ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್ ಗೆ ಸುಪ್ರೀಂ ಜಾಮೀನು
ನವದೆಹಲಿ : ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ನೀಡಿದೆ.
ನ್ಯಾ. ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಜಾಮೀನು ಕೋರಿ ಬಿಭವ್ ಕುಮಾರ್ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿತು. ಬಿಭವ್ ಕುಮಾರ್ 100 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು ಮತ್ತು ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಗಮನಿಸಿ ಜಾಮೀನು ಮಂಜೂರು ಮಾಡಲಾಯಿತು.
ಮಲಿವಾಲ್ ಮೇಲೆ ದೊಡ್ಡ ಪ್ರಮಾಣದ ಹಲ್ಲೆಯಾಗಿಲ್ಲ, ಇದು ಜಾಮೀನಿಗೆ ಸಂಬಂಧಿಸಿದ ಪ್ರಕರಣವಾಗಿದೆ. ನೀವು ವಿರೋಧಿಸಬಾರದು. ಇಂತಹ ಪ್ರಕರಣದಲ್ಲಿ ನೀವು ಒಬ್ಬ ವ್ಯಕ್ತಿಯನ್ನು ಜೈಲಿನಲ್ಲಿ ಇರಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದರು. ದೆಹಲಿ ಪೊಲೀಸರ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, ಕೆಲವು ಪ್ರಮುಖ ಸಾಕ್ಷಿಗಳು ಬಿಭವ್ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.
ಮೇ 13 ರಂದು ಮುಖ್ಯಮಂತ್ರಿಗಳ ನಿವಾಸದಲ್ಲಿ ಬಿಭವ್ ಕುಮಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ವಾತಿ ಮಲಿವಾಲ್ ಆರೋಪಿಸಿದ್ದರು. ಏಮ್ಸ್ ಬಿಡುಗಡೆ ಮಾಡಿದ ಆಕೆಯ ವೈದ್ಯಕೀಯ ವರದಿಯಲ್ಲಿ ಆಕೆಯ ಮುಖ ಮತ್ತು ಕಾಲಿನ ಮೇಲೆ ಗಾಯಾಗಳಾಗಿದ್ದವು. ಐಪಿಸಿ ಸೆಕ್ಷನ್ 308, 341, 354 ಬಿ, 506 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ ನಂತರ ಬಿಭವ್ ಕುಮಾರ್ ಅವರನ್ನು ಮೇ 18 ರಂದು ದೆಹಲಿ ಪೊಲೀಸರು ಬಂಧಿಸಿದ್ದರು. ಕಳೆದ ತಿಂಗಳು, ದೆಹಲಿ ನ್ಯಾಯಾಲಯವು ಬಿಭವ್ ಕುಮಾರ್ ಅವರ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 13 ರವರೆಗೆ ವಿಸ್ತರಿಸಿತು