ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸ್ಸು ಮಾಡಿದ ಎಲ್‌ಜಿ

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸ್ಸು ಮಾಡಿದ ಎಲ್‌ಜಿ

ನವದೆಹಲಿ : ನಿಷೇಧಿತ ಭಯೋತ್ಪಾದಕ ಸಂಘಟನೆ ‘ಸಿಖ್ಸ್ ಫಾರ್ ಜಸ್ಟೀಸ್’ ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಶಿಫಾರಸು ಮಾಡಿದ್ದಾರೆ.

ಎಎಪಿಯು 1993ರ ದೆಹಲಿ ಬಾಂಬ್‌ ಸ್ಪೋಟ ಪ್ರಕರಣದ ಅಪರಾಧಿ ದೇವೇಂದ್ರ ಪಾಲ್ ಭುಲ್ಲರ್ ಬಿಡುಗಡೆಗೆ ಅನುಕೂಲವಾಗುವಂತೆ ಉಗ್ರ ಖಲಿಸ್ತಾನಿ ಗುಂಪುಗಳಿಂದ 16 ಮಿಲಿಯನ್ ಅಮರಿಕ ಡಾಲರ್ ಹಣ ಪಡೆದಿದೆ ಎಂಬ ದೂರನ್ನು ಸಕ್ಸೇನಾ ಅವರು ಸ್ವೀಕರಿಸಿದ್ದಾರೆ ಎಂದು ಕೇಂದ್ರ ಗೃಹ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ರಾಜ್ಯಪಾಲರ ಕಾರ್ಯದರ್ಶಿ ತಿಳಿಸಿದ್ದಾರೆ.

ಪತ್ರದಲ್ಲಿ 2014ರಲ್ಲಿ ನ್ಯೂಯಾರ್ಕ್‌ನ ಗುರುದ್ವಾರ ರಿಚ್‌ಮಂಡ್ ಹಿಲ್ಸ್‌ನಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಖಲಿಸ್ತಾನಿ ಪರ ಸಿಖ್ಖರ ನಡುವೆ ರಹಸ್ಯ ಸಭೆ ನಡೆದಿದೆ. ಅರವಿಂದ್ ಕೇಜ್ರಿವಾಲ್ ಅವರು ದೇಣಿಗೆಗೆ ಬದಲಾಗಿ ಭುಲ್ಲರ್ ಬಿಡುಗಡೆಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಪತ್ರದ ಪ್ರಕಾರ, ಎಎಪಿ ಕಾರ್ಯಕರ್ತ ಮುನೀಶ್ ಕುಮಾರ್ ರೈಜಾಡಾ ಅವರು ರಿಚ್ಮಂಡ್ ಹಿಲ್ ಗುರುದ್ವಾರದಲ್ಲಿ ಸಿಖ್ ನಾಯಕರನ್ನು ಅರವಿಂದ್ ಕೇಜ್ರಿವಾಲ್ ಭೇಟಿಯಾದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಕೇಜ್ರಿವಾಲ್ ಅವರು ಖಲಿಸ್ತಾನ್ ಪರ ಸಿಖ್ ನಾಯಕರೊಂದಿಗೆ ಗೌಪ್ಯ ಸಭೆ ನಡೆಸಿದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಇದಲ್ಲದೆ ಕೇಜ್ರಿವಾಲ್ ಅವರು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದು ಭುಲ್ಲರ್‌ಗೆ ಕ್ಷಮಾದಾನ ಕೋರಿದ್ದಾರೆ ಎಂದು ಆಪಾದಿಸಲಾಗಿದೆ.

ದೂರುದಾರರು ಸಲ್ಲಿಸಿರುವ ಎಲೆಕ್ಟ್ರಾನಿಕ್ ಸಾಕ್ಷ್ಯಗಳಿಗೆ ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆ ಸೇರಿದಂತೆ ತನಿಖೆಯ ಅಗತ್ಯವಿದೆ ಎಂದು ಸಕ್ಸೇನಾ ಹೇಳಿದ್ದಾರೆ. ನಿಷೇಧಿತ ಭಯೋತ್ಪಾದಕ ಸಂಘಟನೆಯಿಂದ ರಾಜಕೀಯ ದೇಣಿಗೆ ಪಡೆದ ಆರೋಪದಲ್ಲಿ ಮುಖ್ಯಮಂತ್ರಿಯೊಬ್ಬರ ವಿರುದ್ಧ ದೂರು ಸಲ್ಲಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ಕುರಿತು ನಾಳೆ ಸುಪ್ರೀಂಕೋರ್ಟ್‌ ಮಹತ್ವದ ನಿರ್ಧಾರ ಪ್ರಕಟಿಸಲಿದೆ, ಈ ಮಧ್ಯೆ ಈ ಬೆಳವಣಿಗೆ ನಡೆದಿದೆ.

Previous Post
ನಾಳೆ 3ನೇ ಹಂತದ ಲೋಕಸಭಾ ಚುನಾವಣೆ : 93 ಕ್ಷೇತ್ರಗಳಲ್ಲಿ ಮತದಾನ
Next Post
ಮತದಾನದ ವಿವರ ತಡವಾಗಿ ಪ್ರಕಟ, ಮತದಾರರ ಮಾಹಿತಿ ಮಾಯ: ಖರ್ಗೆ

Recent News