ಕಾಂಗ್ರೆಸ್‌ನಿಂದ ಬಡ ಮಹಿಳೆಗೆ 1 ಲಕ್ಷ ನೀಡುವ ‘ಮಹಾಲಕ್ಷ್ಮಿ’ ಸೇರಿ ಹಲವು ಗ್ಯಾರೆಂಟಿಗಳ ಘೋಷಣೆ

ಕಾಂಗ್ರೆಸ್‌ನಿಂದ ಬಡ ಮಹಿಳೆಗೆ 1 ಲಕ್ಷ ನೀಡುವ ‘ಮಹಾಲಕ್ಷ್ಮಿ’ ಸೇರಿ ಹಲವು ಗ್ಯಾರೆಂಟಿಗಳ ಘೋಷಣೆ

ನವದೆಹಲಿ, ಮಾ. 13: 2024ರ ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ, ಕಾಂಗ್ರೆಸ್ ಪಕ್ಷವು ಬುಧವಾರ ಮಹಿಳೆಯರಿಗೆ ಭರ್ಜರಿ ಗ್ಯಾರೆಂಟಿಗಳನ್ನು ಘೋಷಣೆ ಮಾಡಿದ್ದು, ಬಡ ಕುಟುಂಬದ ಮಹಿಳಾ ಸದಸ್ಯರಿಗೆ ವಾರ್ಷಿಕವಾಗಿ ಒಂದು ಲಕ್ಷ ರೂಪಾಯಿ ಆರ್ಥಿಕ ಸಹಾಯ ಮತ್ತು ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ 50 ಪ್ರತಿಶತ ಮೀಸಲಾತಿ ಗ್ಯಾರೆಂಟಿಗಳಲ್ಲಿ ಸೇರಿದೆ. ಮಹಾರಾಷ್ಟ್ರದ ಧುಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ನವದೆಹಲಿಯಿಂದಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಗ್ಯಾರೆಂಟಿಯನ್ನು ಘೋಷಣೆ ಮಾಡಿದ್ದಾರೆ. ‘ನಾರಿ ನ್ಯಾಯ್ ಗ್ಯಾರಂಟಿ’ ಅಡಿಯಲ್ಲಿ-ಮಹಾಲಕ್ಷ್ಮಿ, ಆದಿ ಅಬಾದಿ-ಪುರ ಹಕ್, ಶಕ್ತಿ ಕಾ ಸಮ್ಮಾನ್, ಅಧಿಕಾರ ಮೈತ್ರಿ ಮತ್ತು ಸಾವತ್ರಿಬಾಯಿ ಫುಲೆ ಹಾಸ್ಟೆಲ್‌ ನಿರ್ಮಾಣ ಗ್ಯಾರೆಂಟಿಗಳಲ್ಲಿ ಸೇರಿದೆ.

ಕಳೆದ 10 ವರ್ಷಗಳ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಮಹಿಳೆಯರಿಗೆ ಏನೂ ಸಿಕ್ಕಿಲ್ಲ, ಬೆಲೆ ಏರಿಕೆ, ನಿರುದ್ಯೋಗ, ಭದ್ರತೆ ಮತ್ತು ಸುರಕ್ಷತೆಯಿಂದಾಗಿ ಅವರ ತೊಂದರೆಗಳು ಹೆಚ್ಚಿವೆ ಎಂದು ರಾಹುಲ್‌ ಗಾಂಧಿ ಈ ವೇಳೆ ಹೇಳಿದ್ದಾರೆ.
‘ಮಹಾಲಕ್ಷ್ಮಿ’ ಯೋಜನೆಯು ಬಡ ಕುಟುಂಬದ ಮಹಿಳೆಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಸಹಾಯವನ್ನು ಒಳಗೊಂಡಿರುತ್ತದೆ. ‘ಆದಿ ಆಬಾದಿ-ಪೂರಾ ಹಕ್‌’ ಕೇಂದ್ರ ಸರ್ಕಾರದ ಹೊಸ ನೇಮಕಾತಿಗಳಲ್ಲಿ ಮಹಿಳೆಯರು 50 ಪ್ರತಿಶತದಷ್ಟು ಮೀಸಲಾತಿಯನ್ನು ನೀಡಲಾಗುತ್ತದೆ. ‘ಶಕ್ತಿ ಕಾ ಸಮ್ಮಾನ್’ ಅಡಿಯಲ್ಲಿ ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರ ಮಾಸಿಕ ವೇತನ ದ್ವಿಗುಣ ಮಾಡಲಾಗುತ್ತದೆ.

