ಗಾಂಧಿನಗರದಿಂದ ನಾಮಪತ್ರ ಸಲ್ಲಿಸಿದ ಗೃಹ ಸಚಿವ ಅಮಿತ್ ಶಾ
ಗಾಂಧಿನಗರ : ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತ್ ನ ಗಾಂಧಿನಗರದಿಂದ ಶುಕ್ರವಾರ ನಾಮಪತ್ರ ಸಲ್ಲಿಸಿದರು. ನಗರದ ಪ್ರಮುಖ ಭಾಗದಲ್ಲಿ ರೋಡ್ ಶೋ ನಡೆಸಿದ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಜಯ್ ಮುಹೂರ್ತ ಎಂದು ಪರಿಗಣಿಸಲಾದ 12:39 ಕ್ಕೆ ಸರಿಯಾಗಿ ನಾಮಪತ್ರ ಸಲ್ಲಿಸಿದರು. ಸಿಎಂ ಭೂಪೇಂದ್ರ ಯಾದವ್ ಈ ವೇಳೆ ಅಮಿತ್ ಶಾ ಅವರಿಗೆ ಸಾಥ್ ನೀಡಿದರು.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅವರು ಬೂತ್ ಕಾರ್ಯಕರ್ತನಿಂದ ಸಂಸತ್ ಸದಸ್ಯರಾದ ತಮ್ಮ ರಾಜಕೀಯ ಪ್ರಯಾಣವನ್ನು ನೆನಪಿಸಿಕೊಂಡರು. ಎಲ್‌ಕೆ ಅಡ್ವಾಣಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರಂತಹ ಬಿಜೆಪಿ ದಿಗ್ಗಜರು ಪ್ರತಿನಿಧಿಸಿದ ಕ್ಷೇತ್ರದಲ್ಲಿ ತಾವು ಸ್ಪರ್ಧಿಸಿತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕಳೆದ ಐದು ವರ್ಷಗಳಲ್ಲಿ ಗಾಂಧಿನಗರದಲ್ಲಿ 22,000 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ. ಈ ಕ್ಷೇತ್ರವನ್ನು ಎಲ್‌ಕೆ ಅಡ್ವಾಣಿ, ಅಟಲ್‌ಜಿ ಪ್ರತಿನಿಧಿಸಿದ್ದು ಮತ್ತು ನರೇಂದ್ರ ಮೋದಿ ಅವರೇ ಮತದಾರರಾಗಿರುವ ಕ್ಷೇತ್ರವನ್ನು ಪ್ರತಿನಿಧಿಸಿರುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ. ನಾನು 30 ವರ್ಷಗಳಿಂದ ಈ ಕ್ಷೇತ್ರದಿಂದ ಶಾಸಕ ಮತ್ತು ಸಂಸದನಾಗಿದ್ದೇನೆ. ಈ ಭಾಗದ ಜನರು ನನಗೆ ಅಪಾರ ಪ್ರೀತಿಯನ್ನು ನೀಡಿದ್ದಾರೆ ಎಂದು ಅವರು ಹೇಳಿದರು.
ಈ ಚುನಾವಣೆಯಲ್ಲಿ 400 ಗಡಿ ದಾಟುವ ಮೂಲಕ ನರೇಂದ್ರ ಮೋದಿಯನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ಇಡೀ ದೇಶವು ಉತ್ಸುಕವಾಗಿದೆ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶವು ಇಡೀ ವಿಶ್ವದಲ್ಲಿ ಕೀರ್ತಿ ಗಳಿಸಿದೆ, ದೇಶದ ಜನರು ನೀಡಿದ 10 ವರ್ಷಗಳು ಯುಪಿಎ ಸರ್ಕಾರ ಮಾಡಿದ ಗುಂಡಿಗಳನ್ನು ತುಂಬಲು ಕಳೆದವು ಈ ಮುಂದಿನ 5 ವರ್ಷಗಳು ವಿಕ್ಷಸಿತ್ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕುವ ವರ್ಷಗಳು, ಹೀಗಾಗೀ ಬಿಜೆಪಿಗೆ ಮತದಾನ ಮಾಡಿ 400 ಸೀಟು ದಾಟುವ ಗುರಿ ತಲುಪಿಸುವಂತೆ ಅಮಿತ್ ಶಾ ಮನವಿ ಮಾಡಿದರು.