ಕುಗ್ಗಿದ ಮೋದಿ ವರ್ಚಸ್ಸು: ಪ್ರಶಾಂತ್ ಕಿಶೋರ್ ಅವಲೋಕನ

ಕುಗ್ಗಿದ ಮೋದಿ ವರ್ಚಸ್ಸು: ಪ್ರಶಾಂತ್ ಕಿಶೋರ್ ಅವಲೋಕನ

ನವದೆಹಲಿ, ಮೇ 21: 2014 ಮತ್ತು 2019ರ ಲೋಕಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ 2024ರಲ್ಲಿ ದೇಶದಲ್ಲಿ ಮೋದಿ ವರ್ಚಸ್ಸು ಕಡಿಮೆಯಾಗಿದೆ. ಈ ಬಾರಿ ಬ್ರ್ಯಾಂಡ್ ಮೋದಿ ದುರ್ಬಲವಾಗುತ್ತಿದೆ, ಮೋದಿ ಕುರಿತು ನಿರೂಪಣೆಯಲ್ಲಿ ಬದಲಾವಣೆ ಇದೆ, ಜನರಲ್ಲಿ ಮೋದಿ ಬಗ್ಗೆ ಉತ್ಸಾಹ ಕಡಿಮೆಯಾಗಿದೆ ಎಂದು ಒಂದು ಕಾಲದಲ್ಲಿ ಮೋದಿ ಗೆಲುವಿನ ಹಿಂದಿನ ಪ್ರಮುಖ ರಣತಂತ್ರಗಾರನಾಗಿದ್ದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

RTV ಆಂಧ್ರಪ್ರದೇಶದೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಪ್ರಶಾಂತ್ ಕಿಶೋರ್, ಈ ಬಾರಿ ರಾಮಮಂದಿರದ ಹೆಸರಿನಲ್ಲಿ ಬಿಜೆಪಿಗೆ ಒಂದೇ ಒಂದು ಮತವೂ ಬರುವುದಿಲ್ಲ. ಈ ಹಿಂದೆ ರಾಮ ಮಂದಿರದ ಹೆಸರಲ್ಲಿ ಬಿಜೆಪಿಗೆ ಮತ ನೀಡದ ಆದರೆ ಈಗ ಅದೇ ಹೆಸರಲ್ಲಿ ಬಿಜೆಪಿಗೆ ಮತ ನೀಡಲು ಬಯಸುವ ಒಬ್ಬ ಮತದಾರ ಕೂಡ ನನಗೆ ಸಿಕ್ಕಿಲ್ಲ. ಹಾಗಾಗಿ ರಾಮ ಮಂದಿರದ ಹೆಸರಲ್ಲಿ ಈ ಬಾರಿ ಬಿಜೆಪಿಗೆ ಒಂದೇ ಒಂದು ಹೆಚ್ಚುವರಿ ಮತ ಸಿಗುವುದಿಲ್ಲ ಎನ್ನುವುದು ವಾಸ್ತವವಾಗಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಮೋದಿ ವಿರೋಧ ಪಕ್ಷಗಳಿಂದ ಯಾವುದೇ ಸವಾಲನ್ನು ಎದುರಿಸದಿರಬಹುದು, ಆದರೆ ಅವರು ಖಂಡಿತವಾಗಿಯೂ ಈ ದೇಶದ ಜನರ ಕೋಪವನ್ನು ಎದುರಿಸುತ್ತಾರೆ. ಈ ಚುನಾವಣೆಯಲ್ಲಿ ಬ್ರಾಂಡ್ ಮೋದಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂಬಂತಹ ಭಾವನೆಯಿಲ್ಲ, ಯಾರೂ ಅವರಿಗೆ ಸವಾಲು ಹಾಕಲು ಸಾಧ್ಯವಿಲ್ಲ ಎಂದಲ್ಲ. ರಾಜಕೀಯ ಪಕ್ಷ ಅಥವಾ ರಾಜಕೀಯ ನಾಯಕರು ಅವರಿಗೆ ಸವಾಲು ಹಾಕಲಿ ಅಥವಾ ಇಲ್ಲದಿರಲಿ ಆದರೆ ಜನರು ಮಾತ್ರ ಅವರಿಗೆ ಸವಾಲನ್ನು ಹಾಕುತ್ತಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ವಿರೋಧ ಪಕ್ಷಗಳು ಅಥವಾ ವಿರೋಧ ಪಕ್ಷಗಳ ಮೈತ್ರಿಕೂಟವು ದುರ್ಬಲವಾಗಿರಬಹುದು, ಆದರೆ ದೇಶದಲ್ಲಿ ಜನರ ವಿರೋಧ ದುರ್ಬಲವಾಗಿಲ್ಲ. 60 ಕೋಟಿಗೂ ಹೆಚ್ಚು ಜನರು ದಿನಕ್ಕೆ 100ರೂ.ಗಿಂತ ಹೆಚ್ಚು ಸಂಪಾದಿಸದ ದೇಶದಲ್ಲಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳನ್ನು ಎಂದಿಗೂ ದುರ್ಬಲಗೊಳಿಸಲು ಸಾಧ್ಯವಿಲ್ಲ. ಜನರ ವಿರೋಧ ದುರ್ಬಲವಾಗಿದೆ ಎಂದು ಎಂದೂ ಭಾವಿಸಬೇಡಿ, ಆ ತಪ್ಪನ್ನು ಎಂದಿಗೂ ಮಾಡಬೇಡಿ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಕಿಶೋರ್‌ ಅವರು ತಮ್ಮ ವಾದಗಳನ್ನು ಅಂಕಿ-ಅಂಶಗಳು ಮತ್ತು ಡೇಟಾದೊಂದಿಗೆ ಮತ್ತಷ್ಟು ಸಮರ್ಥಿಸಿಕೊಂಡಿದ್ದಾರೆ. ಭಾರತದಲ್ಲಿ ಯಾರೂ 50 ಪ್ರತಿಶತ ಮತಗಳನ್ನು ಪಡೆಯುವುದಿಲ್ಲ. ಸರಳವಾಗಿ ಹೇಳುವುದಾದರೆ, 100 ಜನರು ಮತ ಚಲಾಯಿಸಿದರೆ, ಕೇವಲ 40 ಜನರು ಮಾತ್ರ ಪ್ರಧಾನಿ ಮೋದಿಯನ್ನು ಬೆಂಬಲಿಸುತ್ತಾರೆ. ಅವರ ಸಿದ್ಧಾಂತ, ಅವರ ಕೆಲಸ, ಹಿಂದುತ್ವ, ರಾಮಮಂದಿರ, ಆರ್ಟಿಕಲ್ 370 ಇವೆಲ್ಲದರಲ್ಲಿ ಕೇವಲ 40 ಜನರು ಮಾತ್ರ ಸಂತೋಷವಾಗಿದ್ದಾರೆ, ಆದರೆ 60-62ರಷ್ಟು ಮಂದಿ ಅತೃಪ್ತರಾಗಿದ್ದಾರೆ ಎಂದು ಹೇಳಿದ್ದಾರೆ.

ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಸವಾಲು ಎದುರಿಸುವುದು ಖಚಿತ. ಗ್ರಾಮೀಣ ಭಾಗದಲ್ಲಿನ ಸಂಕಷ್ಟವು ದೇಶದ ಪ್ರಮುಖ ಸಮಸ್ಯೆಯಾಗಿದೆ. ಇದಾದ ನಂತರವೂ ಬಿಜೆಪಿ ಗೆಲ್ಲುತ್ತದೆ ಎಂದರೆ ವಿರೋಧ ಪಕ್ಷಗಳು ಸಾಕಷ್ಟು ಬಲವಾಗಿಲ್ಲ ಅಥವಾ ವಿಶ್ವಾಸಾರ್ಹವಾಗಿಲ್ಲ ಎಂದಾಗಿದೆ ಹೊರತು ಈ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಮೋದಿ ಸರ್ಕಾರದಿಂದ ಸಂತೋಷವಾಗಿದ್ದಾರೆ ಎಂದು ಅರ್ಥವಲ್ಲ ಎಂದು ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ.

2014ರ ಚುನಾವಣೆಗೆ ಹೋಲಿಸಿದರೆ 2024ರ ಚುನಾವಣೆಯಲ್ಲಿ ‘ಪ್ರಧಾನಿ ಮೋದಿ’ ಬ್ರಾಂಡ್‌ ಕುಸಿದಿದೆ. 2024ರಲ್ಲಿ ಮತ ಹಾಕಲು ಬೇರೆ ಯಾರೂ ಇಲ್ಲ ಎಂಬ ಭಾವನೆ ಜನರಲ್ಲಿದೆ. ಬ್ರ್ಯಾಂಡ್ ಮೋದಿ ದುರ್ಬಲವಾಗುತ್ತಿದೆ. 2014ರಲ್ಲಿ ಬಿಜೆಪಿ ಮತದಾರರಲ್ಲಿ ‘ಉತ್ಸಾಹ’ದ ಭಾವನೆ ಇತ್ತು ಮತ್ತು 2019ರಲ್ಲಿ, ರಾಷ್ಟ್ರದ ಅಭಿವೃದ್ಧಿಗೆ ಪಕ್ಷಕ್ಕೆ ಇನ್ನೂ ಐದು ವರ್ಷಗಳು ಬೇಕು ಎಂದು ಜನರು ನಿರೀಕ್ಷಿಸಿದ್ದರು. ಮೋದಿ ಅಧಿಕಾರಕ್ಕೆ ಬಂದರೆ ದೇಶ ಪರಿವರ್ತನೆಯಾಗುತ್ತದೆ ಎಂದು 2014ರಲ್ಲಿ ನಂಬಿದ ಜನರ ದೊಡ್ಡ ವರ್ಗವಿತ್ತು. 2024ರಲ್ಲಿ ನಾವು ಏನು ಮಾಡೋಣ, ಬೇರೆ ಯಾರೂ ಇಲ್ಲ, ಆದ್ದರಿಂದ ನಾವು ಅವನಿಗೆ ಮಾತ್ರ ಮತ ಹಾಕೋಣ ಎಂದು ಹೇಳುವ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಮೋದಿ ಕುರಿತು ನಿರೂಪಣೆಯಲ್ಲಿ ಬದಲಾವಣೆ ಇದೆ. ಜನರಲ್ಲಿ ಉತ್ಸಾಹ ಕಡಿಮೆಯಾಗಿದೆ ಎಂದು ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ.

Previous Post
ಇನ್ನು ಪ್ರಧಾನಿಯಾಗಿಲ್ಲ ಆಗಲೇ ದುರಂಕಾರಿಯಾಗಿದ್ದಾರೆ  ಅಮಿತ್ ಶಾ ವಿರುದ್ಧ ಸಿಎಂ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ
Next Post
ನಮಗೆ 56% ಮತ ನೀಡಿರುವ ದೆಹಲಿ ಜನ ಪಾಕಿಸ್ತಾನಿಗಳೇ?: ಶಾ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

Recent News