ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಮೇಲೆ ಹಲ್ಲೆ
ನವದೆಹಲಿ, ಮೇ 18: ಈಶಾನ್ಯ ದೆಹಲಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ನ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಅವರಿಗೆ ಚುನಾವಣಾ ಪ್ರಚಾರದ ವೇಳೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಚುನಾವಣಾ ಪ್ರಚಾರದ ವೇಳೆ ಹೂಮಾಲೆ ಹಾಕುವ ನೆಪದಲ್ಲಿ ಅವರ ಬಳಿಗೆ ಬಂದ ಕೆಲವರು ಬಳಿಕ ಅವರಿಗೆ ಥಳಿಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದೆ. ಇದೇ ವೇಳೆ ದುಷ್ಕರ್ಮಿಗಳು ಆಮ್ ಆದ್ಮಿ ಪಕ್ಷದ ಮಹಿಳಾ ಕೌನ್ಸಿಲರ್ ಛಾಯಾ ಗೌರವ್ ಶರ್ಮ ಅವರೊಂದಿಗೂ ಅನುಚಿತವಾಗಿ ವರ್ತಿಸಿರುವ ಆರೋಪ ಕೇಳಿ ಬಂದಿದೆ. ತನ್ನ ಶಾಲನ್ನು ಕಿತ್ತುಕೊಂಡು, ಪತಿಯನ್ನು ಪಕ್ಕಕ್ಕೆ ಕರೆದೊಯ್ದು ಬೆದರಿಕೆ ಹಾಕಿದ್ದಾರೆ. ಇದಲ್ಲದೆ ಗುಂಪಿನ ಮೇಲೆ ಕಪ್ಪು ಶಾಹಿ ಎರಚಲಾಗಿದ್ದು, ಕೆಲ ಮಹಿಳೆಯರು ಈ ವೇಳೆ ಗಾಯಗೊಂಡಿದ್ದಾರೆ ಎಂದು ಗೌರವ್ ಶರ್ಮ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸರ ಪ್ರಕಾರ, ಕೌನ್ಸಿಲರ್ ಛಾಯಾ ಶರ್ಮಾ ಅವರೊಂದಿಗಿನ ಸಭೆಯ ನಂತರ ಕನ್ಹಯ್ಯಾ ಕುಮಾರ್ ಕರ್ತಾರ್ ನಗರದಲ್ಲಿರುವ ಎಎಪಿ ಕಚೇರಿಯಿಂದ ಹೊರಗೆ ಬಂದಾಗ ಕೆಲವು ವ್ಯಕ್ತಿಗಳು ಕನ್ಹಯ್ಯಾ ಕುಮಾರ್‌ಗೆ ಹೂಮಾಲೆ ಹಾಕುವ ನೆಪದಲ್ಲಿ ಸಮೀಪಕ್ಕೆ ಬಂದು ಹಾರವನ್ನು ಹಾಕಿದ್ದಾರೆ. ಬಳಿಕ ಕನ್ಹಯ್ಯಾ ಕುಮಾರ್ ಮೇಲೆ ಶಾಯಿ ಎರಚಿ ಹಲ್ಲೆ ನಡೆಸಿದ್ದಾರೆ. ಛಾಯಾ ಶರ್ಮಾ ಅವರು ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಅವರು ಅನುಚಿತವಾಗಿ ವರ್ತಿಸಿದರು ಮತ್ತು ಬೆದರಿಕೆ ಹಾಕಿದರು ಎಂದು ಈಶಾನ್ಯ ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಘಟನೆಯ ನಂತರ, ದಾಳಿಯ ಹೊಣೆಯನ್ನು ಹೊತ್ತುಕೊಂಡು ಇಬ್ಬರು ದುಷ್ಕರ್ಮಿಗಳು ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಕನ್ಹಯ್ಯಾ ಕುಮಾರ್ ದೇಶವನ್ನು ವಿಭಜಿಸುವ ಬಗ್ಗೆ ಮಾತನಾಡುತ್ತಾರೆ, ಭಾರತೀಯ ಸೇನೆಯ ವಿರುದ್ಧ ಮಾತನಾಡುತ್ತಾರೆ ಮತ್ತು ಇಂದು ನಾವು ಅವರಿಗೆ ಸರಿಯಾಗಿ ಚಿಕಿತ್ಸೆ ನೀಡಿದ್ದೇವೆ ಎಂದು ವೀಡಿಯೊದಲ್ಲಿ ಹೇಳಲಾಗಿದೆ. ದೇಶವನ್ನು ವಿಭಜಿಸುವ ಬಗ್ಗೆ ಮಾತನಾಡುವವರಿಗೆ ದೆಹಲಿ ಪ್ರವೇಶಿಸಲು ನಾವು ಅವಕಾಶ ನೀಡುವುದಿಲ್ಲ ಎಂದು ವಿಡಿಯೋದಲ್ಲಿರುವ ವ್ಯಕ್ತಿಯೊಬ್ಬರು ಪ್ರತಿಪಾದಿಸಿದ್ದಾರೆ. ಆದರೆ ಈ ಕುರಿತ ವಿಡಿಯೋದ ಅಸಲಿಯತ್ತನ್ನು ತಕ್ಷಣಕ್ಕೆ ಪರಿಶೀಲನೆ ನಡೆಸಲಾಗಿಲ್ಲ ಎಂದು ತಿಳಿದು ಬಂದಿದೆ.
ಈಶಾನ್ಯ ದೆಹಲಿಯಲ್ಲಿ ಬಿಜೆಪಿಯ ಮನೋಜ್ ತಿವಾರಿ ವಿರುದ್ಧ ಇಂಡಿಯಾ ಬ್ಲಾಕ್ ಅಭ್ಯರ್ಥಿಯಾಗಿ ಕನ್ಹಯ್ಯ ಕುಮಾರ್ ಸ್ಪರ್ಧೆಯಲ್ಲಿದ್ದಾರೆ. ತನ್ನ ವಿರುದ್ಧದ ದಾಳಿಗೆ ಮನೋಜ್ ತಿವಾರಿಯನ್ನು ಕನ್ಹಯ್ಯ ಕುಮಾರ್ ಹೊಣೆಯಾಗಿಸಿದ್ದಾರೆ. ಸಂಸದ ತಿವಾರಿ ಅವರು ನನಗೆ ಹೆಚ್ಚಿನ ಜನಬೆಂಬಲ ಸಿಗುತ್ತಿರುವ ಹಿನ್ನೆಲೆ ಹತಾಶರಾಗಿದ್ದಾರೆ. ಅದಕ್ಕಾಗಿಯೇ ಅವರು ತಮ್ಮ ಮೇಲೆ ದಾಳಿ ಮಾಡಲು ಗೂಂಡಾಗಳನ್ನು ಕಳುಹಿಸಿದ್ದಾರೆ. ಮೇ 25ರಂದು ಮತದಾನದ ಮೂಲಕ ಸಾರ್ವಜನಿಕರು ಹಿಂಸಾಚಾರಕ್ಕೆ ತಕ್ಕ ಉತ್ತರವನ್ನು ನೀಡಲಿದ್ದಾರೆ ಎಂದು ಕನ್ಹಯ್ಯ ಕುಮಾರ್ ಹೇಳಿದ್ದಾರೆ.