ಕನ್ನಡ, ಹಾಸನ ಮತ್ತು ಉಡುಪಿ ಜಿಲ್ಲೆಗಳಿಗೆ ವಿಸ್ತರಿಸಲಾಗಿದ್ದು, ಅತಿ ಹೆಚ್ಚು ಕೊಬ್ಬರಿ ಬೆಳೆಯುವ ಜಿಲ್ಲೆಯಾದ ತುಮಕೂರು, ರಾಮನಗರ, ಮಂಡ್ಯ ಜಿಲ್ಲೆಗಳೊಂದಿಗೆ ಇತರೆ ಜಿಲ್ಲೆಗಳು ಈ ಸೌಲಭ್ಯದಿಂದ ಅನುಕೂಲವಾಗಲಿದೆ.

ಕೆಲವು ಜಿಲ್ಲೆಗಳು ವಂಚಿತವಾಗಿದ್ದನ್ನು ಮನಗಂಡ ಸಚಿವ ಸೋಮಣ್ಣ ರಾಜ್ಯ ಸರ್ಕಾರಕ್ಕೆ ಈ ವಿಷಯವನ್ನು ಮನವರಿಕೆ ಮಾಡಿ ಹೊಸ ಪ್ರಸ್ತಾವನೆಯೊಂದನ್ನು ಸಲ್ಲಿಸುವಂತೆ ತಿಳಿಸಿದರು. ಅದರಂತೆ ರಾಜ್ಯ ಸರ್ಕಾರವು ತುಮಕೂರು, ರಾಮನಗರ, ಮಂಡ್ಯ, ಚಿತ್ರದುರ್ಗ, ಚಿಕ್ಕಮಗಳೂರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಈ ಸೌಲಭ್ಯವನ್ನು ವಿಸ್ತರಿಸುವ ಮತ್ತು ಖರೀದಿ ಮಿತಿಯನ್ನು 2999 ಮೆ.ಟನ್ ನಿಂದ 10000 ಮೆ.ಟನ್ ಗಳಿಗೆ ಏರಿಸುವಂತೆ ಕೋರಿದ ಪ್ರಸ್ತಾವನೆಯನ್ನು ಸಲ್ಲಿಸಿತು.

ಕೇಂದ್ರ ಸಚಿವ ಸೋಮಣ್ಣ ಸದರಿ ಪ್ರಸ್ತಾವನೆಗೆ ಕೂಡಲೇ ಒಪ್ಪಿಗೆ ನೀಡುವಂತೆ, ಕೇಂದ್ರ ಸರ್ಕಾರದ ಮಾನ್ಯ ಕೃಷಿ ಸಚಿವರೊಂದಿಗೆ ಮಾಡಿದ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ 2024 ನೇ ಸಾಲಿಗೆ ಮಿಲ್ಲಿಂಗ್ ಕೋಪ್ರ ಖರೀದಿ ಮಿತಿಯನ್ನು 10500 ಮೆ.ಟನ್ ಗಳಿಗೆ ಏರಿಸಿ ಆದೇಶ ಹೊರಡಿಸಿದೆ.

ಆದೇಶದ ಬಳಿಕ ಮಾಧ್ಯಮ ಪ್ರಕಟಣೆ ನೀಡಿರುವ ಸೋಮಣ್ಣ, ರಾಜ್ಯದ ರೈತರ ಹಿತಾಸಕ್ತಿಗೆ ಪೂರಕವಾದ ನಿರ್ಣಯವನ್ನು ತುರ್ತಾಗಿ ಕೈಗೊಂಡ ಪ್ರಧಾನಿ ನರೇಂದ್ರ ಮೋದಿಯವರಿಗೂ ಮತ್ತು ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾನ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

Previous Post
ಜುಲೈ ಅಂತ್ಯಕ್ಕೆ ಬಿಜೆಪಿ ಆಡಳಿತ ರಾಜ್ಯಗಳ ಸಭೆ
Next Post
ಕಮಾಂಡೋ ಕಾರ್ಯಚರಣೆ ; 12 ನಕ್ಸಲರು ಸಾವು

Recent News