ಕೇಜ್ರಿವಾಲ್‌ ಬಂಧಿಸಿದ ಸಿಬಿಐ

ಕೇಜ್ರಿವಾಲ್‌ ಬಂಧಿಸಿದ ಸಿಬಿಐ

ನವದೆಹಲಿ, ಜೂ. 26: ಆಪಾದಿತ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಬಿಐ ಬುಧವಾರ (ಜೂನ್ 26) ಅಧಿಕೃತವಾಗಿ ಬಂಧಿಸಿದೆ. ತನಿಖೆ ನಡೆಸಲು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಅನುಮತಿ ನೀಡಿದ ಹಿನ್ನೆಲೆ, ಕೇಜ್ರಿವಾಲ್ ಅವರನ್ನು ಸಿಬಿಐ ಔಪಚಾರಿಕವಾಗಿ ಬಂಧಿಸಿತು.
ಕೇಜ್ರಿವಾಲ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಿಬಿಐ ಸಲ್ಲಿಸಿದ ಮನವಿ ಮತ್ತು ಜೂನ್ 24 ರಂದು ತಿಹಾರ್‌ ಜೈಲಿನಲ್ಲಿ ತನಿಖೆಗೊಳಪಡಿಸಲು ತಾನು ಸಿಬಿಐಗೆ ನೀಡಿದ ಆದೇಶದ ಪ್ರತಿಗಳನ್ನು ಕೇಜ್ರಿವಾಲ್‌ ಅವರಿಗೆ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ .ಕೆ ಸಕ್ಸೇನಾ ಅವರು ಜುಲೈ 20, 2022 ರಂದು ನೀಡಿದ್ದ ದೂರಿನ ಮೇರೆಗೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು.

ಜೂನ್ 25ರಂದು ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಯನ್ನು ಜೈಲಿನಿಂದ ಪಡೆದಿದ್ದ ಸಿಬಿಐ, ಇಂದು ವಿಚಾರಣಾ ನ್ಯಾಯಾಲಯದ ಮುಂದೆ ಅವರನ್ನು ಹಾಜರುಪಡಿಸಲು ಅನುಮತಿ ಕೋರಿತ್ತು. ನ್ಯಾಯಾಲಯಕ್ಕೆ ಸಿಬಿಐ ಅರ್ಜಿ ಸಲ್ಲಿಸುವ ಬಗ್ಗೆ ಮತ್ತು ಅವರನ್ನು ಪ್ರಶ್ನಿಸಲು ಆದೇಶ ಪಡೆಯುವ ಬಗ್ಗೆ ತನಗೆ ಮಾಹಿತಿ ನೀಡಿಲ್ಲ. ಈ ವಿಚಾರ ಮಾಧ್ಯಮಗಳಿಂದ ಗೊತ್ತಾಗಿದೆ ಎಂದು ಕೇಜ್ರಿವಾಲ್ ಪರ ವಕೀಲ ವಿವೇಕ್ ಜೈನ್ ಹೇಳಿದ್ದಾರೆ.
“ಸಿಬಿಐ ಕ್ರಮ ಕಳವಳಕಾರಿಯಾಗಿದ್ದು ಈ ಕುರಿತ ದಾಖಲೆಗಳನ್ನು ಅಧ್ಯಯನ ಮಾಡಲು ನ್ಯಾಯಾಲಯ ಅವಕಾಶ ಮಾಡಿಕೊಡಬೇಕು. ವಿಚಾರಣೆಯನ್ನು ನಾಳೆಗೆ ಮುಂದೂಡಿ” ಎಂದು ಕೇಜ್ರಿವಾಲ್ ಪರ ಹಾಜರಾದ ಮತ್ತೊಬ್ಬ ಹಿರಿಯ ವಕೀಲ ವಿಕ್ರಮ್ ಚೌಧರಿ ಆಗ್ರಹಿಸಿದ್ದಾರೆ. ಆದರೆ, ತನಿಖೆ ನಡೆಸುವುದು ತನ್ನ ಪರಮಾಧಿಕಾರವಾಗಿದ್ದು, ಆರೋಪಿಗಳಿಗೆ ಮಾಹಿತಿ ನೀಡಬೇಕೆಂಬ ಕಾನೂನು ಇಲ್ಲ ಎಂದು ಸಿಬಿಐ ಸಮರ್ಥಿಸಿಕೊಂಡಿದೆ.
ಸಿಬಿಐ ಪರ ವಕೀಲರು ಬಂಧನ ಕುರಿತಂತೆ ತಮ್ಮ ಬಳಿ ಇರುವ ದಾಖಲೆಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದು. ನಂತರ ಕೇಜ್ರಿವಾಲ್‌ ಪರ ವಕೀಲರ ವಾದ ಆಲಿಸುವುದಾಗಿ ಸ್ಪಷ್ಟಪಡಿಸಿದ ನ್ಯಾಯಾಲಯ, ದಾಖಲೆಗಳನ್ನು ಒದಗಿಸುವುದರ ಜೊತೆಗೆ ಆದೇಶ ನೀಡುವುದಾಗಿ ತಿಳಿಸಿದೆ.

Previous Post
28ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿಗೆ ಬಿಜೆಪಿ ಮುತ್ತಿಗೆ- ಬಿ.ವೈ.ವಿಜಯೇಂದ್ರ
Next Post
ವಿಪಕ್ಷಗಳ ಧ್ವನಿ ಹತ್ತಿಕ್ಕಲ್ಲವೆಂಬ ನಿರೀಕ್ಷೆ ಇದೆ ಎಂದ ರಾಹುಲ್ ಗಾಂಧಿ, ಅಖಿಲೇಶ್ ಯಾದವ್

Recent News