ಕೋವಿಡ್ ಕುರಿತು ವರದಿ ಮಾಡಿದ್ದಕ್ಕೆ ಬಂಧಿಸಲ್ಪಟ್ಟಿದ್ದ ಪತ್ರಕರ್ತೆಯ ಬಿಡುಗಡೆ
ಬೀಜಿಂಗ್, ಮೇ 24: ಚೀನಾ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ವರದಿ ಮಾಡಿದ್ದಕ್ಕೆ 2020ರಲ್ಲಿ ಬಂಧಿಸಲ್ಪಟ್ಟಿದ್ದ ಪತ್ರಕರ್ತೆ ಝಾಂಗ್ ಝಾನ್ ಅವರು ನಾಲ್ಕು ವರ್ಷದ ಸೆರೆವಾಸದ ಬಳಿಕ ಬಿಡುಗಡೆಗೊಂಡಿರುವುದಾಗಿ ವರದಿಯಾಗಿದೆ. ಆದರೆ, ಝಾಂಗ್ ಝಾನ್ ಇನ್ನೂ ಸರ್ಕಾರದ ಕಣ್ಗಾವಲಿನಲ್ಲಿದ್ದು, ಅವರ ಸ್ವಾತಂತ್ರ್ಯ ಸೀಮಿತವಾಗಿದೆ ಎಂದು ಮಾನವ ಹಕ್ಕುಗಳ ಸಂಸ್ಥೆ ಹೇಳಿದೆ.
2020ರ ಫೆಬ್ರವರಿಯಲ್ಲಿ ಕೋವಿಡ್-19 ಸೋಂಕಿನ ಹಾಟ್ ಸ್ಪಾಟ್ ಎನಿಸಿಕೊಂಡಿದ್ದ ಚೀನಾದ ವುಹಾನ್ ನಗರಕ್ಕೆ ತೆರಳಿದ್ದ ಪತ್ರಕರ್ತೆ ಝಾಂಗ್, ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ವರದಿ ಮಾಡಿದ್ದರು. ಅಲ್ಲಿನ ಅಧಿಕಾರಿಗಳನ್ನು ಪ್ರಶ್ನಿಸಿದ್ದರು. ಸರ್ಕಾರಿ ಅಧಿಕಾರಿಗಳೊಂದಿಗೆ ಜಗಳವಾಡಿ ಸಮಸ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಝಾಂಗ್ ಅವರನ್ನು 2020ರ ಮೇ ತಿಂಗಳಲ್ಲಿ ಬಂಧಿಸಿ 4 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಝಾಂಗ್ ಝಾನ್ ಅವರು 2024ರ ಮೇ 13ರಂದು ಜೈಲಿನಿಂದ ಬಿಡುಗಡೆಯಾಗಬೇಕಿತ್ತು. ಅವರು ಬಿಡುಗಡೆಯಾಗಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ, ಆಕೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿಲ್ಲ. ಹಾಗಾಗಿ, ಆಕೆ ಇನ್ನೂ ಬಂಧನಲ್ಲಿರಬಹುದಾ? ಎಂಬ ಕಳವಳವನ್ನು ಮಾನವ ಹಕ್ಕುಗಳ ಸಂಸ್ಥೆ ವ್ಯಕ್ತಪಡಿಸಿದೆ.
“ಝಾಂಗ್ ಅವರ ಸಣ್ಣ ವಿಡಿಯೋ ತುಣುಕೊಂಡು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಬುಧವಾರ ಹಂಚಿಕೊಂಡಿದೆ. ಅದರಲ್ಲಿ ಆಕೆ, “ಪೊಲೀಸರು ನನ್ನನ್ನು ಮೇ 13ರಂದು ಬೆಳಿಗ್ಗೆ ಐದು ಗಂಟೆಗೆ ಜೈಲಿನಿಂದ ಬಿಡುಗಡೆ ಮಾಡಿದ್ದಾರೆ. ಶಾಂಘೈನಲ್ಲಿರುವ ನನ್ನ ಅಣ್ಣನ ಮನೆಗೆ ಕಳುಹಿಸಿದ್ದಾರೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಮೃದುವಾದ ಧ್ವನಿಯಲ್ಲಿ ಹೇಳಿರುವುದು ಇದೆ. ಆ ವಿಡಿಯೋ ಆಧರಿಸಿ ಆಕೆ ಬಿಡುಗಡೆಯಾಗಿರುವುದನ್ನು ಖಚಿತಪಡಿಸಬಹುದು ಎಂದು ವರದಿಗಳು ತಿಳಿಸಿವೆ.
ಪತ್ರಕರ್ತೆ ಝಾಂಗ್ ಝಾನ್ ಅವರನ್ನು 2020ರಲ್ಲಿ ಬಂಧಿಸಿದಾಗ, ಅದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಪ್ರಶ್ನಿಸಿದ ಪತ್ರಕರ್ತೆಯನ್ನು ಬಂಧಿಸಿದ ಚೀನಾ ಸರ್ಕಾರದ ವಿರುದ್ದ ಸರ್ವಾಧಿಕಾರದ ಆರೋಪ ಕೇಳಿ ಬಂದಿತ್ತು. ಜಾಗತಿಕ ಸಂಸ್ಥೆಗಳು ಚೀನಾದ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು. ಅನೇಕ ದೇಶಗಳಿಂದ ಝಾಂಗ್ ಝಾನ್ ಅವರಿಗೆ ಬೆಂಬಲ ವ್ಯಕ್ತವಾಗಿತ್ತು.