ಕೋವಿಡ್ ಲಸಿಕೆ ಅಡ್ಡಪರಿಣಾಮ: ಮೋದಿ ಸೇರಿ 28 ಮಂದಿ ವಿರುದ್ಧ ದೂರು
ವಾರಾಣಸಿ, ಮೇ 14: ಕೋವಿಡ್ ಸಾಂಕ್ರಾಮಿಕ ರೋಗದಿಂದ ರಕ್ಷಿಸಲು ತಯಾರಿಸಲಾಗಿದ್ದ ಲಸಿಕೆಯಿಂಧ ಅಡ್ಡಪರಿಣಾಮಗಳ ಬಗ್ಗೆ ವಾರಾಣಸಿ ನ್ಯಾಯಾಲಯಕ್ಕೆ ಸೋಮವಾರ ಪ್ರಧಾನಿ ಮೋದಿ ಸೇರಿ 28 ಮಂದಿ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ವಕೀಲ ವಿಕಾಸ್ ಸಿಂಗ್ ಅವರು ತಮ್ಮ ವಕೀಲ ಗೋಪಾಲ್ ಕೃಷ್ಣ ಅವರ ಮೂಲಕ ಮಾನವ ಹಕ್ಕುಗಳ ಕಾಯ್ದೆ 1993ರ ಅಡಿ ನ್ಯಾಯಾಲಯಕ್ಕೆ ಈ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಮೇ. 23ಕ್ಕೆ ನಿಗದಿಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ, ಸೀರಮ್ ಇನ್‌ಸ್ಟಿಟ್ಯೂಟ್ , ಅದರ ಅಧ್ಯಕ್ಷರು, ಸಿಇಒ, ಆಸ್ಟ್ರೊಜೆನ್ ಕಂಪನಿ ಮತ್ತು ಅದರ ಅಧ್ಯಕ್ಷರು ಸೇರಿದಂತೆ ಎಲ್ಲಾ 28 ಮಂದಿ ಸೇರಿಕೊಂಡು ಯಾವುದೇ ಪರೀಕ್ಷೆಯಿಲ್ಲದೆ ಕೋವಿಶೀಲ್ಡ್ ಎಂಬ ಔಷಧವನ್ನು ತಯಾರಿಸಿ ಕೋವಿಡ್ ಲಸಿಕೆಯಾಗಿ ಜನರಿಗೆ ನೀಡಿದ್ದಾರೆ. ಅಲ್ಲದೇ, ಲಸಿಕೆ ಉತ್ಪಾದನಾ ಕಂಪನಿಯು ಗಳಿಸಿದ ಲಾಭಾಂಶವನ್ನು ದೇಣಿಗೆಯ ರೂಪದಲ್ಲಿ ಪ್ರಧಾನಿಗೆ ನೀಡಿದೆ. ಔಷಧವು ಅಡ್ಡಪರಿಣಾಮಗಳನ್ನು ಬೀರುತ್ತದೆ ಎಂದು ತಿಳಿದಿದ್ದರೂ ಇವರು ಜನರನ್ನು ಉದ್ದೇಶಪೂರ್ವಕವಾಗಿ ಸಾವಿನ ಕೂಪಕ್ಕೆ ತಳ್ಳಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಈ ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯ ಮತ್ತು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 28 ಆರೋಪಿಗಳನ್ನಾಗಿ ಕರೆಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಈ ಸಂದರ್ಭದಲ್ಲಿ ಈ ಔಷಧದ ದುಷ್ಪರಿಣಾಮದಿಂದ ಬಳಲುತ್ತಿರುವ ಎಲ್ಲ ಜನರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಗಿದೆ.