ಕೇಂದ್ರ ಸಂಪುಟಕ್ಕೆ ಹೆಚ್ ಡಿಕೆ, ಜೋಶಿ, ಸೋಮಣ್ಣ, ನಿರ್ಮಲಾ, ಕರಂದ್ಲಾಜೆ ಬ್ರಾಹ್ಮಣ, ಒಕ್ಕಲಿಗರಿಗೆ ಆದ್ಯತೆ, ಲಿಂಗಾಯತರಿಗೆ ಒಂದೇ ಸ್ಥಾನ, ಓಬಿಸಿ, ದಲಿತರಿಗಿಲ್ಲ ಅದೂ ಇಲ್ಲ

ಕೇಂದ್ರ ಸಂಪುಟಕ್ಕೆ ಹೆಚ್ ಡಿಕೆ, ಜೋಶಿ, ಸೋಮಣ್ಣ, ನಿರ್ಮಲಾ, ಕರಂದ್ಲಾಜೆ ಬ್ರಾಹ್ಮಣ, ಒಕ್ಕಲಿಗರಿಗೆ ಆದ್ಯತೆ, ಲಿಂಗಾಯತರಿಗೆ ಒಂದೇ ಸ್ಥಾನ, ಓಬಿಸಿ, ದಲಿತರಿಗಿಲ್ಲ ಅದೂ ಇಲ್ಲ

ನವದೆಹಲಿ : ಲೋಕಸಭಾ ಚುನಾವಣೆಯ ಬೆನ್ನಲ್ಲಿಯೇ ಎನ್‌ಡಿಎ ಮೈತ್ರಿಕೂಟದ ನೇತೃತ್ವದಲ್ಲಿ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಅವರ ಸಂಪುಟದಲ್ಲಿ ರಾಜ್ಯದ ಐವರಿಗೆ ಸಚಿವ ಸ್ಥಾನ ಲಭಿಸಿದೆ. ಆ ಪೈಕಿ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಧಾರವಾಢ ಸಂಸದ ಪ್ರಹ್ಲಾದ್ ಜೋಶಿ ಅವರು ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ತುಮಕೂರು ಸಂಸದ ವಿ. ಸೋಮಣ್ಣ ರಾಜ್ಯ ಖಾತೆ ಸಚಿವ ಸ್ಥಾನ ಸಿಕ್ಕಿದೆ.
ರಾಜ್ಯದಿಂದ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ 17 ಹಾಗೂ ಜೆಡಿಎಸ್ 2 ಸೇರಿ ಒಟ್ಟು 19 ಮಂದಿ ಗೆದ್ದು ಸಂಸದರಾಗಿ ಲೋಕಸಭೆಗೆ ಪ್ರವೇಶ ಮಾಡಿದ್ದಾರೆ. ಅದರಲ್ಲಿ ಕಳೆದೆರಡು ಬಾರಿ ಕೇಂದ್ರ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ ಹಾಗೂ ಶೋಭಾ ಕರಂದ್ಲಾಜೆಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡಲಾಗಿದೆ. ಇದಲ್ಲದೆ ಮೈತ್ರಿಕೂಟದ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಇದೇ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿರುವ ವಿ. ಸೋಮಣ್ಣ ಅವರಿಗೆ ಮಂತ್ರಗಿರಿ ಸ್ಥಾನ ನೀಡಲಾಗಿದೆ.

ಬ್ರಾಹ್ಮಣ-ಒಕ್ಕಲಿಗರಿಗೆ ಆದ್ಯತೆ
ನರೇಂದ್ರ ಮೋದಿ ಅವರ ಸಂಪುಟದಲ್ಲಿ ರಾಜ್ಯದಿಂದ ಕಳೆದ ಬಾರಿಯೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ನಿರ್ಮಲಾ ಸೀತಾರಾಮನ್ ಮತ್ತು ಪ್ರಹ್ಲಾದ್ ಜೋಶಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದರು. ಪ್ರಮುಖ ಖಾತೆಗಳೂ ಲಭಿಸಿದ್ದವು. ಈ ಸಲವೂ ಅವರಿಗೆ ಸಂಪುಟ ದರ್ಜೆಯ ಸ್ಥಾನವೇ ಸಿಕ್ಕಿದೆ.
ಇದಲ್ಲದೆ ಒಕ್ಕಲಿಗ ಸಮುದಾಯಕ್ಕೂ ಕೇಂದ್ರ ಸಂಪುಟದಲ್ಲಿ ಹೆಚ್ಚಿನ ಪ್ರಾಧಾನ್ಯತೆ ದೊರೆತಿದೆ. ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಶೋಭಾ ಕರಂದ್ಲಾಜೆ ಅವರು ಮೋದಿ ಸಂಪುಟ ಸೇರಿದ್ದಾರೆ. ಈ ಪೈಕಿ ಕುಮಾರಸ್ವಾಮಿ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ಸಿಕ್ಕಿದ್ದರೆ ಶೋಭಾ ಕರಂದ್ಲಾಜೆ ಅವರು ಮತ್ತೊಮ್ಮೆ ರಾಜ್ಯ ಖಾತೆಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಒಟ್ಟಿನಲ್ಲಿ ಈ ಬಾರಿಯ ನರೇಂದ್ರ ಮೋದಿ ಸಂಪುಟದಲ್ಲಿ ರಾಜ್ಯದಿಂದ ಬ್ರಾಹ್ಮಣ ಮತ್ತು ಒಕ್ಕಲಿಗ ಸಮುದಾಯಕ್ಕೆ ಹೆಚ್ಚು ಅವಕಾಶ ನೀಡಲಾಗಿದೆ.

