ಕೇಂದ್ರ ಸರ್ಕಾರದಿಂದ ಕೋಮು ಸಿದ್ಧಾಂತ ಹೇರುವ ಪ್ರಯತ್ನ: ಮಲ್ಲಿಕಾರ್ಜುನ ಖರ್ಗೆ

ಕೇಂದ್ರ ಸರ್ಕಾರದಿಂದ ಕೋಮು ಸಿದ್ಧಾಂತ ಹೇರುವ ಪ್ರಯತ್ನ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ, ಆ. 8: ಶಾಲಾ ಮಕ್ಕಳ ಕೆಲ ಪಠ್ಯ ಪುಸ್ತಕಗಳಿಂದ ಸಂವಿಧಾನದ ಪ್ರಸ್ತಾವನೆಯನ್ನು ಕೈಬಿಡಲು ಎನ್‌ಸಿಇಆರ್‌ಟಿ ಮುಂದಾಗಿದೆ ಎಂಬ ವಿಚಾರವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ “ಇದು ದೇಶದ ಮೇಲೆ ಕೋಮು ಸಿದ್ಧಾಂತವನ್ನು ಹೇರುವ ಪ್ರಯತ್ನ” ಎಂದಿದ್ದಾರೆ. ರಾಜಕೀಯ ಪ್ರಜಾಪ್ರಭುತ್ವವು ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯಲ್ಲಿ ಇರದ ಹೊರತು ಅದು ಉಳಿಯುವುದಿಲ್ಲ. ಸಾಮಾಜಿಕ ಪ್ರಜಾಪ್ರಭುತ್ವದ ಅರ್ಥವೇನು? ಇದರರ್ಥ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ತತ್ವಗಳಾಗಿ ಗುರುತಿಸುವ ಜೀವನ ವಿಧಾನ” ಎಂದು ಹೇಳಿದ ಖರ್ಗೆ ಅವರು, ನವೆಂಬರ್ 1948ರಲ್ಲಿ ಸಂವಿಧಾನ ಸಭೆಯ ಚರ್ಚೆಯನ್ನು ರಾಜ್ಯಸಭೆಯಲ್ಲಿ ಉಲ್ಲೇಖಿಸಿದ್ದಾರೆ. “ಭವಿಷ್ಯದ ಪೀಳಿಗೆಗೆ ಭಾರತೀಯ ಪ್ರಜಾಪ್ರಭುತ್ವ, ಸಂವಿಧಾನದ ಮೂಲ ತತ್ವಗಳು, ಮೌಲ್ಯಗಳು ಹಾಗೂ ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರು, ಬಿ ಆರ್ ಅಂಬೇಡ್ಕರ್ , ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ತ್ಯಾಗದ ಬಗ್ಗೆ ಶಿಕ್ಷಣ ನೀಡಬೇಕು” ಎಂದು ಖರ್ಗೆ ಹೇಳಿದ್ದಾರೆ. “ಇಂದು, ನಾವು ಕೆಲವು ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಿಂದ ಸಂವಿಧಾನದ ಪ್ರಸ್ತಾವನೆಯನ್ನು ತೆಗೆದು ಹಾಕುವ ಕುರಿತ ಬಹಳ ಮುಖ್ಯವಾದ ವಿಷಯವನ್ನು ರಾಜ್ಯಸಭೆಯ ಎತ್ತಿದ್ದೇವೆ. ಮೋದಿ ಸರ್ಕಾರದಿಂದ ಸ್ಪಷ್ಟೀಕರಣವನ್ನು ಕೋರಿದ್ದೇವೆ. ಸಭಾನಾಯಕ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಈ ವಿಷಯವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ ಮತ್ತು ಸಂಪೂರ್ಣ ವಿಷಯದ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ” ಎಂದು ಖರ್ಗೆ ಅವರು ಎಕ್ಸ್ ಪೋಸ್ಟ್ ಮೂಲಕ ತಿಳಿಸಿದ್ದಾರೆ. “2024ರ ಲೋಕಸಭೆ ಚುನಾವಣೆಯಲ್ಲಿ 140 ಕೋಟಿ ಭಾರತೀಯರು ‘400 ಪಾರ್’ ಘೋಷಣೆಯ ಕನಸನ್ನು ಭಗ್ನಗೊಳಿಸಿದ್ದರಿಂದ ಹತಾಶೆಯಲ್ಲಿರುವ ಮೋದಿ ಸರ್ಕಾರ, ಹಿಂಬಾಗಿಲಿನಿಂದ ಪಿಟೀಲು ಬಾರಿಸುವ ಮೂಲಕ ಮಕ್ಕಳ ಪಠ್ಯಪುಸ್ತಕಗಳಲ್ಲಿ ಸಂವಿಧಾನವನ್ನು ತಿದ್ದಲು ಮುಂದಾಗಿದೆ. ಇದಕ್ಕೆ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ” ಎಂದು ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಆರೋಪವನ್ನು ತಳ್ಳಿ ಹಾಕಿದ್ದು, “6 ನೇ ತರಗತಿಯ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ಸಂವಿಧಾನದ ಪೀಠಿಕೆ ತುಂಬಾ ಚೆನ್ನಾಗಿದೆ. ಹೊಸ ಪಠ್ಯಪುಸ್ತಕಗಳಲ್ಲಿ, ಸಂವಿಧಾನದ ಪೀಠಿಕೆಯ ಜೊತೆಗೆ, ಮೂಲಭೂತ ಕರ್ತವ್ಯಗಳು, ಮೂಲಭೂತ ಹಕ್ಕುಗಳು, ರಾಷ್ಟ್ರಗೀತೆ ಮತ್ತು ಸಂವಿಧಾನದ ಮೂಲ ಮೌಲ್ಯಗಳನ್ನು ಕೂಡ ಸೇರಿಸಲಾಗಿದೆ” ಎಂದು ಹೇಳಿದ್ದಾರೆ. ಸಂಸತ್ತಿನ ಸಂಕೀರ್ಣದಲ್ಲಿರುವ ಗಾಂಧಿ ಮತ್ತು ಅಂಬೇಡ್ಕರ್ ಪ್ರತಿಮೆಗಳ ಸ್ಥಳಾಂತರದ ಬಗ್ಗೆಯೂ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರೆ, ಅಧ್ಯಕ್ಷ ಜಗದೀಪ್ ಧನಖರ್ ಅವರು “ಕಾಂಗ್ರೆಸ್ ಅಧ್ಯಕ್ಷರು ವಿಷಯ ಬದಲಿಸುತ್ತಿದ್ದಾರೆ” ಎಂದಿದ್ದಾರೆ. “ಆರ್‌ಎಸ್‌ಎಸ್ ಮತ್ತು ಬಿಜೆಪಿ ಪಠ್ಯಕ್ರಮವನ್ನು ತಿದ್ದುವ ಮೂಲಕ ತಮ್ಮ ಕೋಮುವಾದಿ ಸಿದ್ಧಾಂತವನ್ನು ಜನರ ಮೇಲೆ ಹೇರಲು ಪ್ರಯತ್ನಿಸುತ್ತಿವೆ. ಎನ್‌ಸಿಇಆರ್‌ಟಿ ತೆಗೆದುಕೊಂಡಿರುವ ಹೆಜ್ಜೆ ಸರಿಯಲ್ಲ” ಎಂದು ಬುಧವಾರ ಬೆಳಗ್ಗೆ ಆಡಳಿತ ಪಕ್ಷದಿಂದ ನಡೆದ ಪ್ರತಿಭಟನೆಯ ವೇಳೆಯೂ ಖರ್ಗೆ ಹೇಳಿದ್ದರು.

Previous Post
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿಷಯಾಧಾರಿತ ಸ್ವಾತಂತ್ರ್ಯೋತ್ಸವ 216ನೇ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿದ ಸಿಎಂ
Next Post
ವಕ್ಫ್ ಬೋರ್ಡ್ ಕಾನೂನು ತಿದ್ದುಪಡಿಗೆ ಕೇಂದ್ರದ ಪ್ರಯತ್ನ, ಸಂವಿಧಾನದ ತತ್ವಗಳಲ್ಲಿ ನಂಬಿಕೆಯಿರಿಸಿರುವ ಕಾಂಗ್ರೆಸ್ ನಿಂದ ಕೇಂದ್ರದ ನಿಲುವಿಗೆ ವಿರೋಧ- ಮುಖ್ಯಮಂತ್ರಿ ಸಿದ್ದರಾಮಯ್ಯ

Recent News