ಕಸದಿಂದ ಪೆಟ್ರೋಲ್ ಉತ್ಪಾದನೆ ಸಾಧ್ಯ: ಗಡ್ಕರಿ
ನಾಗಪುರ, ಆ. 2: ಕೇಂದ್ರ ಸಚಿವ ನಿತಿನ್ ಗಡ್ಕರಿ ನಾಗಪುರದಲ್ಲಿ ಅಖಿಲ ಭಾರತೀಯರ ಸ್ಥಾನಿಕ್ ಸ್ವರಾಜ್ಯ ಸಂಸ್ಥಾ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕಸವನ್ನು ಸದ್ಬಳಕೆ ಮಾಡಿಕೊಳ್ಳುವ ಮಾರ್ಗಗಳ ಬಗ್ಗೆ ಮಾಹಿತಿ ನೀಡಿದರು. ಕಸವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಿ ಅದರಿಂದ ವಿವಿಧ ರೀತಿಯಲ್ಲಿ ಲಾಭ ಮಾಡಿಕೊಳ್ಳುವ ಸಾಧ್ಯತೆಗಳ ಬಗ್ಗೆ ಮಾತನಾಡಿದರು. ಕಸ ಎಷ್ಟು ಅಮೂಲ್ಯವೆಂದರೆ ಜನರು ಆ ಕಸ ಗಿಟ್ಟಿಸಿಕೊಳ್ಳಲು ಪೈಪೋಟಿ ಮಾಡಬೇಕಾಗುತ್ತದೆ ಎಂದರು.
‘ಉತ್ತರ ಭಾರತದಲ್ಲಿ ಇತ್ತೀಚೆಗೆ ಹೆದ್ದಾರಿಗಳ ನಿರ್ಮಾಣಕ್ಕಾಗಿ 80 ಲಕ್ಷ ಟನ್ಗಳಷ್ಟು ಕಸವನ್ನು ಬಳಸಿಕೊಳ್ಳಲಾಗಿದೆ. ಈ ಕಸದಿಂದ ರಸ್ತೆ ನಿರ್ಮಾಣಕ್ಕೆ ಸಹಾಯವಾಗಿದೆ. ಜೊತೆಗೆ ಕಸದ ಸಮಸ್ಯೆಯೂ ತಗ್ಗಿಸಲು ಸಾಧ್ಯವಾಗಿದೆ’ ಎಂದು ಸಚಿವ ನಿತಿನ್ ಗಡ್ಕರಿ ಒಂದು ಉದಾಹರಣೆ ಕೊಟ್ಟಿದ್ದಾರೆ.
ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಪೆಟ್ರೋಲ್ ತಯಾರಿಕೆ ಮಾಡಬಹುದು ಎಂದಿದ್ದಾರೆ. ಪ್ಲಾಸ್ಟಿಕ್ ಅನ್ನು ಕಚ್ಛಾ ಪೆಟ್ರೋಲ್ ಆಗಿ ಪರಿವರ್ತಿಸಿ, ಅದನ್ನು ಡೀಸೆಲ್ನಲ್ಲಿ ಅರ್ಧದಷ್ಟು ಪ್ರಮಾಣದಲ್ಲಿ ಮಿಶ್ರ ಮಾಡಬಹುದು. ಇದರಿಂದ ಡೀಸಲ್ ಬೆಲೆ ಲೀಟರ್ಗೆ 50 ರೂಗೆ ಇಳಿಯಬಹುದು. ಟ್ರಾಕ್ಟರ್ ಇತ್ಯಾದಿ ವಾಹನಗಳ ಬಳಕೆಗೆ ಇದರಿಂದ ಬಹಳ ಅನುಕೂಲ ಆಗುತ್ತದೆ ಎಂದಿದ್ದಾರೆ ಗಡ್ಕರಿ.
ಮಹಾರಾಷ್ಟ್ರದ ನಾಗಪುರದಲ್ಲಿ ಅಲ್ಲಿನ ಪೌರ ಸಂಸ್ಥೆಯು ಚರಂಡಿ ನೀರನ್ನು ಸಂಸ್ಕರಿಸಿ, ಸಮೀಪದ ಕೈಗಾರಿಕೆಗಳಿಗೆ ಸರಬರಾಜು ಮಾಡುವ ಮೂಲಕ ವರ್ಷಕ್ಕೆ 300 ಕೋಟಿ ರೂ ಆದಾಯ ಗಳಿಸುತ್ತಿದೆ ಎನ್ನುವ ಮಾಹಿತಿಯನ್ನು ಕೇಂದ್ರ ಸಚಿವರು ನೀಡಿದರು. ಹಸಿ ಕಸವನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವ ವಿವರ ನೀಡಿದ ಅವರು, ಬಯೋ ಡೈಜೆಸ್ಟರ್ನಲ್ಲಿ ಸಂಸ್ಕರಿಸಿ ಮೀಥೇನ್ ತಯಾರಿಸಿ, ಆ ಮೂಲಕ ಜೈವಿಕ ಇಂಧನ ತಯಾರಿಸಬಹುದು ಎಂದರು.
ಸಂಪತ್ತು ಸೃಷ್ಟಿಸಲು ಅಗತ್ಯ ಇರುವ ಸಂಪನ್ಮೂಲಗಳನ್ನು ಕಾಣುವುದರ ದೃಷ್ಟಿಕೋನ ಬದಲಾಗಬೇಕು. ತ್ಯಾಜ್ಯದ ಮೌಲ್ಯ ಅರಿವಾಗಬೇಕು. ಅದೆಷ್ಟು ಮೌಲ್ಯಯುತ ಎಂದರೆ ಅದನ್ನು ಗಳಿಸು ಹಕ್ಕಿಗೆ ಜನರು ತಾ ಮುಂದು, ನೀ ಮುಂದು ಎಂದು ಪೈಪೋಟಿ ಮಾಡಬೇಕು. ಯಾವುದನ್ನು ಸಮಸ್ಯೆ ಎಂದು ಪರಿಗಣಿಲಾಗುತ್ತಿದೆಯೋ ಅದನ್ನೇ ಲಾಭದಾಯಕ ಪರಿಹಾರವನ್ನಾಗಿ ಪರಿವರ್ತಿಸಬಹುದು. ಎಲ್ಲಾ ನಗರಾಡಳಿತ ಸಂಸ್ಥೆಗಳು ಈ ಬಗ್ಗೆ ಮುತುವರ್ಜಿ ತೋರಬೇಕು ಎಂದು ನಿತಿನ್ ಗಡ್ಕರಿ ಕರೆ ನೀಡಿದರು.