ಕೇಂದ್ರದಿಂದ ರೈತಪರ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ನಿರ್ಬಂಧ

ಕೇಂದ್ರದಿಂದ ರೈತಪರ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ನಿರ್ಬಂಧ

ನವದೆಹಲಿ, ಫೆ. 20: ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವ ಅಥವಾ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವ ನೆಪದಲ್ಲಿ ಶಿಕ್ಷಣ ತಜ್ಞರು, ಹೋರಾಟಗಾರರು, ಬುದ್ಧಿ ಜೀವಿಗಳು ಮತ್ತು ವಿಮರ್ಶಕರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸುವ ಕೇಂದ್ರ ಸರ್ಕಾರದ ಕ್ರಮಕ್ಕೆ ನ್ಯಾಯಾಂಗದ ಮಧ್ಯಸ್ಥಿಕೆ ಮಾತ್ರ ಏಕೈಕ ಪರಿಹಾರ ಎಂದು ದಿ ಸೌತ್ ಫಸ್ಟ್‌ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ನಿನ್ನೆ(ಫೆಬ್ರವರಿ 19, ಸೋಮವಾರ) ಪತ್ರಕರ್ತ ಮತ್ತು ಆಲ್ಟ್ ನ್ಯೂಸ್‌ನ ಸಂಸ್ಥಾಪಕ ಮುಹಮ್ಮದ್ ಝುಬೈರ್ ಅವರು’ ರೈತ ಹೋರಾಟದ ಪರ ಇರುವ ಮತ್ತು ಕೇಂದ್ರದ ಬಿಜೆಪಿ ಸರ್ಕಾರವನ್ನು ಟೀಕಿಸುವ ಎಕ್ಸ್‌ ಖಾತೆಗಳನ್ನು ಬ್ಲಾಕ್ ಮಾಡಲಾಗುತ್ತಿದೆ ಎಂದು ಪೋಸ್ಟ್‌ ಹಾಕಿದ್ದರು. ನಿರ್ಬಂಧಿಸಲಾದ ಖಾತೆಗಳನ್ನು ಪುನಃಸ್ಥಾಪಿಸಲು ಸರ್ಕಾರಕ್ಕೆ ಅವರು ಮನವಿ ಮಾಡಿದ್ದರು.

“ಭಾರತದಲ್ಲಿ ರೈತರ ಪ್ರತಿಭಟನೆ ಪರ ಇರುವ ಗ್ರೌಂಡ್ ರಿಪೋರ್ಟರ್‌ಗಳು, ಪ್ರಮುಖ ರೈತ ಸಂಘಟನೆಗಳು ಮತ್ತು ಇತರ ಪ್ರಮುಖರ ಎಕ್ಸ್‌ ಖಾತೆಗಳನ್ನು ಅಮಾನತುಗೊಳಿಸಲಾಗಿದೆ. ಬ್ಲಾಕ್ ಮಾಡಲಾದ ಕೆಲ ಖಾತೆಗಳ ಮಾಹಿತಿ ಇಲ್ಲಿ ಹಂಚಿಕೊಂಡಿದ್ದೇನೆ. ಇವುಗಳಲ್ಲದೆ ಇನ್ನೂ ಹಲವು ಖಾತೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ದಯವಿಟ್ಟು ಅವುಗಳನ್ನು ಮರು ಸ್ಥಾಪಿಸಿ” ಎಂದು ಝಬೈರ್ ವಿನಂತಿ ಮಾಡಿಕೊಂಡಿದ್ದರು.

