ಕರ್ನಾಟಕ ಸೇರಿ 6 ರಾಜ್ಯಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರೆಡಿ

ಕರ್ನಾಟಕ ಸೇರಿ 6 ರಾಜ್ಯಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರೆಡಿ

ನವದೆಹಲಿ, ಮಾ: ಮೊದಲ ಹಂತದ 10 ರಾಜ್ಯಗಳ ಪೈಕಿ 6 ರಾಜ್ಯಗಳಿಗೆ ಕಾಂಗ್ರೆಸ್‌ ಬಹುತೇಕ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ ಎಂದು ಪಕ್ಷದ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ. ಗುರುವಾರ ಸಂಜೆ ಪ್ರಾರಂಭಗೊಂಡ ಕಾಂಗ್ರೆಸ್ ಚುನಾವಣಾ ಸಮಿತಿಯ ಮೊದಲ ಸಭೆ ತಡರಾತ್ರಿ ಮುಕ್ತಾಯಗೊಂಡಿತ್ತು. ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವೇಣುಗೋಪಾಲ್, ಅಭ್ಯರ್ಥಿಗಳ ಆಯ್ಕೆ ಬಹುತೇಕ ಅಂತಿಮಗೊಂಡಿರುವುದಾಗಿ ಹೇಳಿದ್ದಾರೆ.
ಕೇರಳ, ಕರ್ನಾಟಕ, ತೆಲಂಗಾಣ, ಛತ್ತೀಸ್‌ಗಢ, ದೆಹಲಿ ಮತ್ತು ಲಕ್ಷದ್ವೀಪದ ಲೋಕಸಭಾ ಕ್ಷೇತ್ರಗಳಿಗೆ ನಾವು ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದೇವೆ. ಇನ್ನೂ ಪ್ರಕ್ರಿಯೆ ಮುಂದುವರೆಯುತ್ತಿದೆ. ಶೀಘ್ರದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು” ಎಂದು ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.

ವರದಿಗಳ ಪ್ರಕಾರ, ರಾಹುಲ್ ಗಾಂಧಿ ಅವರು ಕೇರಳದ ವಯನಾಡ್‌ನಿಂದ, ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಛತ್ತೀಸ್‌ಗಢದ ರಾಜನಂದಗಾಂವ್‌ನಿಂದ ಮತ್ತು ಜ್ಯೋತ್ಸ್ನಾ ಮಹಂತ್ ಕೊರ್ಬಾದಿಂದ ಮತ್ತೆ ಸ್ಪರ್ಧಿಸಲಿದ್ದಾರೆ. ಅಲ್ಲದೆ, ಛತ್ತೀಸ್‌ಗಢದ ಎಲ್ಲ ಪ್ರಮುಖ ನಾಯಕರು ಚುನಾವಣಾ ಕಣದಲ್ಲಿದ್ದಾರೆ. ಕೇರಳದ 20 ಸ್ಥಾನಗಳ ಪೈಕಿ 16 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಕೇಂದ್ರದ ಮಾಜಿ ಸಚಿವ ಹಾಗೂ ತಿರುವನಂತಪುರದ ಹಾಲಿ ಸಂಸದ ಶಶಿ ತರೂರ್ ಅಭ್ಯರ್ಥಿಗಳ ಪೈಕಿ ಸೇರಿದ್ದಾರೆ ಎಂದು ವರದಿಯಾಗಿದೆ. ಕರ್ನಾಟಕದಲ್ಲಿ ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವರನ್ನು ಕಣಕ್ಕಿಳಿಸುವ ಸಾಧ್ಯತೆಯಿಲ್ಲ. ಬಹುತೇಕ ಸಚಿವರು ರಾಷ್ಟ್ರೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿಲ್ಲ ಎಂದು ತಿಳಿದು ಬಂದಿದೆ.

ರಾಜ್ಯದ ಅಭ್ಯರ್ಥಿಗಳ ಪೈಕಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹೋದರ, ಸಂಸದ ಡಿ.ಕೆ ಸುರೇಶ್ ಕೂಡ ಇದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆಯೂ ಇನ್ನೂ ಯಾವುದೇ ನಿರ್ಧಾರವಾಗಿಲ್ಲ. ಚುನಾವಣಾ ಸಮಿತಿಯು ಸೋಮವಾರ ಮತ್ತೆ ಸಭೆ ಸೇರಲಿದೆ. ಅಂದು ದೆಹಲಿ, ಛತ್ತೀಸ್‌ಗಢ, ತೆಲಂಗಾಣ, ಕರ್ನಾಟಕ, ಕೇರಳ, ಮಣಿಪುರ, ಮೇಘಾಲಯ, ತ್ರಿಪುರ, ಸಿಕ್ಕಿಂ ಮತ್ತು ಲಕ್ಷದ್ವೀಪದ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ. ಈಶಾನ್ಯ ರಾಜ್ಯಗಳಿಗೆ ಮುಂದಿನ ಹಂತದಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಬರೋಬ್ಬರಿ 90 ಸ್ಥಾನಗಳನ್ನು ಹೊಂದಿರುವ ಎರಡು ನಿರ್ಣಾಯಕ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಬಂಗಾಳದಲ್ಲಿ ಕಾಂಗ್ರೆಸ್ ಇನ್ನೂ ಸೀಟು ಹಂಚಿಕೆ ಸಮಸ್ಯೆಯನ್ನು ಬಗೆಹರಿಸಿಲ್ಲ. ಈ ನಡುವೆ ಇತರ ರಾಜ್ಯಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಕಾರ್ಯ ಪ್ರವೃತ್ತವಾಗಿದೆ. ಮಹಾರಾಷ್ಟ್ರದ 48 ಸ್ಥಾನಗಳ ಸೀಟು ಹಂಚಿಕೆಯ ಕುರಿತು ಮಹಾ ವಿಕಾಸ್ ಅಘಾಡಿ ಮಿತ್ರ ಪಕ್ಷಗಳ ನಡುವೆ ಮಾತುಕತೆ ಇನ್ನೂ ಪ್ರಗತಿಯಲ್ಲಿದೆ. ಪಶ್ಚಿಮ ಬಂಗಾಳದಲ್ಲಿ ಸ್ವತಂತ್ರ ಸ್ಪರ್ಧೆಗೆ ಟಿಎಂಸಿ ಮುಂದಾಗಿದೆ. ಇಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ಅಸಮಾಧಾನ ಶಮನಗೊಳಿಸಬೇಕಿದೆ.

Previous Post
ಪಾಕಿಸ್ತಾನಕ್ಕೆ ಸ್ವಾತಂತ್ರ್ಯೋತ್ಸವದ ಶುಭಕೋರುವುದು ಅಪರಾಧವಲ್ಲ: ಸುಪ್ರೀಂ
Next Post
ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವೆಬ್‌ಸೈಟ್‌ನಿಂದ ಡಿಲಿಟ್ ಮಾಡಿದ ಎಸ್‌ಬಿಐ

Recent News