‘ಅಧಿಕಾರ ಮೈತ್ರಿ’ ಅಡಿಯಲ್ಲಿ, ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಮತ್ತು ಅಗತ್ಯ ಸಹಾಯವನ್ನು ಒದಗಿಸಲು ಪ್ರತಿ ಪಂಚಾಯತ್‌ನಲ್ಲಿ ಒಬ್ಬ ಕಾನೂನು ಸಹಾಯಕರನ್ನು ಅಧಿಕಾರ ಮೈತ್ರಿ ರೂಪದಲ್ಲಿ ನೇಮಿಸಲಾಗುವುದು.
ಕೇಂದ್ರವು ದೇಶಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕನಿಷ್ಠ ಒಂದು ಮಹಿಳಾ ಹಾಸ್ಟೆಲ್‌ನ್ನು ನಿರ್ಮಿಸಲಿದ್ದು ಮತ್ತು ಈ ಹಾಸ್ಟೆಲ್‌ಗಳ ಸಂಖ್ಯೆಯನ್ನು ದೇಶಾದ್ಯಂತ ದ್ವಿಗುಣಗೊಳಿಸಲಿದೆ. ಈ ಮೊದಲು ನಾವು ರೈತ ನ್ಯಾಯ ಮತ್ತು ಯುವ ನ್ಯಾಯವನ್ನು ಘೋಷಿಸಿದ್ದೇವೆ ಮತ್ತು ನಮ್ಮ ಭರವಸೆಗಳು ಖಾಲಿ ಭರವಸೆಗಳು ಮತ್ತು ಹೇಳಿಕೆಗಳಲ್ಲ. ನಾವು ಏನು ಹೇಳುತ್ತೇವೆಯೋ ಅದಕ್ಕೆ ನಾವು ಬದ್ಧರಾಗಿದ್ದೇವೆ, ನಾವು ಪ್ರಣಾಳಿಕೆಗಳನ್ನು ತಯಾರಿಸುತ್ತಿದ್ದೇವೆ ಮತ್ತು ಆ ಘೋಷಣೆಗಳನ್ನು ಈಡೇರಿಸುತ್ತಿದ್ದೇವೆ ಎಂದು ಖರ್ಗೆಈ ವೇಳೆ ಹೇಳಿದ್ದಾರೆ.

ಕಾಂಗ್ರೆಸ್‌ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶದಾದ್ಯಂತ ಜಾತಿಗಣತಿಯನ್ನು ನಡೆಸುವ ಬಗ್ಗೆ ಈ ಮೊದಲು ಭರವಸೆಯನ್ನು ನೀಡಿತ್ತು. ದೇಶದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೆ ಅರಣ್ಯ ಹಕ್ಕು ಅಧಿನಿಯಮದ ಪರಿಣಾಮಕಾರಿ ಅನುಷ್ಠಾನ, ಮೋದಿ ಸರಕಾರ ಅರಣ್ಯ ಸಂರಕ್ಷಣೆ ಮತ್ತು ಭೂಮಿ ಅಧಿಗ್ರಹಣ ಅಧಿನಿಯಮಗಳಲ್ಲಿ ಮಾಡಿರುವ ಎಲ್ಲಾ ತಿದ್ದುಪಡಿಗಳ ವಾಪಸ್, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಯಾವ ಬಸ್ತಿಗಳಲ್ಲಿ ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಹೆಚ್ಚು ಇದೆಯೋ ಆ ಬಸ್ತಿಗಳನ್ನು ಪರಿಶಿಷ್ಟ ಪ್ರದೇಶ ಎಂದು ಘೋಷಣೆ, PESA ಪ್ರಕಾರ ರಾಜ್ಯಗಳಲ್ಲಿ ಕಾನೂನು, ಕನಿಷ್ಠ ಬೆಂಬಲ ಬೆಲೆ (MSP) ಕಾನೂನು ಸೇರಿ ಹಲವು ಭರವಸೆಗಳನ್ನು ಈ ಮೊದಲು ಕಾಂಗ್ರೆಸ್‌ ನೀಡಿತ್ತು.

Previous Post
ಚುನಾವಣಾ ಬಾಂಡ್‌: ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ ಎಸ್‌ಬಿಐ
Next Post
ಬಿಜೆಪಿಯಲ್ಲಿ ಅವಮಾನವಾದರೆ ನಮ್ಮ ಜೊತೆ ಸೇರಿ: ಗಡ್ಕರಿಗೆ ಉದ್ಧವ್ ಆಹ್ವಾನ

Recent News