ಕುವೈತ್‌ನ ಕಟ್ಟಡದಲ್ಲಿ ಅಗ್ನಿ ದುರಂತ: ಭಾರತೀಯರು ಸೇರಿ 41 ಸಾವು

ಕುವೈತ್‌ನ ಕಟ್ಟಡದಲ್ಲಿ ಅಗ್ನಿ ದುರಂತ: ಭಾರತೀಯರು ಸೇರಿ 41 ಸಾವು

ನವದೆಹಲಿ, ಜೂ. 12: ಕುವೈತ್‌ನಲ್ಲಿ ಕಾರ್ಮಿಕರು ವಾಸಿಸುತ್ತಿದ್ದ ಕಟ್ಟಡವೊಂದರಲ್ಲಿ ಬುಧವಾರ ಸಂಭವಿಸಿದ ಅಗ್ನಿ ದುರಂತದಲ್ಲಿ ಭಾರತೀಯರು ಸೇರಿ 41 ಜನರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಬುಧವಾರ ಮುಂಜಾನೆ ಕುವೈತ್‌ನ ದಕ್ಷಿಣ ಅಹ್ಮದಿ ಗವರ್ನರೇಟ್‌ನಲ್ಲಿರುವ ಮಂಗಾಫ್ ಪ್ರದೇಶದ ಆರು ಅಂತಸ್ತಿನ ಕಟ್ಟಡದ ಅಡುಗೆಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದಲ್ಲಿ ಸುಮಾರು 160 ಜನರು ವಾಸಿಸುತ್ತಿದ್ದರು ಮತ್ತು ಅದೇ ಕಂಪೆನಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಕಟ್ಟಡದಲ್ಲಿ ತಂಗಿದ್ದ ಹೆಚ್ಚಿನ ಕಾರ್ಮಿಕರು ಭಾರತೀಯರು ಎಂದು ವರದಿಯಾಗಿದೆ.

ಕಾರ್ಮಿಕರೆಲ್ಲ ಕೇರಳ, ತಮಿಳುನಾಡು ಮತ್ತು ಉತ್ತರ ಭಾರತದವರೆಂದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ. ಕೇರಳದ ಉದ್ಯಮಿ ಕೆ ಜಿ ಅಬ್ರಹಾಂ ಅವರ ಎನ್‌ಬಿಟಿಸಿ ಗ್ರೂಪ್‌ ಒಡೆತನದ ಕಟ್ಟಡ ಇದೆಂದು ಹೇಳಲಾಗಿದ್ದು, ಎನ್‌ಬಿಟಿಸಿ ಸೂಪರ್‌ಮಾರ್ಕೆಟ್‌ ಉದ್ಯೋಗಿಗಳೂ ಇದೇ ಕಟ್ಟಡದಲ್ಲಿ ವಾಸಿಸುತ್ತಿದ್ದರೆನ್ನಲಾಗಿದೆ.

ಅವಘಡದ ಬೆನ್ನಲ್ಲಿ ಭಾರತೀಯ ಕಾರ್ಮಿಕರನ್ನು ಒಳಗೊಂಡ ದುರಂತ ಬೆಂಕಿ-ಅಪಘಾತಕ್ಕೆ ಸಂಬಂಧಿಸಿದಂತೆ ರಾಯಭಾರ ಕಚೇರಿಯು ತುರ್ತು ಸಹಾಯವಾಣಿ ಸಂಖ್ಯೆ +965-65505246ನ್ನು ನೀಡಿದ್ದು, ತುರ್ತು ಅವಶ್ಯಕತೆ ಇದ್ದಲ್ಲಿ ಸಂಪರ್ಕಿಸಲು ಸೂಚಿಸಿದೆ. ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ರಾಯಭಾರ ಕಚೇರಿಯು ಬದ್ಧವಾಗಿದೆ ಎಂದು ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ.

ಕುವೈತ್ ನಗರದಲ್ಲಿ ಬೆಂಕಿ ಅವಘಡದ ಸುದ್ದಿಯಿಂದ ತೀವ್ರ ಆಘಾತವಾಗಿದೆ. 40 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಮತ್ತು 50ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಮ್ಮ ರಾಯಭಾರಿ ಸ್ಥಳಕ್ಕೆ ಹೋಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಾವು ಕಾಯುತ್ತಿದ್ದೇವೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಆಳವಾದ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಮತ್ತು ಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲರಿಗೂ ನಮ್ಮ ರಾಯಭಾರ ಕಚೇರಿಯು ಸಂಪೂರ್ಣ ಸಹಾಯವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಕುವೈತ್‌ನ ಆಂತರಿಕ ಸಚಿವ ಶೇಖ್ ಫಹಾದ್ ಅಲ್-ಯೂಸುಫ್ ಅಲ್-ಸಬಾಹ್ ಅವರು ಬುಧವಾರ ಬೆಂಕಿ ಅವಘಢ ಸಂಭವಿಸಿದ ಮಂಗಾಫ್ ಕಟ್ಟಡದ ಮಾಲೀಕರು, ಕಟ್ಟಡದ ಸೆಕ್ಯೂರಿಟಿ ಮತ್ತು ಕಾರ್ಮಿಕರಿಗೆ ಹೊಣೆಗಾರರಾಗಿರುವ ಕಂಪನಿಯ ಮಾಲಕರು ಸೇರಿದಂತೆ ಘಟನೆಗೆ ಕಾರಣರಾದವರ ಬಂಧನಕ್ಕೆ ಸೂಚಿಸಿದ್ದಾರೆ. ಬುಧವಾರ ಸಂಭವಿಸಿರುವುದು ಕಂಪೆನಿ ಮತ್ತು ಕಟ್ಟಡ ಮಾಲೀಕರ ದುರಾಸೆಯ ಪರಿಣಾಮವಾಗಿದೆ. ಕಟ್ಟಡದ ವಿಚಾರಕ್ಕೆ ಸಂಬಂಧಿಸಿ ಸರಿಯಾಗಿ ನಿಯಮವನ್ನು ಪಾಲಿಸಲಾಗಿಲ್ಲ. ಒಂದು ವಸತಿ ಕಟ್ಟಡದಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ಕೂಡಿಟ್ಟಿರುವ ಬಗ್ಗೆ ಪರಿಶೀಲನೆಯನ್ನು ಕೂಡ ನಡೆಸಲು ಕುವೈತ್ ಪುರಸಭೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸಚಿವರು ನಿರ್ದೇಶನವನ್ನು ನೀಡಿದ್ದಾರೆ.

Previous Post
2025ರ ಎಫ್‌ಐಎಚ್ ಹಾಕಿ ಪುರುಷರ ಜೂನಿಯರ್ ವಿಶ್ವಕಪ್ ಗೆ ಭಾರತ ಆತಿಥ್ಯ
Next Post
ಉಕ್ರೇನ್-ರಷ್ಯಾ ಯುದ್ಧ: ಇಬ್ಬರು ಭಾರತೀಯರ ಸಾವು

Recent News