ಕಾಂಗ್ರೆಸ್‌- ಎಎಪಿ ಸೀಟು ಹಂಚಿಕೆ ಯಶಸ್ವಿ

ಕಾಂಗ್ರೆಸ್‌- ಎಎಪಿ ಸೀಟು ಹಂಚಿಕೆ ಯಶಸ್ವಿ

ನವದೆಹಲಿ, ಫೆ. 24: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜಂಟಿ ಹೋರಾಟ ನಡೆಸಲು ಆಮ್‌ ಆದ್ಮಿ ಪಕ್ಷ (ಎಎಪಿ) ಮತ್ತು ಕಾಂಗ್ರೆಸ್ ಒಪ್ಪಿಕೊಂಡಿದ್ದು, ಮೂರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೀಟು ಹಂಚಿಕೆ ಮಾಡಿಕೊಂಡಿವೆ. ಗುಜರಾತ್, ಹರಿಯಾಣ, ಗೋವಾ ರಾಜ್ಯಗಳು ಮತ್ತು ದೆಹಲಿ, ಚಂಡೀಗಢ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೀಟು ಹಂಚಿಕೆಯ ಕುರಿತು ಎರಡು ಪಕ್ಷಗಳು ಜಂಟಿ ಘೋಷಣೆ ಮಾಡಿವೆ.
ದೆಹಲಿಯಲ್ಲಿ ಎಎಪಿ ಮತ್ತು ಕಾಂಗ್ರೆಸ್ 4:3 ಅನುಪಾತದಲ್ಲಿ ಸೀಟು ಹಂಚಿಕೆ ಮಾಡಿಕೊಂಡಿವೆ. ಒಟ್ಟು ಏಳು ಲೋಕಸಭಾ ಕ್ಷೇತ್ರಗಳ ಪೈಕಿ ಪಶ್ಚಿಮ ದೆಹಲಿ, ದಕ್ಷಿಣ ದೆಹಲಿ, ಪೂರ್ವ ದೆಹಲಿ ಮತ್ತು ನವದೆಹಲಿ ಈ ನಾಲ್ಕರಲ್ಲಿ ಎಎಪಿ ಸ್ಪರ್ಧಿಸಲಿದೆ. ಉಳಿದ ಮೂರು ಕ್ಷೇತ್ರಗಳಾದ ಈಶಾನ್ಯ ದೆಹಲಿ, ವಾಯುವ್ಯ ದೆಹಲಿ ಮತ್ತು ಚಾಂದಿನಿ ಚೌಕ್‌ಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ. 2019ರ ಚುನಾವಣೆಯಲ್ಲಿ ಬಿಜೆಪಿ ಈ ಎಲ್ಲಾ ಏಳು ಸ್ಥಾನಗಳನ್ನು ಗೆದ್ದಿತ್ತು. ಒಟ್ಟು 26 ಲೋಕಸಭಾ ಕ್ಷೇತ್ರಗಳಿರುವ ಗುಜರಾತ್‌ನಲ್ಲಿ ಭರೂಚ್ ಮತ್ತು ಭಾವನಗರಲ್ಲಿ ಎಎಪಿ ಸ್ಪರ್ಧಿಸಲಿದೆ. ಉಳಿದ 24 ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡಲಾಗಿದೆ. ಹರಿಯಾಣದ 10 ಕ್ಷೇತ್ರಗಳ ಪೈಕಿ 9ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹಾಕಲಿದೆ. ಕುರುಕ್ಷೇತ್ರದಲ್ಲಿ ಮಾತ್ರ ಎಎಪಿ ಸ್ಪರ್ಧಿಸಲಿದೆ.
ಗೋವಾದ ಎರಡು ಕ್ಷೇತ್ರಗಳು ಮತ್ತು ಚಂಡೀಗಢದ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಮಾತ್ರ ಸ್ಪರ್ಧಿಸಲಿದೆ. ಎಎಪಿ ಕಳೆದ ವಾರ ದಕ್ಷಿಣ ಗೋವಾಕ್ಕೆ ಅಭ್ಯರ್ಥಿಯನ್ನು ಘೋಷಿಸಿತ್ತು. ತನ್ನ ಮಿತ್ರಪಕ್ಷ ಕಾಂಗ್ರೆಸ್‌ಗೆ ದಾರಿ ಮಾಡಿಕೊಡಲು ಅದನ್ನು ಹಿಂಪಡೆಯಲಿದೆ. ಚಂಡೀಗಢ ಮೇಯರ್ ಚುನಾವಣೆಯಲ್ಲಿ ಕಾನೂನು ಸಮರ ನಡೆಸಿ ಇಂಡಿಯಾ ಮೈತ್ರಿಕೂಟ ಗೆಲುವು ದಾಖಲಿಸಿದ ವಾರದ ಬಳಿಕ, ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದ ಎಎಪಿ ಮತ್ತು ಕಾಂಗ್ರೆಸ್ ನಾಯಕರು ಸೀಟು ಹಂಚಿಕೆ ವಿಚಾರವನ್ನು ಹಂಚಿಕೊಂಡಿದ್ದಾರೆ.

Previous Post
ಎಎಪಿಯ ಕುಲದೀಪ್ ಕುಮಾರ್ ಚಂಡೀಗಢ ಮೇಯರ್: ಸುಪ್ರೀಂ ಮಹತ್ವದ ಘೋಷಣೆ
Next Post
ಭೂರಹಿತ ದಲಿತ ಕಾರ್ಮಿಕರಿಂದ ಹಕ್ಕಿಗಾಗಿ ಹೋರಾಟ

Recent News