ಕುವೈತ್‌ ಅಗ್ನಿ ದುರಂತದ ಸ್ಥಳಕ್ಕೆ ತೆರಳಲು ಮುಂದಾಗಿದ್ದ ಕೇರಳದ ಸಚಿವೆ ವೀಣಾ ಜಾರ್ಜ್‌ಗೆ ಕೇಂದ್ರದ ಅಡ್ಡಿ?

ಕುವೈತ್‌ ಅಗ್ನಿ ದುರಂತದ ಸ್ಥಳಕ್ಕೆ ತೆರಳಲು ಮುಂದಾಗಿದ್ದ ಕೇರಳದ ಸಚಿವೆ ವೀಣಾ ಜಾರ್ಜ್‌ಗೆ ಕೇಂದ್ರದ ಅಡ್ಡಿ?

ನವದೆಹಲಿ, ಜೂ. 14: ಕುವೈತ್‌ ರಾಷ್ಟ್ರದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದ ಸಂತ್ರಸ್ತರಾಗಿರುವ ಕೇರಳ ರಾಜ್ಯದ ಜನರಿಗೆ ನೆರವು ನೀಡಲು ಕೇಂದ್ರ ಸರ್ಕಾರ ಕುವೈತ್‌ಗೆ ತೆರಳಲು ನನಗೆ ಅನುಮತಿ ನೀಡದಿರುವುದು ದುರದೃಷ್ಟಕರ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ನನಗೆ ಕುವೈತ್‌ಗೆ ಪ್ರಯಾಣಿಸಲು ಕೇಂದ್ರ ಸರಕಾರ ಅವಕಾಶ ನೀಡದಿರುವುದು ತುಂಬಾ ದುರದೃಷ್ಟಕರ. ಅಗ್ನಿ ದುರಂತದಲ್ಲಿ ಸಾವನ್ನಪ್ಪಿದವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಕೇರಳಿಗರು ಮತ್ತು ಗಾಯಗೊಂಡವರಲ್ಲಿ ಹೆಚ್ಚಿನವರು ಕೇರಳಿಗರು ಎಂದು ವೀಣಾ ಜಾರ್ಜ್ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೇಳಿದ್ದಾರೆ.
ಕೇರಳ ರಾಜ್ಯ ಸರ್ಕಾರವು ಗುರುವಾರ ತುರ್ತು ಸಚಿವ ಸಂಪುಟ ಸಭೆಯನ್ನು ಕರೆದಿದ್ದು, ಗಾಯಾಳುಗಳ ಚಿಕಿತ್ಸೆಗೆ ಸಂಬಂಧಿಸಿದ ಪ್ರಯತ್ನಗಳಿಗೆ ಮತ್ತು ಮೃತದೇಹವನ್ನು ಭಾರತಕ್ಕೆ ತರಲು ವ್ಯವಸ್ಥೆ ಮಾಡಲು ಆರೋಗ್ಯ ಸಚಿವರಾದ ವೀಣಾ ಜಾರ್ಜ್ ಕುವೈತ್‌ಗೆ ಪ್ರಯಾಣಿಸಲಿದ್ದಾರೆ ಎಂದು ಹೇಳಿತ್ತು.
ಕುವೈತ್‌ನ ಮಂಗಾಫ್ ನಗರದಲ್ಲಿ ಬುಧವಾರ ಆರು ಅಂತಸ್ತಿನ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 48 ಜನರು ಸಾವನ್ನಪ್ಪಿದ್ದಾರೆ. ವಸತಿ ಕಟ್ಟಡದಲ್ಲಿದ್ದ 176 ಭಾರತೀಯ ಕಾರ್ಮಿಕರಲ್ಲಿ 45 ಮಂದಿ ಸಾವನ್ನಪ್ಪಿದ್ದಾರೆ ಮತ್ತು 33 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಮೃತರಲ್ಲಿ ಕೇರಳದ 23, ತಮಿಳುನಾಡಿನ 7, ಉತ್ತರ ಪ್ರದೇಶದ ಮೂವರು, ಒಡಿಶಾದ ಇಬ್ಬರು ಮತ್ತು ಬಿಹಾರ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಹರಿಯಾಣದ ತಲಾ ಓರ್ವರು ಸೇರಿದ್ದಾರೆ.
ಗಂಭೀರವಾಗಿ ಗಾಯಗೊಂಡವರ ಸಂಖ್ಯೆಯ ಬಗ್ಗೆ ರಾಯಭಾರ ಕಚೇರಿ ನಮಗೆ ನಿಖರವಾದ ಡೇಟಾವನ್ನು ನೀಡಿಲ್ಲ. ನಾವು ಅಲ್ಲಿಂದ ಸಂಗ್ರಹಿಸಿದ ಮಾಹಿತಿಯೆಂದರೆ ಒಟ್ಟು 7 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರಲ್ಲಿ 4 ಜನರು ಕೇರಳದವರು, ಆದರೆ ನನ್ನ ಭೇಟಿ ಬಗ್ಗೆ ಅಧಿಕೃತವಾಗಿ ಘೋಷಿಸಲ್ಪಟ್ಟಿಲ್ಲ, ನಾನು ಗಾಯಾಳುಗಳೊಂದಿಗೆ ಇರಲು ಬಯಸುತ್ತೇನೆ ಮತ್ತು ಅವರ ಅಗತ್ಯಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲು ಬಯಸುತ್ತೇನೆ ಎಂದು ವೀಣಾ ಜಾರ್ಜ್ ಹೇಳಿದ್ದಾರೆ.
ಕುವೈತ್‌ನಿಂದ ಟೇಕ್ ಆಫ್ ಆಗಿರುವ 45 ಭಾರತೀಯ ಸಂತ್ರಸ್ತರ ಅವಶೇಷಗಳನ್ನು ಹೊತ್ತ ಭಾರತೀಯ ವಾಯುಪಡೆಯ ವಿಶೇಷ ವಿಮಾನವು ಶುಕ್ರವಾರ ಬೆಳಿಗ್ಗೆ ಭಾರತಕ್ಕೆ ಬರಲಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ ಘಟನೆ ಬಗ್ಗೆ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ದುರಂತದಿಂದ ಹಾನಿಗೊಳಗಾದವರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಗುರುವಾರ ಕುವೈತ್‌ಗೆ ತೆರಳಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ಕೀರ್ತಿ ವರ್ಧನ್ ಸಿಂಗ್, ಮಂಗಾಫ್‌ ದುರಂತದ ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ಪ್ರಜೆಗಳೊಂದಿಗೆ ಸಂವಾದ ನಡೆಸಿದ್ದಾರೆ.

Previous Post
ಲೋಕಸಭಾ ಸ್ಪೀಕರ್ ಹುದ್ದೆ: ಬಿಜೆಪಿಗೆ ಜೆಡಿಯು ಬೆಂಬಲ
Next Post
ಸರಣಿ ಭಯೋತ್ಪಾದಕ ದಾಳಿ, ಸಭೆ ನಡೆಸಿದ ಅಮಿತ್ ಶಾ

Recent News