ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ತಕ್ಷಣ ಜಾತಿ ಗಣತಿ: ರಾಹುಲ್ ಗಾಂಧಿ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ತಕ್ಷಣ ಜಾತಿ ಗಣತಿ: ರಾಹುಲ್ ಗಾಂಧಿ

ಬಸ್ತಾರ್, ಏ. 13: ಕಾಂಗ್ರೆಸ್‌ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ತಕ್ಷಣವೇ ದೇಶದಲ್ಲಿ ಜಾತಿ ಗಣತಿ ನಡೆಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ. ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಮುಂಬರುವ ಲೋಕಸಭೆ ಚುನಾವಣೆಯು ಸಂವಿಧಾನವನ್ನು ರಕ್ಷಿಸಲು ಬಯಸುವವರು ಮತ್ತು ಅದನ್ನು ನಾಶಮಾಡಲು ಹೊರಟಿರುವ ಎರಡು ಸಿದ್ಧಾಂತಗಳ ನಡುವಿನ ಹೋರಾಟ ಎಂದು ಬಣ್ಣಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಡಕಟ್ಟು ಜನಾಂಗದವರಾಗಿರುವುದರಿಂದ ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆಗೆ ಹಾಜರಾಗದಂತೆ ಅವರನ್ನು ತಡೆಯಲಾಗಿದೆ ಮತ್ತು ಇದು ಭಾರತೀಯ ಜನತಾ ಪಕ್ಷದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರ ಬಸ್ತಾರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕವಾಸಿ ಲಖ್ಮಾ ಅವರನ್ನು ಬೆಂಬಲಿಸಿ ರ್ಯಾಲಿ ನಡೆದಿದೆ. ರ್ಯಾಲಿಯಲ್ಲಿ ಮೋದಿ ಜಿ ‘ಆದಿವಾಸಿ’ ಪದವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ನಾವು ನಿಮ್ಮನ್ನು (ಬುಡಕಟ್ಟು ಜನಾಂಗದವರು) ಆದಿವಾಸಿ ಎಂದು ಕರೆಯುತ್ತೇವೆ, ಆದರೆ ಅವರು ‘ವನವಾಸಿ’ ಪದವನ್ನು ಬಳಸುತ್ತಾರೆ. ವನವಾಸಿ ಮತ್ತು ಆದಿವಾಸಿ ಪದಗಳ ನಡುವೆ ಅಗಾಧ ವ್ಯತ್ಯಾಸವಿದೆ.

ಆದಿವಾಸಿ ಎಂಬ ಪದವು ಆಳವಾದ ಅರ್ಥವನ್ನು ಹೊಂದಿದೆ. ಈ ಪದವು ಜಲ, ಕಾಡು, ಜಮೀನು ಮೇಲಿನ ನಿಮ್ಮ ಹಕ್ಕುಗಳನ್ನು ವ್ಯಕ್ತಪಡಿಸುತ್ತದೆ, ಆದರೆ ವನವಾಸಿ ಎಂದರೆ ಕಾಡಿನಲ್ಲಿ ವಾಸಿಸುವವರು ಎಂದು ಅರ್ಥ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.
ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್‌) ಧರ್ಮ, ಸಿದ್ಧಾಂತ ಮತ್ತು ಆದಿವಾಸಿಗಳ ಇತಿಹಾಸದ ಮೇಲೆ ದಾಳಿ ನಡೆಸುತ್ತಿದೆ. ಬಿಜೆಪಿಯವರು ನಿಮ್ಮ ಜಮೀನುಗಳನ್ನು ಕೋಟ್ಯಾಧಿಪತಿಗಳಿಗೆ ನೀಡುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳದಂತೆ ಭಾರತದ ರಾಷ್ಟ್ರಪತಿಗಳಿಗೆ ಬುಡಕಟ್ಟು ಜನಾಂಗದವರು ಎಂಬ ಕಾರಣಕ್ಕೆ ತಡೆಯಲಾಯಿತು. ಮೋದಿಜಿ ಈ ಸಂದೇಶವನ್ನು ದೇಶಕ್ಕೆ ನೀಡಿದರು ಮತ್ತು ಇದು ಅವರ ಚಿಂತನೆಯಾಗಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನ ಚುನಾವಣಾ ಭರವಸೆಯನ್ನು ಎತ್ತಿ ಹಿಡಿದ ಗಾಂಧಿ, ನಾವು ಅಧಿಕಾರಕ್ಕೆ ಬಂದ ತಕ್ಷಣ ಜಾತಿ ಗಣತಿ ನಡೆಸುತ್ತೇವೆ. ನಾವು ಅಧಿಕಾರಕ್ಕೆ ಬಂದರೆ 30 ಲಕ್ಷ ಖಾಲಿ ಇರುವ ಸರ್ಕಾರಿ ಹುದ್ದೆಗಳಿಗೆ ನೇಮಕಾತಿಯನ್ನು ಮಾಡುತ್ತೇವೆ. ಪ್ರಧಾನಿ ಮೋದಿಯವರ ಆಡಳಿತದಲ್ಲಿ 22 ಉದ್ಯಮಿಗಳ ಆಸ್ತಿ 70 ಕೋಟಿ ಭಾರತೀಯರ ಸಂಪತ್ತಿಗೆ ಸಮನಾಗಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

Previous Post
ದಕ್ಷಿಣದ ರಾಜ್ಯಗಳಲ್ಲಿ INDIA ಉತ್ತಮ ಪ್ರದರ್ಶನ: ಚಿದಂಬರಂ
Next Post
ತಮಿಳುನಾಡಿನ ಆರು ಕ್ಷೇತ್ರಗಳ ಮೇಲೆ ಬಿಜೆಪಿ ಗಮನ ಕರ್ನಾಟಕದ ಬಳಿಕ ಡ್ರಾವಿಡ ನೆಲದಲ್ಲಿ ಅಸ್ತಿತ್ವಕ್ಕೆ ಶತ ಪ್ರಯತ್ನ

Recent News