ಲಿಂಗಾಯತರಿಗೆ ಒಂದೇ ಸ್ಥಾನ
ರಾಜ್ಯದಿಂದ ಈ ಬಾರಿ ಲೋಕಸಭೆಗೆ ಘಟಾನುಘಟಿ ಲಿಂಗಾಯತ ನಾಯಕರು ಆಯ್ಕೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಬೆಳಗಾವಿಯಿಂದ ಮತ್ತು ಬಸವರಾಜ ಬೊಮ್ಮಾಯಿ ಹಾವೇರಿಯಿಂದ ಆಯ್ಕೆಯಾಗಿದ್ದಾರೆ. ಬಾಗಲಕೋಟೆಯಿಂದ 5ನೇ ಸಲ ಪಿಸಿ ಗದ್ದಿಗೌಡರ್ ಆಯ್ಕೆಯಾಗಿದ್ದಾರೆ. ಇದಲ್ಲದೆ ಶಿವಮೊಗ್ಗದಿಂದ ಬಿವೈ ರಾಘವೇಂದ್ರ 4ನೇ ಬಾರಿ ಸಂಸತ್ ಪ್ರವೇಶಿಸಿದ್ದಾರೆ. ಇವರನ್ನೆಲ್ಲಾ ಬಿಟ್ಟು ಇದೇ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿರುವ ವಿ. ಸೋಮಣ್ಣ ಅವರಿಗೆ ಮಂತ್ರಗಿರಿ ಸ್ಥಾನ ಕೊಡಲಾಗಿದೆ. ಅದೂ ಸೋಮಣ್ಣ ಅವರಿಗೆ ರಾಜ್ಯ ದರ್ಜೆ ಖಾತೆ ನೀಡಲಾಗಿದೆ. ರಾಜ್ಯದಿಂದ ಲಿಂಗಾಯತ ಸಮುದಾಯದ ಹೆಚ್ಚು ಸಂಸದರು ಆಯ್ಕೆಯಾಗಿದ್ದರೂ ಕೇವಲ ಒಬ್ಬರಿಗೆ ಅದೂ ರಾಜ್ಯ ಖಾತೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಓಬಿಸಿ, ದಲಿತರಿಗಿಲ್ಲ ಅವಕಾಶ

ಮೋದಿ ಸಂಪುಟದಲ್ಲಿ ರಾಜ್ಯದಿಂದ ಬ್ರಾಹ್ಮಣ ಮತ್ತು ಒಕ್ಕಲಿಗ ಸಮುದಾಯಕ್ಕೆ ಹೆಚ್ಚು ಅವಕಾಶ ನೀಡಲಾಗಿದೆ. ಲಿಂಗಾಯತ ಸಮುದಾಯದ ಪೈಕಿ ಒಬ್ಬರನ್ನು ಮಾತ್ರ ಪರಿಗಣಿಸಲಾಗಿದೆ. ಆದರೆ ಹಿಂದುಳಿದ ವರ್ಗಗಳು ಮತ್ತು ದಲಿತರ ಪೈಕಿ ಯಾರಿಗೂ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ. ಇದು ಕೂಡ ರಾಜ್ಯ ರಾಜಕೀಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
ಹಿಂದುಳಿದ ವರ್ಗಗಳ ಪೈಕಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಪಿಸಿ ಮೋಹನ್ ಹೆಸರು ಬಹಳ ಪ್ರಬಲವಾಗಿ ಕೇಳಿಬಂದಿತ್ತು. ಇದಲ್ಲದೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರ ಹೆಸರು ಚರ್ಚೆಯಲ್ಲಿ ಇತ್ತು. ಆದರೆ ಯಾರನ್ನೂ ಪರಿಗಣಿಸಿಲ್ಲ.
ಇದೇ ರೀತಿ ದಲಿತ ಎಡಗೈ ಸಮುದಾಯದ ವತಿಯಿಂದ ಹಿರಿಯ ನಾಯಕರಾದ ರಮೇಶ್ ಜಿಗಜಿಣಗಿ ಮತ್ತು ಗೋವಿಂದ ಕಾರಜೋಳ ಈ ಬಾರಿ ಸಂಸತ್ ಗೆ ಆಯ್ಕೆಯಾಗಿದ್ದಾರೆ. ಈ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು ಎಂದು ಹೇಳಲಾಗಿತ್ತು. ಆದರೆ ದಲಿತರ ಪೈಕಿ ಕೂಡ ಬಿಜೆಪಿ ಹೈಕಮಾಂಡ್ ಯಾರನ್ನೂ ಗಣನೆಗೆ ತೆಗೆದುಕೊಂಡಿಲ್ಲ.

Previous Post
ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ
Next Post
J&K ಉಗ್ರರ ಅಟ್ಟಹಾಸ ; ಬಸ್ ಕಣಿವೆಗೆ ಉರುಳಿ 10 ಯಾತ್ರಿಗಳು ಮೃತ್ಯು

Recent News