ಗಗನಯಾನ ಕೈಗೊಳ್ಳುವ ಗಗನಯಾತ್ರಿಗಳ ಹೆಸರು ಬಹಿರಂಗಪಡಿಸಿದ ಮೋದಿ
ತಿರುವನಂತಪುರಂ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಐತಿಹಾಸಿಕ ಮಾನವ ಸಹಿತ ಗಗನಯಾನದ ಭಾಗವಾಗಿ ಕಡಿಮೆ ಭೂಮಿಯ ಕಕ್ಷೆಗೆ ಹಾರುವ ನಾಲ್ಕು ಗಗನಯಾತ್ರಿಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರಕಟಿಸಿದ್ದಾರೆ. ಕೇರಳದ ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಈ ಘೋಷಣೆ ಮಾಡಿದ್ದಾರೆ. ಭಾರತಕ್ಕೆ ಮಾನವ ಸಹಿತ ಮೊದಲ ಗಗನಯಾನ ಇದಾಗಲಿದೆ.
ಗ್ರೂಪ್ ಕ್ಯಾಪ್ಟನ್ಗಳಾದ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಂಗದ್ ಪ್ರತಾಪ್, ಅಜಿತ್ ಕೃಷ್ಣನ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶಕ್ಕೆ ಭಾರತದ ಮೊದಲ ಮಾನವ ಸಹಿತ ಗಗನಯಾನ ಮಿಷನ್ನಲ್ಲಿ ಗಗನಯಾತ್ರಿಗಳಾಗಿ ಆಯ್ಕೆಯಾಗಿದ್ದಾರೆ. ಇವರೆಲ್ಲರೂ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಮತ್ತು ಗ್ರೂಪ್ ಕ್ಯಾಪ್ಟನ್ಗಳು. ಪರೀಕ್ಷಾ ಪೈಲಟ್ಗಳಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಏನಾದರೂ ತಪ್ಪಾದ ಸಂದರ್ಭಗಳಲ್ಲಿ ತ್ವರಿತವಾಗಿ ಪ್ರತಿಕ್ರಿಯಿಸಲು ಅವರು ಈಗಾಗಲೇ ತರಬೇತಿ ಪಡೆದಿದ್ದಾರೆ.
ಬೆಂಗಳೂರಿನಲ್ಲಿರುವ ಬಾಹ್ಯಾಕಾಶ ಸಂಸ್ಥೆಯ ತರಬೇತಿ ಕೇಂದ್ರದಲ್ಲಿ ಈ ನಾಲ್ವರೂ ಗಗನಯಾತ್ರಿಗಳು ತರಬೇತಿ ಪಡೆಯುತ್ತಿದ್ದಾರೆ. ಗಗನಯಾತ್ರಿಗಳ ಆಯ್ಕೆಯು ಐಎಎಫ್ನ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ನಲ್ಲಿ ನಡೆಯಿತು. ISRO ಮತ್ತು Glavkosmos (ರಷ್ಯಾದ ಬಾಹ್ಯಾಕಾಶ ಸಂಸ್ಥೆ Roscosmos ನ ಅಂಗಸಂಸ್ಥೆ) ಜೂನ್ 2019 ರಲ್ಲಿ ನಾಲ್ಕು ಗಗನಯಾತ್ರಿಗಳ ತರಬೇತಿಗಾಗಿ ತಿಳುವಳಿಕೆಯ ಜ್ಞಾಪಕ ಪತ್ರಕ್ಕೆ ಸಹಿ ಹಾಕಿದ್ದವು.
ನಾಲ್ಕು ಗಗನಯಾತ್ರಿಗಳು ರಷ್ಯಾದ ಯೂರಿ ಗಗಾರಿನ್ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ 13 ತಿಂಗಳು ತರಬೇತಿ ಪಡೆದಿದ್ದಾರೆ (2020 ರ ಫೆಬ್ರವರಿ ಯಿಂದ 2021 ರ ಮಾರ್ಚ್ ತಿಂಗಳ ವರೆಗೆ) 2024 ರ ಅಂತ್ಯದ ವೇಳೆಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಭಾರತೀಯ ಗಗನಯಾತ್ರಿಗಳಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತರಬೇತಿ ನೀಡಲಿದೆ ಎಂದು ಸಂಸ್ಥೆಯ ನಿರ್ವಾಹಕ ಬಿಲ್ ನೆಲ್ಸನ್ 2023 ರಲ್ಲಿ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದ್ದರು.
ಚಂದ್ರಯಾನ-3 ಯಶಸ್ಸಿನ ನಂತರ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಸಾಧನೆಗೆ ಭಾರತ ಸಜ್ಜಾಗಿದೆ. ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಕಲ ಸಿದ್ಧತೆ ನಡೆಸಿದೆ. 400 ಕಿಮೀ ಎತ್ತರದಲ್ಲಿರುವ ಭೂ ಕೆಳ ಕಕ್ಷೆಗೆ ಮಾನವರನ್ನು ಕಳುಹಿಸಲಾಗುವುದು. ಮೂರು ದಿನಗಳ ಕಾಲ ಅಂತರಿಕ್ಷ ಯಾನ ನಡೆಸಿದ ನಂತರ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವುದು ಗಗನಯಾನ ಮಿಷನ್ನ ಗುರಿಯಾಗಿದೆ.