ಮಂಗಳವಾರ ‘ದಿ ಹಿಂದೂಸ್ತಾನ್ ಟೈಮ್ಸ್’ ವರದಿಯೊಂದನ್ನು ಪ್ರಕಟಿಸಿದ್ದು, “ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ‘ಸಾರ್ವಜನಿಕ ಸುವ್ಯವಸ್ಥೆ’ ಕಾಪಾಡುವ ಕಾರಣ ಹೇಳಿ ರೈತರ ಪ್ರತಿಭಟನೆಗಳಿಗೆ ಸಂಬಂಧಿಸಿದ 177 ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಲಿಂಕ್‌ಗಳ ವಿರುದ್ಧ ತುರ್ತು ನಿರ್ಬಂಧದ ಆದೇಶ ಹೊರಡಿಸಲು ಸೋಮವಾರ ತೀರ್ಮಾನಿಸಿದೆ” ಎಂದು ಹೇಳಿದೆ. ಒಟ್ಟು 35 ಫೇಸ್‌ಬುಕ್ ಲಿಂಕ್‌ಗಳು, 35 ಫೇಸ್‌ಬುಕ್ ಪ್ರೊಫೈಲ್‌ಗಳು, 14 ಇನ್‌ಸ್ಟಾಗ್ರಾಮ್ ಖಾತೆಗಳು, 42 ಎಕ್ಸ್ ಹ್ಯಾಂಡಲ್‌ಗಳು ಮತ್ತು ಒಂದು ಸ್ನ್ಯಾಪ್‌ಚಾಟ್ ಮತ್ತು ಒಂದು ರೆಡ್ಡಿಟ್ ಖಾತೆಗಳ ವಿರುದ್ಧ ಸೋಮವಾರ ನಿರ್ಬಂಧ ಆದೇಶ ಹೊರಡಿಸಲಾಗಿದೆ ಎಂದು ವರದಿ ತಿಳಿಸಿದೆ.

ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸುವ ಐಟಿ ಕಾಯ್ದೆಯ ಸೆಕ್ಷನ್ 69ಎ ಜಾರಿ ಕುರಿತ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದ ಮೆಟಾ ಮತ್ತು ಎಕ್ಸ್ ಪ್ರತಿನಿಧಿಗಳು, ಸಂಪೂರ್ಣ ಖಾತೆಗಳನ್ನು ನಿರ್ಬಂಧಿಸುವ ಬದಲು, ವಿಷಯದೊಂದಿಗೆ ನಿರ್ದಿಷ್ಟ URLಗಳನ್ನು ನಿರ್ಬಂಧಿಸಬೇಕು ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಮಿತಿ, “ಖಾತೆ ಸಕ್ರಿಯವಾಗಿದ್ದರೆ, ಸಾರ್ವಜನಿಕ ಅಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆ ಸಮಸ್ಯೆಗಳಿಗೆ ಕಾರಣವಾಗುವ ವಿಷಯವನ್ನು ಪೋಸ್ಟ್ ಮಾಡುವುದನ್ನು ಮುಂದುವರಿಸಬಹುದು” ಎಂದು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

“ಯಾರ ಖಾತೆಗಳನ್ನು ಬ್ಲಾಕ್ ಮಾಡಲಿದ್ದಾರೆ ಎಂಬುವುದರ ಮಾಹಿತಿ ಗೌಪ್ಯವಾಗಿರುವುದರಿಂದ, ಅದರ ಪಟ್ಟಿ ಪಡೆಯುವುದು ಸುಲಭವಲ್ಲ. 2009ರ ಸಾಮಾಜಿಕ ಖಾತೆಗಳನ್ನು ನಿರ್ಬಂಧಿಸುವ ನಿಯಮಗಳು ಗೌಪ್ಯತೆಯ ಷರತ್ತನ್ನು ಹೊಂದಿವೆ. ಅದು ಹೆಚ್ಚು ಕಡಿಮೆ ಯಾವಾಗಲೂ ಅನ್ವಯಿಸುತ್ತದೆ. ಈ ಹಿಂದೆ ಎಕ್ಸ್‌ ಲುಮೆನ್ ಡೇಟಾಬೇಸ್ ಮೂಲಕ ಕನಿಷ್ಠ ಬ್ಲಾಕ್ ಆದ URLಗಳನ್ನು ಬಹಿರಂಗಪಡಿಸುತ್ತಿತ್ತು. ಆದರೆ, ಏಪ್ರಿಲ್ 2023ರಲ್ಲಿ ಅದನ್ನು ನಿಲ್ಲಿಸಿದೆ ಎಂದು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ತಿಳಿಸಿದೆ.

Previous Post
ನಾರಿ ಶಕ್ತಿ ಎನ್ನುತ್ತೀರಿ, ಅದನ್ನು ಇಲ್ಲಿ ತೋರಿಸಿ: ಕೇಂದ್ರಕ್ಕೆ ಸುಪ್ರೀಂ ತರಾಟೆ
Next Post
ಇಂದು ದೆಹಲಿಯತ್ತ ರೈತರ ಪಯಣ, ಅಶ್ರುವಾಯು ಎದುರಿಸಲು ಸಿದ್ಧರಾದ ಅನ್ನದಾತರು

Recent News