ಕರ್ನಾಟಕ, ಹಿಮಾಚಲ್‌, ಅಸ್ಸಾಂಗೆ ಹೆಚ್ಚಿನ ಪರಿಹಾರ ನೀಡಲಾಗಿದೆ- ಕೇಂದ್ರ

ಕರ್ನಾಟಕ, ಹಿಮಾಚಲ್‌, ಅಸ್ಸಾಂಗೆ ಹೆಚ್ಚಿನ ಪರಿಹಾರ ನೀಡಲಾಗಿದೆ- ಕೇಂದ್ರ

ನವದೆಹಲಿ: 2022-2024ರ ನಡುವಿನ ಎರಡು ವರ್ಷಗಳ ಅವಧಿಯಲ್ಲಿ ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (NDRF) ಹೆಚ್ಚಿನ ಪ್ರಮಾಣದಲ್ಲಿ ಪರಿಹಾರದ ಹಣ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಇಂದು ರಾಜ್ಯಸಭೆಗೆ ತಿಳಿಸಿದೆ. 2022-24ರಲ್ಲಿ ಪ್ರವಾಹ ಮತ್ತು ಭೂಕುಸಿತಕ್ಕಾಗಿ ಕರ್ನಾಟಕಕ್ಕೆ ಕೇಂದ್ರದ ಉನ್ನತ ಮಟ್ಟದ ಸಮಿತಿಯು 941 ಕೋಟಿ ರೂ., ಹಿಮಾಚಲ ಪ್ರದೇಶ ಮತ್ತು ಅಸ್ಸಾಂಗೆ ಕ್ರಮವಾಗಿ 873 ಕೋಟಿ ರೂ. ಮತ್ತು 594 ಕೋಟಿ ರೂ. ಗಳನ್ನು ಅನುಮೋದಿಸಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಎನ್‌ಡಿಆರ್‌ಎಫ್‌ನಿಂದ ಕರ್ನಾಟಕಕ್ಕೆ 939 ಕೋಟಿ, ಹಿಮಾಚಲ ಪ್ರದೇಶಕ್ಕೆ 812 ಕೋಟಿ ಮತ್ತು ಅಸ್ಸಾಂಗೆ 160 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ತಮಿಳುನಾಡಿಗೆ ಪ್ರವಾಹ ಮತ್ತು ಚಂಡಮಾರುತಕ್ಕೆ 276 ಕೋಟಿ ರೂ., ಸಿಕ್ಕಿಂಗೆ ಪ್ರವಾಹ ಮತ್ತು ಭೂಕುಸಿತಕ್ಕೆ 267 ಕೋಟಿ ರೂ., ನಾಗಾಲ್ಯಾಂಡ್‌ಗೆ 68 ಕೋಟಿ ರೂ. ನೀಡಲಾಗಿದೆ ಎಂದು ರೈ ವಿವರಿಸಿದರು. ಇದೇ ವೇಳೆ, ಮಣಿಪುರದಲ್ಲಿ ರೇಮಲ್ ಚಂಡಮಾರುತದ ಪರಿಣಾಮ ಮತ್ತು ಕೇರಳ ಭೂಕುಸಿತದ ಕುರಿತಂತೆ ಪರಿಶೀಲನೆ ನಡೆಸಿ ವರದಿ ನೀಡಲು ಕೇಂದ್ರ ತಂಡ ರಚಿಸಲಾಗಿದೆ ಎಂದೂ ಅವರ ತಿಳಿಸಿದ್ದಾರೆ. ಮಿಜೋರಾಂ ಮತ್ತು ಮಣಿಪುರವು ಎನ್‌ಡಿಆರ್‌ಎಫ್‌ನಿಂದ ಹೆಚ್ಚುವರಿ ಆರ್ಥಿಕ ಸಹಾಯಕ್ಕಾಗಿ ಕ್ರಮವಾಗಿ 216.73 ಕೋಟಿ ಮತ್ತು 711.43 ಕೋಟಿಗೆ ಮೆಮೊರಾಂಡಮ್‌ಗಳನ್ನು ಸಲ್ಲಿಸಿವೆ ಎಂದರು.

Previous Post
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ ! ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ
Next Post
ಎಸ್.ನಿಜಲಿಂಗಪ್ಪನವರ ತತ್ವಾದರ್ಶಗಳು ಸ್ಪೂರ್ತಿದಾಯಕ : ಮುಖ್ಯಮಂತ್ರಿ ಸಿದ್ದರಾಮಯ್ಯ

Recent News