ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮ: ಪರಿಹಾರ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮ: ಪರಿಹಾರ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ನವದೆಹಲಿ, ಮೇ. 1: ಔಷಧೀಯ ಕಂಪನಿ ಅಸ್ಟ್ರಾಜೆನೆಕಾ ತನ್ನ ಕೋವಿಶೀಲ್ಡ್ ಲಸಿಕೆ ಅಪರೂಪದ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಒಪ್ಪಿಕೊಂಡ ಹಿನ್ನೆಲೆ, ವಕೀಲರೊಬ್ಬರು ಈ ಲಸಿಕೆಯ ಅಡ್ಡ ಪರಿಣಾಮಗಳು ಮತ್ತು ಅಪಾಯದ ಅಂಶಗಳನ್ನು ಪರೀಕ್ಷಿಸಲು ವೈದ್ಯಕೀಯ ತಜ್ಞರ ಸಮಿತಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಲಸಿಕೆಯಿಂದ ತೀವ್ರ ತರವಾದ ಅಡ್ಡ ಪರಿಣಾಮ ಎದುರಿಸಿದವರು ಮತ್ತು ಮರಣ ಹೊಂದಿದವರಿಗೆ ಪರಿಹಾರ ನೀಡುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.

ಕೋವಿಡ್ -19 ವಿರುದ್ಧದ AZD1222 ಲಸಿಕೆ (ಭಾರತದಲ್ಲಿ ಪರವಾನಗಿ ಪಡೆದ ಮತ್ತು ಕೋವಿಶೀಲ್ಡ್ ಎಂಬ ಹೆಸರಿನಲ್ಲಿ ಮಾರಾಟವಾದ ಲಸಿಕೆ) “ಅತ್ಯಂತ ಅಪರೂಪದ” ಪ್ರಕರಣಗಳಲ್ಲಿ ಕಡಿಮೆ ಪ್ಲೇಟ್‌ಲೆಟ್ ಕೌಂಟ್ ಮತ್ತು ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು ಎಂದು ಲಸಿಕೆ ತಯಾರಿಸಿದ ಕಂಪನಿ ಅಸ್ಟ್ರಾಜೆನೆಕಾ ಒಪ್ಪಿಕೊಂಡಿದೆ ಎಂದು ವಕೀಲ ವಿಶಾಲ್ ತಿವಾರಿ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ವಿತರಣೆಗೆ ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಪರವಾನಗಿ ನೀಡಲಾಗಿತ್ತು ಮತ್ತು ದೇಶದಲ್ಲಿ 175 ಕೋಟಿಗೂ ಹೆಚ್ಚು ಡೋಸ್ ಕೋವಿಶೀಲ್ಡ್ ಲಸಿಕೆ ವಿತರಿಸಲಾಗಿದೆ. ಕೋವಿಡ್ -19 ಬಳಿಕ ದೇಶದ ಜನರು ಹೃದಯಾಘಾತಕ್ಕೊಳಗಾಗುವುದು ಮತ್ತು ಹಠಾತ್ ಕುಸಿತು ಬಿದ್ದು ಸಾವನಪ್ಪುವುದು ಹೆಚ್ಚಳವಾಗಿದೆ ಎಂದು ವಕೀಲ ವಿಶಾಲ್ ತಿವಾರಿ ಹೇಳಿದ್ದಾರೆ.

ಕೋವಿಶೀಲ್ಡ್ ಲಸಿಕೆ ಸುರಕ್ಷಿತವಾಗಿದೆ ಎಂಬ ಭಾರತ ಸರ್ಕಾರದ ಭರವಸೆಯ ಮೇಲೆ ಜನರು ಅದನ್ನು ಪಡೆದುಕೊಂಡಿದ್ದಾರೆ ಎಂದು ವಕೀಲ ವಿಶಾಲ್ ತಿವಾರಿ ಅರ್ಜಿಯಲ್ಲಿ ಹೇಳಿದ್ದಾರೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಲಸಿಕೆ ಹಾನಿ ಪಾವತಿ ವ್ಯವಸ್ಥೆಯನ್ನು ಉಲ್ಲೇಖಿಸಿದ ವಕೀಲ, ಲಸಿಕೆಯಿಂದ ತೀವ್ರವಾಗಿ ಅಂಗವಿಕಲರಾದವರಿಗೆ ಪರಿಹಾರ ನೀಡಬೇಕೆಂದು ಕೋರಿದ್ದಾರೆ ಮತ್ತು ಭವಿಷ್ಯದಲ್ಲಿ ಜನರ ಆರೋಗ್ಯಕ್ಕೆ ಅಪಾಯವಾಗದಂತೆ ಕೇಂದ್ರ ಸರ್ಕಾರವು ಆದ್ಯತೆಯ ಮೇಲೆ ವಿಷಯವನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ. ವಕೀಲ ವಿಶಾಲ್ ತಿವಾರಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಮುಖವಾಗಿ ಈ ಕೆಳಗಿನ ಮನವಿಗಳನ್ನು ಮಾಡಿದ್ದಾರೆ.

1. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ (ಏಮ್ಸ್‌) ನ ವೈದ್ಯರನ್ನೊಳಗೊಂಡ ವೈದ್ಯಕೀಯ ತಜ್ಞರ ಸಮಿತಿ ರಚಿಸಬೇಕು. ಈ ಸಮಿತಿ ಮೂಲಕ ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮಗಳ ಬಗ್ಗೆ ಪರಿಶೀಲನೆ ನಡೆಸಬೇಕು.
2. ಕೋವಿಡ್ 19 ಸಮಯದಲ್ಲಿ ಲಸಿಕಾ ಅಭಿಯಾನದ ಪರಿಣಾಮವಾಗಿ ತೀವ್ರವಾಗಿ ಅಶಕ್ತಗೊಂಡ ನಾಗರಿಕರಿಗೆ ಲಸಿಕೆ ಹಾನಿ ಪಾವತಿ ವ್ಯವಸ್ಥೆ (ಪರಿಹಾರ ವಿತರಣೆ ವ್ಯವಸ್ಥೆ) ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು.
3. ಕೋವಿಡ್ 19 ಸಮಯದಲ್ಲಿ ನೀಡಲಾದ ಲಸಿಕೆಯ ಅಡ್ಡ ಪರಿಣಾಮಗಳಿಂದಾಗಿ ತೀವ್ರವಾಗಿ ಅಂಗವಿಕಲರಾದ ಅಥವಾ ಮರಣ ಹೊಂದಿದ ಜನರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು.

Previous Post
ಕೋವಿಶೀಲ್ಡ್ ವಿಷಯದಲ್ಲಿ ದೇಣಿಗೆಗಾಗಿ ಬಿಜೆಪಿ ಜನರ ಜೀವ ಪಣಕ್ಕಿಟ್ಟಿದೆ: ಅಖಿಲೇಶ್
Next Post
ದೆಹಲಿಯಲ್ಲಿ ಶಾಲೆಗಳಿಗೆ ಬಾಂಬ್ ಬೆದರಿಕೆ ರಾಷ್ಟ್ರರಾಜಧಾನಿಯಲ್ಲಿನ ಶಾಲೆಗಳಲ್ಲಿ ಆತಂಕದ ವಾತಾವರಣ ಭಯಪಡುವ ಅಗತ್ಯ ಇಲ್ಲ ಎಂದ ಕೇಂದ್ರ ಗೃಹ ಇಲಾಖೆ

Recent News