ಕೇಜ್ರಿವಾಲ್ ಭೇಟಿಗೆ ಕುಟುಂಬಸ್ಥರಿಗೆ ಅವಕಾಶ ನೀಡುತ್ತಿಲ್ಲ: ಸಂಜಯ್ ಸಿಂಗ್

ಕೇಜ್ರಿವಾಲ್ ಭೇಟಿಗೆ ಕುಟುಂಬಸ್ಥರಿಗೆ ಅವಕಾಶ ನೀಡುತ್ತಿಲ್ಲ: ಸಂಜಯ್ ಸಿಂಗ್

ನವದೆಹಲಿ, ಏ. 13: ತಿಹಾರ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಕುಟುಂಬಸ್ಥರಿಗೆ ಅವಕಾಶ ನೀಡುತ್ತಿಲ್ಲ ಎಂದು ಎಎಪಿ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಂಗ್, ಸಿಎಂ ಕೇಜ್ರಿವಾಲ್ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಅವರ ಕುಟುಂಬಕ್ಕೆ ವೈಯಕ್ತಿಕವಾಗಿ ಭೇಟಿಯಾಗಲು ಅವಕಾಶ ನೀಡುತ್ತಿಲ್ಲ, ಜಂಗ್ಲಾ ಮೂಲಕ ಮಾತ್ರ ಅವರನ್ನು ಭೇಟಿಯಾಗಲು ಅವಕಾಶ ನೀಡಲಾಗುತ್ತಿದೆ ಎಂದು ಸಂಜಯ್ ಸಿಂಗ್‌ ಹೇಳಿದ್ದಾರೆ.

ಮುಲಾಕತ್ ಜಂಗ್ಲಾ ಕಬ್ಬಿಣದಿಂದ ನಿರ್ಮಿಸಿದ ಪರದೆಯಾಗಿದೆ. ಇದು ಜೈಲಿನೊಳಗಿನ ಕೊಠಡಿಯಲ್ಲಿ ಸಂದರ್ಶಕರಿಂದ ಕೈದಿಗಳನ್ನು ಪ್ರತ್ಯೇಕಿಸುತ್ತದೆ. ಸಂದರ್ಶಕರು ಮತ್ತು ಕೈದಿಗಳು ಎರಡು ಬದಿಗಳಲ್ಲಿ ಕುಳಿತು ಪರಸ್ಪರ ಮಾತನಾಡಬಹುದಾಗಿದೆ. ಸಂಜಯ್‌ ಸಿಂಗ್‌ ಆರೋಪದ ಬಗ್ಗೆ ತಿಹಾರ್ ಜೈಲು ಆಡಳಿತ ಈ ಬಗ್ಗೆ ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.
ಕೇಜ್ರಿವಾಲ್ ಅವರನ್ನು ಪಂಜಾಬ್ ಸಿಎಂ ಭಗವಂತ್ ಮಾನ್ ಅವರಿಗೆ ಭೇಟಿ ನೀಡಲು ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಸಾಮನ್ಯ ಸಂದರ್ಶಕರಂತೆ ಪರದೆಯ ಹಿಂದಿನಿಂದ ಮಾತ್ರ ಮಾತುಕತೆಗೆ ಅವಕಾಶ ನೀಡಲಾಗಿದೆ. ಮಂಗಳವಾರ ತಿಹಾರ್ ಜೈಲಿನಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ತಮ್ಮ ಪತ್ನಿ ಸುನಿತಾ ಕೇಜ್ರಿವಾಲ್ ಮತ್ತು ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಭೇಟಿ ಮಾಡಿದ್ದರು.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ 600 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಇಡಿ ಬಂಧಿಸಿತ್ತು. ಅವರನ್ನು ಏಪ್ರಿಲ್ 15ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ದೆಹಲಿಯ ಮಧ್ಯ ನೀತಿ ಹಗರಣದಲ್ಲಿ ಕೇಜ್ರಿವಾಲ್‌ ಕಿಂಗ್‌ಪಿನ್‌ ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ಹೇಳಿದ್ದು, 2021-22ರ ಅಬಕಾರಿ ನೀತಿಯನ್ನು ರೂಪಿಸುವ ಪಿತೂರಿಯಲ್ಲಿ ಅರವಿಂದ್ ಕೇಜ್ರಿವಾಲ್ ಭಾಗಿಯಾಗಿದ್ದಾರೆ. ನಿರ್ದಿಷ್ಟ ವ್ಯಕ್ತಿಗಳಿಗೆ ಸಹಾಯ ಮಾಡಲು ಮತ್ತು ಸದರಿ ನೀತಿಯ ಮೂಲಕ ಮದ್ಯದ ಉದ್ಯಮಿಗಳಿಂದ ಕಿಕ್‌ಬ್ಯಾಕ್‌ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿತ್ತು. ಕೇಜ್ರಿವಾಲ್‌ ಬಂಧನವನ್ನು ಖಂಡಿಸಿ ಈ ಮೊದಲು ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಮೈತ್ರಕೂಟದ ರ್ಯಾಲಿ ನಡೆದಿತ್ತು. ರ್ಯಾಲಿಯಲ್ಲಿ ಸೋನಿಯಾ ಗಾಂಧಿ, ಸುನಿತಾ ಕೇಜ್ರಿವಾಲ್‌ ಮತ್ತು ಬಂಧಿತ ಜಾರ್ಖಾಂಡ್ ಮಾಜಿ ಸಿಎಂ ಹೇಮಂತ್ ಸೋರೆನ್ ಅವರ ಪತ್ನಿ ಕಲ್ಪನಾ ಸೋರೆನ್ ಅವರು ಭಾಗವಹಿಸಿದ್ದರು.

Previous Post
ಹೇಮಂತ್ ಸೊರೆನ್ ಬಂಧನ ಖಂಡಿಸಿ ಪ್ರತಿಭಟಿಸಿದ ಆದಿವಾಸಿಗಳ ವಿರುದ್ಧ FIR
Next Post
ಬಡ ಕುಟುಂಬಕ್ಕೆ ವಾರ್ಷಿಕ 1 ಲಕ್ಷ ರೂ., 1 ಕೋಟಿ ಸರ್ಕಾರಿ ಉದ್ಯೋಗ: ಆರ್‌ಜೆಡಿ ಭರವಸೆ

Recent News