ಕ್ರಿಮಿನಲ್‌ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ ನೀಡಿದ ಸುಪ್ರೀಂ – ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೇಸ್ ನಾಯಕರಿಗೆ ತಾತ್ಕಲಿಕ ರಿಲೀಫ್

ಕ್ರಿಮಿನಲ್‌ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ ನೀಡಿದ ಸುಪ್ರೀಂ – ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೇಸ್ ನಾಯಕರಿಗೆ ತಾತ್ಕಲಿಕ ರಿಲೀಫ್

ನವದೆಹಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ಮತ್ತು ಖುದ್ದು ಹಾಜರಾಗಲು ಕೆಳಹಂತದ ನ್ಯಾಯಲಯ ನೀಡಿದ ಸಮನ್ಸ್‌ಗೆ ಸುಪ್ರೀಂಕೋರ್ಟ್ ಮಧ್ಯಂತರ ತಡೆ ನೀಡಿದೆ. ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಹೃಷಿಕೇಶ್ ನೇತೃತ್ವದ ದ್ವಿ ಸದಸ್ಯ ಪೀಠ ಪ್ರತಿವಾದಿಗಳಿಗೆ ಸಮನ್ಸ್ ಜಾರಿ ಮಾಡಿ, ಆರು ವಾರದಲ್ಲಿ ಉತ್ತರಿಸಲು ಸೂಚನೆ ನೀಡಿದೆ.

ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ 2022 ರಲ್ಲಿ ಅಂದು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೇಸ್ ನಾಯಕರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಹಿನ್ನಲೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಎಂ.ಬಿ‌. ಪಾಟೀಲ್, ರಾಮಲಿಂಗಾರೆಡ್ಡಿ, ರಣದೀಪ್ ಸಿಂಗ್ ಸುರ್ಜೇವಾಲ ವಿರುದ್ಧ ಕ್ರಿಮಿನಲ್‌ ಕೇಸ್ ದಾಖಲಾಗಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ನ್ಯಾಯಲಯ ಆರೋಪಿಗಳು ನ್ಯಾಯಲಯದ ಮುಂದೆ ವಿಚಾರಣೆಗೆ ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಆದೇಶಿಸಿತ್ತು. ಈ ಆದೇಶವನ್ನು ರದ್ದುಗೊಳಿಸಲು ಹೈಕೋರ್ಟ್ ಅರ್ಜಿ ಸಲ್ಲಿಸಲಾಗಿತ್ತು, ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್ ಅರ್ಜಿದಾರರಿಗೆ ತಲಾ 10,000 ವೆಚ್ಚ ಭರಿಸಲು ಆದೇಶಿಸಿತ್ತು. ಈ ಹಿನ್ನಲೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಮತ್ತು ಇತರೆ ನಾಯಕರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿ ಪ್ರಕರಣ ರದ್ದು ಕೋರಿದ್ದರು.

ಇಂದು ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆ ನಡೆಸಿತು. ಸಿಎಂ ಸಿದ್ದರಾಮಯ್ಯ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಮನುಸಿಂಘ್ವಿ, ಇದೊಂದು ರಾಜಕೀಯ ಪ್ರತಿಭಟನೆಯಾಗಿದ್ದು, ಕ್ರಿಮಿನಲ್ ಮೊಕದ್ದಮೆಯು ಸಂವಿಧಾನದ 19(1)(ಎ) ವಿಧಿಯಡಿ ಪ್ರತಿಭಟಿಸುವ ಹಕ್ಕಿನ ಉಲ್ಲಂಘನೆಯಾಗಿದೆ. ಯಾವುದೇ ಕ್ರಿಮಿನಲ್ ಉದ್ದೇಶವಿಲ್ಲದೆ ಶಾಂತಿಯುತವಾಗಿ ನಡೆಸಿದ ರಾಜಕೀಯ ಪ್ರತಿಭಟನೆಯನ್ನು ದಂಡದ ನಿಬಂಧನೆಗಳನ್ನು ಬಳಸಿ ತಡೆಯಲು ಸಾಧ್ಯವಿಲ್ಲ ಅವರು ಹೇಳಿದರು. ರಣದೀಪ್ ಸುರ್ಜೆವಾಲ ಪರವಾದ ಮಂಡಿಸಿದ ವಕೀಲ ಕಪಿಲ್ ಸಿಬಲ್
ಇಂತಹ ಬೆಳವಣಿಗೆ ತುಂಬಾ ಅಪಾಯಕಾರಿ, ಈ ನಿಯಮಗಳಿಂದ ಪ್ರತಿ ಸಾರ್ವಜನಿಕ ಪ್ರತಿಭಟನೆಯು ಕಾನೂನುಬಾಹಿರವಾಗಿರುತ್ತದೆ ಎಂದು ವಾದಿಸಿದರು.

ವಾದ ಆಲಿಸಿದ ಪೀಠ ಆರು ವಾರಗಳಲ್ಲಿ ಉತ್ತರಿಸುವಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತು. ಅಲ್ಲದೇ ಪ್ರಕರಣದ ಮುಂದಿನ ವಿಚಾರಣೆಗೆ ತಡೆ ನೀಡಿತು. ಇದೇ ವೇಳೆ ಅರ್ಜಿದಾರರಿಗೆ ತಲಾ 10,000 ರೂ.ಗಳ ವೆಚ್ಚವನ್ನು ವಿಧಿಸಿದ ಕರ್ನಾಟಕ ಹೈಕೋರ್ಟ್‌ನ ಆದೇಶಕ್ಕೂ ತಡೆ ನೀಡಿತು. ಸುಪ್ರೀಂಕೋರ್ಟ್ ಮಧ್ಯಂತರ ಆದೇಶದಿಂದಾಗಿ ಫೆ.26 ರಂದು ಕೋರ್ಟ್ ಹಾಜರಾಗಬೇಕಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ತಾತ್ಕಲಿಕ ರಿಲೀಫ್ ಸಿಕ್ಕಂತಾಗಿದೆ.

Previous Post
ಜನಸ್ಪಂದನ 2.0: 11 ದಿನದಲ್ಲಿ 4321 ಅರ್ಜಿ ಯಶಸ್ವೀ ವಿಲೇವಾರಿ, ಬಾಕಿ ಅರ್ಜಿಗಳ ಸಕಾರಾತ್ಮಕ ಕ್ಷಿಪ್ರ ವಿಲೇವಾರಿಗೆ ಅಧಿಕಾರಿಗಳಿಗೆ ಸೂಚನೆ
Next Post
ಕೇಂದ್ರ ಸರ್ಕಾರದ ಜೊತೆ ಚರ್ಚೆ, ಐದು ಬೆಳೆಗೆ ಬೆಂಬಲ ಬೆಲೆ ಖಾತರಿ ಕಾನೂನು ಪ್ರಸ್ತಾವನೆ

Recent News